ADVERTISEMENT

ಚುರುಮುರಿ | ಕನ್ನಡ ಸಂಭ್ರಮ

ಕೆ.ವಿ.ರಾಜಲಕ್ಷ್ಮಿ
Published 3 ನವೆಂಬರ್ 2023, 19:04 IST
Last Updated 3 ನವೆಂಬರ್ 2023, 19:04 IST
   

‘ಗಂಟೆ ಏಳಾದರೂ ಮಕ್ಕಳು ಏಳೋಲ್ಲ, ಏಳೂಮುಕ್ಕಾಲಿಗೆ ಸ್ಕೂಲ್ ವ್ಯಾನ್ ಬರುತ್ತೆ, ಕಣ್ಣುಜ್ಜಿಕೊಂಡೇ ಬರಿಹೊಟ್ಟೇಲಿ ಹೋಗುತ್ವೆ. ಆದರೆ ಎಬ್ಬಿಸೋ ಸಾಹಸ ಮಾಡೋದುಂಟೆ? ಮನೆ ಎರಡಾಗುತ್ತೆ ಅಂತ ಬೇಸರಿಸಿಕೊಳ್ತಿದ್ಲು ನನ್ನ ಗೆಳತಿ ಪಾತು’ ನನ್ನವಳ ಸುಪ್ರಭಾತ.

‘ಹ್ಞೂಂ, ಇನ್ನೇನು ಮತ್ತೆ? ನಮ್ಮ ಕಾಲದ ಹಾಗೆ ಶಿಸ್ತೇ ಸಂಯಮವೇ? ಏನಾದ್ರೂ ಹೇಳೋಕ್ಕೆ ಹೋದ್ರೆ ನಮ್ಮ ಸ್ಟ್ರೆಸ್ ನಿಮಗೆ ಅರ್ಥವಾಗೋಲ್ಲ ಹರ್ಟ್ ಮಾಡ್ಬೇಡಿ ಅಂತ ನಮ್ಮನ್ನೇ ಗದರಿಸುತ್ವೆ’ ಅತ್ತೆಯೂ ದನಿಗೂಡಿಸಿದರು.

‘ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಠ ಕಲಿಯೋದು, ಕಲಿಸೋದು ಎರಡೂ ಸವಾಲೇ!’ ನಾನೆಂದೆ.

ADVERTISEMENT

‘ಅದೇನು ಕಲಿಯುತ್ವೆ? 68ನೇ ರಾಜ್ಯೋತ್ಸವ, ಕರ್ನಾಟಕ ಅಂತ ಮರುನಾಮಕರಣದ ಸುವರ್ಣ ಸಂಭ್ರಮ ಅಂತ ಕುಣಿದದ್ದೇ ಆಯಿತು. ಮೊನ್ನೆ ಪಕ್ಕದ್ಮನೆ ಹುಡುಗ ಒಳ್ಳೇ ಪೇಂಟಿಂಗ್ ತಂದಿದ್ದ. ಇದನ್ನು ಮಾಡಿದ್ದು ನಿಮ್ಮ ತಾಯಿನಾ ಅಂತ ಕೇಳಿದ್ರೆ, ಅಲ್ಲ ಮಮ್ಮಿ ಅನ್ನೋದೇ?’

‘ನಿಮ್ಮ ಅಜ್ಜಿ ಮನೇಲಿದ್ದಾರಾ’ ಅಂದ್ರೆ ‘ಹಾಗೆ ಯಾರೂ ಇಲ್ಲ, ಗ್ರ್ಯಾನಿ ಇದ್ದಾರೆ’ ಅಂತಾನೆ ಪೋರ! ‘ಸಿಂಹ’ ಅಂತ ಕನ್ನಡದಲ್ಲಿ ಬರೆಯೋಕ್ಕೆ ಹೇಳಿದರೆ ‘ಸಿಮ್ಮ’ ಅಂತ ಬರೀತಾನೆ. ನೋಡಿದರೆ ಐದನೇ ತರಗತಿಯಲ್ಲಿದ್ದಾನೆ! ಕನ್ನಡದಲ್ಲಿ ಪಾಸ್ ಮಾರ್ಕ್ ಬಂದರೆ ಸಾಕು ಅಂತಾನೆ. ಪರಭಾಷಾ ವ್ಯಾಮೋಹದಲ್ಲಿ, ನಮ್ಮ ಕನ್ನಡದ ಅವಸ್ಥೆ ನೋಡು ಹೇಗಿದೆ? ಎಳವೆಯಲ್ಲಿ ಸರಿಪಡಿಸದಿದ್ದರೆ ಮುಂದೆ ಹೇಗೆ?’ ಅತ್ತೆಯ ಕಳಕಳಿ.

‘ವಾರಕ್ಕೆ ಎಪ್ಪತ್ತು ಗಂಟೆ ದುಡಿದರೆ ದೇಶ ಮುನ್ನಡೆಯುತ್ತೆ ಅಂತ ಕೂಗು ಎದ್ದಿದೆ’ ಕಂಠಿ ಬಂದವನೇ ಕಣ್ಣುಜ್ಜಿಕೊಂಡ. ‘ನಾವು 24/7 ದುಡೀತಾನೆ ಇರ್ತೀವಲ್ಲ, ನಮ್ಮನ್ಯಾರೂ ಗಮನಿ ಸೋಲ್ಲ’ ನನ್ನವಳ ಮಾತಿಗೆ ನೆತ್ತಿ ಹತ್ತಿ, ಕೆಮ್ಮಿದೆ.

‘ಈ ಬಾರಿ ನಮ್ಮ ಆಫೀಸಿನ ರಾಜ್ಯೋತ್ಸವದಲ್ಲಿ ‘ಉತ್ತಮ ಗೃಹಿಣಿ’ ಪ್ರಶಸ್ತಿ ಕೊಡ್ತಿದ್ದಾರೆ. ನಿಮ್ಮ ಪ್ರೊಫೈಲ್ ಕೊಟ್ಟರೆ ನಿಮ್ಮನ್ನೂ ಶಿಫಾರಸು ಮಾಡಬಹುದು’ ಕಂಠಿಯ ಪ್ರಸ್ತಾಪ.

‘ಪ್ರೊಫೈಲ್ ನಾನು ರೆಡಿ ಮಾಡ್ತೀನಿ’ ಅಂದೆ.

‘ತರಕಾರಿ ಉಪ್ಪಿಟ್ಟು ಆಗ್ತಿದೆ, ಐದೇ ನಿಮಿಷ’ ಅಡುಗೆಮನೆಯಿಂದ ಪರಿಮಳ ಬರತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.