ADVERTISEMENT

ಚುರುಮುರಿ: ಲಕ್ಷ್ಮಿ ಕಟಾಕ್ಷ

ಸುಮಂಗಲಾ
Published 24 ಫೆಬ್ರುವರಿ 2025, 0:02 IST
Last Updated 24 ಫೆಬ್ರುವರಿ 2025, 0:02 IST
.
.   

‘ಮೂರು ಲಕ್ಷ ಕೋಟಿ ರೂಪಾಯಿ ಅಂದರೆ 3ರ ಮುಂದೆ ಎಷ್ಟ್‌ ಸೊನ್ನೆ ಬರತೈತಿ ಹೇಳು ನೋಡಾಮು’ ಎಂದು ಬೆಕ್ಕಣ್ಣ ಸವಾಲು ಎಸೆದಾಗ ನಿಜಕ್ಕೂ ನಾನು ಹಾರಿಬಿದ್ದೆ.

ಎಣಿಸತೊಡಗಿದೆ, ಹತ್ತೂ ಬೆರಳುಗಳು ಸಾಲಲಿಲ್ಲ. ಎಷ್ಟು ಸೊನ್ನೆ ಎಂದು ಮೆತ್ತಗೆ ಚಾಟ್‌ಜಿಪಿಟಿಗೆ ಕೇಳಿದೆ. ಚಾಟ್‌ಜಿಪಿಟಿ ಕ್ಷಣಾರ್ಧದಲ್ಲಿ ಹೇಳಿತು, ‘ಮೂರು ಲಕ್ಷ ಕೋಟಿ ರೂಪಾಯಿ ಅಂದರೆ 3ರ ಮುಂದೆ 12 ಸೊನ್ನೆಗಳು’ ಎಂದು.

‘ಲೆಕ್ಕ ಮಾಡೂದು ಕಲಿ’ ಎಂದು ತಲೆ ಮೇಲೆ ಮೊಟಕಿದ ಬೆಕ್ಕಣ್ಣ ‘ನೋಡು, ಮಹಾ ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿಗೂ ಹೆಚ್ಚು ಹಣ ಬಂದೈತಂತೆ. ಮಹಾ ಕುಂಭಕ್ಕೆ ಲಕ್ಷ್ಮಿದೇವಿಯ ಕೃಪಾಕಟಾಕ್ಷವೂ ಛಲೋ ಸಿಕ್ಕೈತಿ’ ಎಂದು ಹೊಗಳಿತು.

ADVERTISEMENT

‘ಮಹಾ ಕುಂಭ ಆಯೋಜನೆ ಮಾಡಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ಖರ್ಚಾಗೈತಂತೆ. ಸುಮಾರು 50  ಕೋಟಿ ಜನ ಕುಂಭಮೇಳಕ್ಕೆ ಹೋಗ್ಯಾರೆ, ಗಂಗೆ ವಳಗೆ ಮುಳುಗು ಹಾಕ್ಯಾರೆ. ಈಗ ಗಂಗಮ್ಮನ ಒಡಲು ಸ್ವಚ್ಛಪಡಿಸಾಕೆ ಎಷ್ಟ್‌ ರೊಕ್ಕ ಖರ್ಚಾಗಬಹುದು?’ ಎಂದೆ.

‘ನೀ ಸುಮ್‌ ಸುಮ್ನೆ ಎಲ್ಲಾದ್ರಾಗೆ ಕೊಂಕು ತೆಗೀಬ್ಯಾಡ. ಆರ್ಥಿಕತೆಗೆ ರೊಕ್ಕ ಬಂದೈತಿ ಅಂದರೆ ಸರ್ಕಾರ ಮಾತ್ರವಲ್ಲ, ಸಣ್ಣ ಪುಟ್ಟ ವ್ಯಾಪಾರಿಗಳು, ಒಟ್ಟಾರೆ ಅಲ್ಲಿನ ಮಂದಿ ಆದಾಯ ಗಳಿಸ್ಯಾರೆ. ಎಲ್ಲರಿಗೂ ಲಕ್ಷ್ಮಿಕಟಾಕ್ಷ ಸಿಕ್ಕೈತಿ’ ಎಂದಿತು.

‘ಆದ್ರೂ ಗಂಗೆಯ ನೀರನ್ನು ಈಗ ಸ್ವಚ್ಛಪಡಿ ಸಲೇಬೇಕಲ್ಲ! ಅದಕ್ಕೆ ರೊಕ್ಕ ಬ್ಯಾಡೇನು? ಅಲ್ಲಿಯ ನೀರು ಸ್ನಾನಕ್ಕೂ ಯೋಗ್ಯ ಇಲ್ಲಂತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿನೇ ಹೇಳೈತಿ’ ಎಂದೆ.

‘ಕೊಳೆ ನೀರು ಹರಿದು ಹೋಗತೈತಿ... ಗಂಗೋತ್ರಿಯಿಂದ ಸ್ವಚ್ಛ ನೀರು ಬಂದು ಗಂಗೆಗೆ ಸೇರತಾನೆ ಇರತೈತಿ. ಹರಿಯೋ ನದಿಗಳು ತಮ್ಮಷ್ಟಕ್ಕೇ ಸ್ವಚ್ಛ ಆಗತಾವೆ’ ಎಂದು ಜೋರುದನಿಯಲ್ಲಿ ವಾದಿಸಿದ ಬೆಕ್ಕಣ್ಣ ನನ್ನ ಬಾಯಿ ಮುಚ್ಚಿಸಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.