ADVERTISEMENT

ಚುರುಮುರಿ: ಮುಕ್ತ ಮುಕ್ತ...

ಮಣ್ಣೆ ರಾಜು
Published 15 ಮಾರ್ಚ್ 2022, 18:45 IST
Last Updated 15 ಮಾರ್ಚ್ 2022, 18:45 IST
.
.   

‘ಬುದ್ಧ, ಮಹಾವೀರರೇ ಮತ್ತೆ ಹುಟ್ಟಿ ಬಂದು ಶಾಂತಿ ಬೋಧಿಸಿ ಸೌಹಾರ್ದದ ಬುದ್ಧಿ ಹೇಳಿದರೂ ಯುದ್ಧಬದ್ಧರು ಬುದ್ಧಿ ಕಲಿಯಲಾರರು...’ ಟಿ.ವಿ. ನ್ಯೂಸ್ ಆಫ್ ಮಾಡಿ ಶಂಕ್ರಿ ನಿಟ್ಟುಸಿರುಬಿಟ್ಟ.

‘ಯಾರೇ ಬುದ್ಧಿ ಹೇಳಿದರೂ ಅವರು ಯುದ್ಧಬುದ್ಧಿ ಬಿಡುವುದಿಲ್ಲ’ ಸುಮಿಗೂ ಬೇಸರ.

‘ನಮ್ಮ ರಾಜಕೀಯ ನಾಯಕರೂ ಎಲೆಕ್ಷನ್ ಯುದ್ಧಕ್ಕೆ ಶಸ್ತ್ರ, ವಸ್ತ್ರ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಆ ಪಕ್ಷವನ್ನು ಮುಕ್ತ ಮಾಡುತ್ತೇವೆ, ಈ ಪಕ್ಷಕ್ಕೆ ಮುಕ್ತಿ ನೀಡುತ್ತೇವೆ ಎಂದು ಶಂಖ ಊದುತ್ತಾ ತಾಲಿಮು ಶುರು ಮಾಡಿದ್ದಾರೆ’.

ADVERTISEMENT

‘ಬೆಲೆ ಏರಿಕೆ, ತೆರಿಗೆ ಹೇರಿಕೆಯ ಸಂಕಷ್ಟದಿಂದ ಜನರನ್ನು ಮುಕ್ತ ಮಾಡ್ತೀವಿ, ಲಂಚ ಮುಕ್ತ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ ಎಂದು ಯಾರಾದರೂ ಹೇಳಿದ್ದಾರಾ?’

‘ಇಲ್ಲ, ಆದರೆ ರಾಜಕಾರಣಿಗಳು ಹಣ ತಿನ್ನುವುದನ್ನು ಬಿಟ್ಟರೆ ಜನರು ಸಮಸ್ಯೆ, ಸಂಕಟದಿಂದ ಮುಕ್ತರಾಗುತ್ತಾರೆ ಎಂದೊಬ್ಬರು ಹೇಳಿದ್ದಾರೆ’.

‘ಹಣ ತಿನ್ನೋದು ಆರೋಗ್ಯಕ್ಕೆ ಹಾನಿಕರ ಅಲ್ವಾ? ಮಿತಿಮೀರಿ ತಿಂದರೆ ನಮಗೆ ಅನ್ನವೇ ಅರಗುವುದಿಲ್ಲ’.

‘ನಮಗೆ ಅನ್ನ ಭಾಗ್ಯವೇ ಸೌಭಾಗ್ಯ, ಹಣ ತಿನ್ನೋ ಭಾಗ್ಯವಿಲ್ಲ. ನಮ್ಮದಿರಲಿ, ಭೂಮಿ, ಬಂಡೆ, ಮರಳು, ಕಾಡನ್ನೂ ಬಿಡದೆ ತಿನ್ನುವ ತಿನ್ನಿಂಗಿಲಗಳೂ ಇದ್ದಾರಂತೆ’.

‘ಇವನ್ನೆಲ್ಲಾ ತಿಂದು ಜೀರ್ಣಿಸಿಕೊಳ್ಳುತ್ತಾರೆಂದರೆ ಅವರು ಮಹಾನ್ ಜೀರ್ಣೋದ್ಧಾರಕರು!...’

‘ಹೌದು, ನಮ್ಮ ಉದ್ಧಾರ, ಅಭಿವೃದ್ಧಿ ಆಗಬೇಕಾದರೆ ಬೆಟ್ಟಗುಡ್ಡ ಒಡೆದು ರೋಡ್ ಮಾಡಬೇಕು, ಕಾಡು ಕಡಿದು ಕಟ್ಟಡ ಕಟ್ಟಬೇಕು. ಹಳ್ಳದ ಮರಳು ತೆಗೆದು ಬರಡು ಮಾಡಬೇಕು’.

‘ಅಭಿವೃದ್ಧಿ ಅಂತ ಬೆಟ್ಟಗುಡ್ಡ, ನೆಲಜಲ, ಕಾಡುಮೇಡು ಎಲ್ಲವನ್ನೂ ಮುಕ್ಕುತ್ತಾ ಹೋದರೆ ಮುಂದೊಂದು ದಿನ ಗಾಳಿ, ನೀರು, ಬದುಕು ಇಲ್ಲದೆ ನಮ್ಮೊಂದಿಗೆ ಸಕಲ ಜೀವಸಂಕುಲವೂ ಈ ಭೂಮಿಯಿಂದ ಮುಕ್ತ ಆಗಿಬಿಡುತ್ತದೆ!...’ ಸುಮಿ ಆತಂಕಗೊಂಡಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.