ADVERTISEMENT

ಚುರುಮುರಿ| ಸಾಮ್ಯಾಜಿಕ್ ಅಂತರ

ಲಿಂಗರಾಜು ಡಿ.ಎಸ್
Published 18 ಮೇ 2020, 21:57 IST
Last Updated 18 ಮೇ 2020, 21:57 IST
ಚುರುಮುರಿ
ಚುರುಮುರಿ   

ತುರೇಮಣೆ ಮಕ್ಕೆ ಲಂಗೋಟಿ ಕಟ್ಕಂಡು ಆಚೆಗೆ ಕಡೆದಿದ್ದರು. ನಾನು ‘ಸಾ ಸಾ’ ಅಂತ ಕೂಗಿಕ್ಯಂಡುದ್ದೇ ಬಂತು, ಆವಯ್ಯ ತಿರುಗಿ ನೋಡನೇ ಇಲ್ಲ. ನಾನು ಹಿಂದುಗಟ್ಟಿ ಹೋದೆ. ಅದ್ಯಾಕೋ ಅವರ ಎದುರಿಗೆ ಬಂದೋರೆಲ್ಲಾ ಸರಕ್ ಅಂತ ಮಕ ತಿರುಗಿಕ್ಯಂಡು ದೂರ ಹೋಯ್ತಾ ಇದ್ದರು. ತುರೇಮಣೆ ತರಕಾರಿ ಅಂಗಡಿ ತಾವ್ಕೋಗಿ ‘ಅವ್ವ ಐದು ಕೇಜಿ ಈರುಳ್ಳಿ, ಒಂದು ಕೇಜಿ ಕ್ಯಾರೆಟ್ ಕೊಡವ್ವ’ ಅಂದ್ರು. ಇವರು ಹತ್ರ ಹೋಯ್ತಿದ್ದಂಗೇ ಸುತ್ತಲೂ ಇತ್ತ ಜನೆಲ್ಲಾ ಮೂಗು ಮುಚ್ಚಿಕ್ಯಂಡು ಪರಾರಿ ಆದ್ರು.

ತಾಯವ್ವನೂ ಮುಖ ಸಿಂಡರಿಸ್ಕ್ಯಂಡು ‘ಆಯ್ತು ಕಣ ಸ್ವಮೇ, ಬಿರ್‍ರನೆ ಅದೇನು ತಕ್ಕೋಗಿ. ಯಾಪಾರದ ಟೇಮು’ ಅಂದ್ಲು. ನಾನು ಆವಯ್ಯನತಕ್ಕೋಗಿ ಅಂಗಿ ಹಿಡಕತ್ಲೇ ಅದೇನೋ ಗಬ್ಬು ವಾಸನೆ ರಪ್ಪಂತ ಮೂಗಿಗೆ ವಡೀತು.

‘ಇದೇನ್ಸಾ ಈಪಾಟಿ ಗಬ್ಬುವಾಸನೆ! ಏನದು?’ ಅಂತ ಕೇಳಿದೆ.

ADVERTISEMENT

‘ನೋಡ್ಲಾ, ಈರುಳ್ಳಿ ಮತ್ತು ಹಿಂಗಿನ ವಾಸನೇಗೆ ಕೊರೊನಾ ಹತ್ತಿರಕ್ಕೆ ಬರಕುಲ್ಲ ಅಂತ ಟಿ.ವಿ ಡಾಕ್ಟ್ರು ಹೇಳಿದ್ದ ನನ್ನೆಂಡ್ರು ಕೇಳಿದ್ಲಂತೆ. ದಿನಾ ಈರುಳ್ಳಿ ಚಟ್ನಿ, ಸಾರು, ಕಷಾಯ ತಗಬೇಕಾಗದೆ. ಮನೆಯಿಂದ ಆಚೆಗೆ ಕಡೆಯುವಾಗ ಈರುಳ್ಳಿ ರಸ, ಹಿಂಗು ಬೆರೆಸಿ ಮೈಗೆ ತಿಕ್ಕಿ ಕಳಿಸ್ತಳೆ. ಅದರ ಗಮಲಕ್ಕೆ ಎಲ್ಲಾ ಓಡೋಯ್ತರೆ’ ಅಂದ್ರು ಅವರು.

‘ಆಗಕುಲ್ಲಾ ಅಂತ ಸಟಾಗಿ ಏಳದಲ್ವಾ ಸಾ!’ ಅಂತ ಬೋಧನೆ ಮಾಡಿದೆ. ‘ಮಿನಿಸ್ಟ್ರು ಸೋಮಸೇಕ್ರಣ್ಣ ಕಂಪನಿಗಳ ಕೈಗೆ ಜುಟ್ಟು ಕೊಡಕುಲ್ಲ ಅಂದವ್ರೆ. ಅವುರುನ್ನೋ ನಾಗಮಂಗಲದ ನಾರಾಯಣಗೌಡ್ರುನ್ನೋ ಕೇಳಿ, ಯಾರ ಕೈಗೆ ಹೆಂಗೆ ಜುಟ್ಟು ಕೊಡಬೈದು ಅಂತ ಇಚಾರಿಸಬೇಕು ಕನೋ’ ಅಂದ್ರು ಬೇಜಾರೇಲಿ.

‘ಸಾ ಮನೇಲಿ ಸಾಮಾಜಿಕ ಅಂತರ ಹೆಂಗದೆ?’ ಅಂತ ವಿಚಾರಿಸಿಕ್ಯಂಡೆ. ‘ಅಯ್ಯೊ ಅದ್ನೇನು ಕೇಳೀಲಾ! ಹಿಂಗು, ಈರುಳ್ಳಿ ಪ್ರಭಾವ್ಕೆ ಮುಂಬೈ- ಕೆ.ಆರ್.ಪೇಟೆ ವಲಸಿಗನ ಥರಾ ಆಗಿವ್ನಿ’ ಅಂತ ಆವಯ್ಯ ನೊಂದ್ಕತಿದ್ರೆ ನನಗೆ ನಗ ತಡಿಯಕಾಯ್ನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.