ADVERTISEMENT

ಚುರುಮುರಿ: ಪಟಾಕಿ ಪುರಾಣ

ಸುಮಂಗಲಾ
Published 22 ನವೆಂಬರ್ 2020, 19:45 IST
Last Updated 22 ನವೆಂಬರ್ 2020, 19:45 IST
   

ಹಬ್ಬ ಮುಗಿದು ಒಂದು ವಾರವಾದರೂ ಬೆಕ್ಕಣ್ಣ ಹ್ಯಾಪುಮೋರೆ ಮಾಡಿಕೊಂಡು, ದುಸುಮುಸು ಮಾಡುತ್ತಲೇ ಇತ್ತು.

‘ಛಲೋ ಪಟಾಕಿ ಕೊಡ್ಸು ಅಂದ್ರ ಅದೇನೋ ಹಸಿರು ಪಟಾಕಿ ಕೊಡಿಸಿದಿ... ಎಲ್ಲ ಠುಸ್ ಅಂದ್ವು... ಒಂದೂ ಛಲೋತ್ನಾಗಿ ಢಂ ಅನ್ನಲಿಲ್ಲ’ ಮತ್ತದೇ ಕಿಟಿಕಿಟಿ ಶುರುಮಾಡಿತು.

‘ಅಲ್ಲಲೇ... ಅಲ್ಲಿ ಅಮೆರಿಕದಾಗೆ ಪಾಪ ಟ್ರಂಪಣ್ಣನೇ ಠುಸ್ ಅಂದಾನ. ರಾಜಾಹುಲಿ ಸಂಪುಟ ವಿಸ್ತರಣೆ ಪಟಾಕಿ ಹಚ್ಚಕ್ಕೆ ನೋಡಿದಾಗೆಲ್ಲ ಮ್ಯಾಲಿನವ್ರು ಠುಸ್ ಮಾಡ್ಯಾರ. ಅತ್ತಾಗೆ ಬಿಹಾರದಾಗೆ ಮಹಾಘಟಬಂಧನ್ ಪಟಾಕಿ ಇನ್ನೇನು ಸಿಡಿತು ಅನ್ನೂದ್ರಾಗೇನೆ ಠುಸ್ ಅಂತು. ಕರುನಾಡು ಬಿಡು, ಎಲ್ಲಾ ಕಡಿಗೂ ಉಪಚುನಾವಣೆಯೊಳಗೆ ಬ್ಯಾರೆ ಪಕ್ಷಗಳು ಠುಸ್ ಅಂದಿದ್ದಷ್ಟೆ ಅಲ್ಲ, ಛಲೋತ್ನಾಗೆ ಕೈಸುಟ್ಟುಕೊಂಡಾವು. ಹಂತಾದ್ರಗೆ ನಿನ್ನ ಪಟಾಕಿ ಠುಸ್ ಅನ್ನೂದು ಯಾವ ದೊಡ್ಡ ವಿಷ್ಯ ಬಿಡು... ಮುಂದಿನ ವರ್ಷ ಛಲೋ ಪಟಾಕಿ ತರೂಣು’ ಎಂದು ಸಮಾಧಾನಿಸಲು ಪ್ರಯತ್ನಿಸಿದೆ.

ADVERTISEMENT

‘ಆ ಠುಸ್ ಬ್ಯಾರೆ, ಈ ಠುಸ್ ಬ್ಯಾರೆ...’ ಎಂದು ವಾದಿಸಿದ ಬೆಕ್ಕಣ್ಣ ಬಾಲ ಮುದುರಿಕೊಂಡು ಪೇಪರು ಓದತೊಡಗಿತು.

‘ಈಗಿನ ಪರಿಸ್ಥಿತಿ ವಳಗ ಎರಡು ಪಟಾಕಿ ಮಾತ್ರ ಠುಸ್ ಅನ್ನಾಕೆ ಸಾಧ್ಯ ಇಲ್ಲ. ಕೊರೊನಾ ಪಟಾಕಿ ಇನ್ನಾ ವರ್ಷ ಆದ್ರೂ ಢಂಢಂ ಅಂತಲೇ ಇರತೈತಿ. ಮೋಶಾಟ್ಲರ್ ಪಟಾಕಿ ನೋಡು... ರಾಕೆಟ್ ಹಂಗೆ ಸುಂಯ್ ಅಂತ ಮ್ಯಾಗೆ ಹೋಗತೈತಿ’ ಎಂದು ಕಣಿ ನುಡಿಯಿತು.

‘ಆ ಎರಡು ಪಟಾಕಿ ನಿನಗೂ ಬೇಕೇನು ಮತ್ತ’ ನಾನು ಛೇಡಿಸಿದೆ.

‘ಕೊರೊನಾ ಪಟಾಕಿ ಅಂತೂ ಮದ್ಲು ಬ್ಯಾಡ. ಮತ್ತ ಮೋಶಾಟ್ಲರ್ ಪಟಾಕಿ ಬ್ಯಾಡ ಅನ್ನಾಕ ನನಗ ಬಿಡು, ನಿಮಗೂ ಯಾರಿಗೂ ದಂ ಇಲ್ಲ ಬಿಡು’ ಎಂದು ಖೊಳ್ಳನೆ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.