ADVERTISEMENT

ಚುರುಮುರಿ | ನಿದ್ದೆ- ಉದ್ಯೋಗ!

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 21:25 IST
Last Updated 18 ಆಗಸ್ಟ್ 2022, 21:25 IST
1
1   

‘ರೀ... ರೀ... ಬೆಡ್ ಕಾಫಿ ರೆಡಿ. ಏಳಿ, ಏಳ್ ಗಂಟೆ ಆಯಿತು’.

‘ಅಯ್ಯೋ ನಿದ್ದೆ ಮಾಡೋಕೂ ಬಿಡಲ್ವಲ್ಲೇ? ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನ ಟ್ವಿಟರ್‌ಗಳಿಂದ ತಿವಿಯೋ ಹಾಗೆ ತಿವೀತಿಯಲ್ಲೇ?’

‘ನೋಡ್ರಿ ಇಲ್ಲಿ, ನಿಮಗೆ ಖುಷಿ ಆಗೋ ಸುದ್ದಿ, ಇವತ್ತು ನಿಮಗಿಂತ ಮೊದ್ಲು ನಾನೇ ಪೇಪರ್ ಓದಿ ನಿಮಗೆ ಸುದ್ದಿ ಕೊಡ್ತಾಯಿದೀನಿ’.

ADVERTISEMENT

‘ಬಿಹಾರದಲ್ಲಿ ಜೋಡಿ ಜೇಡಿ ಪಕ್ಷಗಳು ಇನ್ನೊಂದಷ್ಟು ಪಕ್ಷಗಳನ್ನ ಸೇರಿಸಿಕೊಂಡು ಹೊಸ ಸರ್ಕಾರ ಮಾಡಿದ ಅವರ ಖುಷಿಗಿಂತಲೂ ಜಾಸ್ತಿ ಖುಷಿ ಅಂತೀಯಾ?!’

‘ಯಾವಾಗ್ಲೂ ರಾಜಕಾರಣಾನೇ, ಬೇರೆ ಸುದ್ದಿ ನಿಮಗೆ ಹಿಡಿಸೋದೇ ಇಲ್ವಾ? ಸ್ವಾರಸ್ಯ-ಸುದ್ದಿ, ವಿನೋದ-ವಾರ್ತೆ, ಕ್ರೀಡೆ, ಕಾರ್ಟೂನು ಈ ಕಡೆನೂ ಸ್ವಲ್ಪ ಗಮನ ಇರ್‍ಲಿ’.

‘ಕಾಮನ್‌ವೆಲ್ತ್‌ 22ರಲ್ಲಿ ನಮಗೆ ಬಂದಿರೊ 22 ಚಿನ್ನದ ಪದಕಗಳ ವಿಚಾರ ತಾನೇ ಮುದ್ದಿನ ಸುವರ್ಣ ಹೇಳೋಕೆ ಇಷ್ಟಪಡ್ತಿರೋದು?’

‘ನಿಮ್ಮ ಹತ್ರ ಚಿನ್ನದ ಸರ ಕೊಡ್ಸಿಕೊಳ್ಳೋದು ಕನಸಿನ ಮಾತು. ನಾನು ನಿದ್ದೆ ವಿಚಾರ ಮಾತಾಡ್ತಾಯಿದೀನಿ. ಅಮೆರಿಕದಲ್ಲಿ ಒಂದು ಬೆಡ್ ಮಾರೋ ಕಂಪನಿಗೆ ಚೆನ್ನಾಗಿ ನಿದ್ದೆ ಮಾಡೋ ಕೆಲಸಗಾರರು ಬೇಕಾಗಿದಾರಂತೆ. ಕೈತುಂಬಾ ಡಾಲರ್‌ಗಟ್ಟಲೆ ಸಂಬಳ’.

‘ಆಫೀಸಲ್ಲಿ ನಿದ್ದೆ ಮಾಡೋ ಅಭ್ಯಾಸ ಇರೋರಿಗೆಲ್ಲ ಇಂಥ ಅವಕಾಶಗಳು ಕರೆದು ಹಾಸಿಗೆ ಹಾಸಿ ಕೊಟ್ಟಂಗಲ್ವ?!’

‘ಹೇಗಿದ್ದರೂ ನೀವೂ ಕುಂಭಕರ್ಣನ ವಂಶ ದವರೇ ಅಲ್ಲವೇ ನಿದ್ದೆ ವಿಚಾರದಲ್ಲಿ? ಯಾಕೆ ಈ ಕೆಲಸದ ಮೇಲೆ ಒಂದು ಕಣ್ಣು ಹಾಕಬಾರದು? ನ್ಯೂಯಾರ್ಕಿನಲ್ಲಿ ನ್ಯೂ ದೇಶ, ನ್ಯೂ ಸಿಟಿ, ನ್ಯೂ ಜಾಬು, ನ್ಯೂ ಕಾರು, ನ್ಯೂ ಬಂಗ್ಲೆ...’

‘ಏನು? ನೀನೂ ಪಕ್ಷಾಂತರ... ಅಲ್ಲಲ್ಲ... ವಿಷಯಾಂತರ ಮಾಡ್ಬಿಟ್ಟೆಯಲ್ಲ?’

‘ಗಂಡಾಂತರ’ ಎದುರಾದಾಗ ಆಪದ್ಧರ್ಮಗಳು ಇದ್ದೇ ಇವೆಯಲ್ಲ?’

ಟ್ರಣ್... ಕಾಲಿಂಗ್ ಬೆಲ್ ಸದ್ದು. ‘ಬೆಲ್ ಮಾಡ್ತಾನೆ ಇದೀನಿ, ಅಮ್ಮಾವ್ರು ಊರಲಿಲ್ಲಾಂತ ನಿದ್ದೆ ಮಾಡ್ಬಿಟ್ರಾ ಸಾರ್?’ ಹಾಲಪ್ಪನ ಗೊಣಗಾಟ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.