ADVERTISEMENT

ಚುರುಮುರಿ: ಟ್ರ್ಯಾಪ್ ಸೀಕ್ರೆಟ್

ಮಣ್ಣೆ ರಾಜು
Published 2 ನವೆಂಬರ್ 2022, 19:45 IST
Last Updated 2 ನವೆಂಬರ್ 2022, 19:45 IST
ಚುರುಮುರಿ: ಟ್ರ್ಯಾಪ್ ಸೀಕ್ರೆಟ್
ಚುರುಮುರಿ: ಟ್ರ್ಯಾಪ್ ಸೀಕ್ರೆಟ್   

‘ರೀ, ಚಲಪತಿ ಮನೇಲಿ ಆಡಿಯೊ ಟ್ರ್ಯಾಪ್ ಆಗಿ ಅತ್ತೆ, ಸೊಸೆ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದಾರಂತೆ...’ ಸುದ್ದಿ ಹೇಳಿದಳು ಸುಮಿ.

‘ಸೊಸೆಗೆ ಬೈಯ್ಯಬಾರದ್ದನ್ನು ಬೈದು ಪಕ್ಕದ ಮನೆಯವಳ ಜೊತೆ ಅತ್ತೆ ಸಂಕಟ ತೋಡಿಕೊಂಡ ವಿಚಾರ ತಾನೆ?’ ಶಂಕ್ರಿ ಕೇಳಿದ.

‘ಹೌದು, ಪಕ್ಕದ ಮನೆಯವಳು ಅತ್ತೆಯ ಬೈಗುಳವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಸೊಸೆಗೆ ಕೊಟ್ಟಳಂತೆ. ಆ ವಿಚಾರ ದೊಡ್ಡದಾಗಿ ಅತ್ತೆ, ಸೊಸೆ ಹೊಡೆದಾಡಿಕೊಂಡು ಬ್ಯಾಂಡೇಜ್ ಕಟ್ಟಿಸಿಕೊಂಡು ಆಸ್ಪತ್ರೆ ಹಾಸಿಗೆ ಮೇಲೆ ಮಲಗಿದ್ದಾರೆ’.

ADVERTISEMENT

‘ಅತ್ತೆ– ಸೊಸೆ ಕಾಟದಲ್ಲಿ ಚಲಪತಿ ಪರಿಸ್ಥಿತಿ ಏನಾಗಿದೆಯೋ...’ ಶಂಕ್ರಿಗೆ ಅಯ್ಯೋ ಪಾಪ ಅನಿಸಿತು.

‘ಪದ್ಮಾಳ ಗಂಡ ‘ಮನಿ’ಟ್ರ್ಯಾಪ್ ಆಗಿರುವ ವಿಚಾರ ಗೊತ್ತಾಯ್ತಾ?’

‘ಗೊತ್ತಾಯ್ತು. ಲಂಚ ಪಡೆಯುವಾಗ ಲೋಕಾಯುಕ್ತದವರು ಅವನನ್ನು ಟ್ರ್ಯಾಪ್ ಮಾಡಿದರಂತೆ’.

‘ಪದ್ಮಾಳಿಗೆ ಹಾಗೇ ಆಗಬೇಕು, ಅವಳ ಧಿಮಾಕು ಜಾಸ್ತಿಯಾಗಿತ್ತು. ‘ಛೇ, ಹೀಗಾಗಬಾರದಿತ್ತು...’ ಅಂತ ಮೆಸೇಜ್ ಕಳಿಸಿ ಅವಳ ಹೊಟ್ಟೆ ಉರಿಸಿದ್ದೀನಿ’ ಎಂದಳು ಸುಮಿ.

‘ಮೊನ್ನೆ ನಮ್ಮ ಆಫೀಸ್ ಬಾಸ್ ಹನಿಟ್ರ್ಯಾಪ್ ಆಗಿದ್ದರು. ಹೇಗೋ ಸೆಟಲ್‍ಮೆಂಟ್ ಮಾಡಿಕೊಂಡು ಅದೃಷ್ಟವಶಾತ್ ಬಚಾವಾದ್ರು’.

‘ಹನಿಟ್ರ್ಯಾಪ್ ಕೇಸುಗಳು ಹೆಚ್ಚಾಗುತ್ತಿವೆ ಕಣ್ರೀ, ‘ಹನಿ’ಮಲ್‍ಗಳ ಬಗ್ಗೆ ಗಂಡಸರು ಎಚ್ಚರಿಕೆಯಿಂದ ಇರಬೇಕು...’

‘ಆತಂಕ ಬೇಡ, ‘ಹನಿ’ಮಲ್‍ಗಳು ನಮ್ಮಂತಹವರ ತಂಟೆಗೆ ಬರೋದಿಲ್ಲ, ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರಿಗೆ ಬಲೆ ಬೀಸುತ್ತವೆ’.

‘ಹನಿ’ಮಲ್‍ಗಳು ಯಾರಿಗಾದರೂ ವಕ್ಕರಿಸಬಹುದು. ಅಪಾಯಕಾರಿ ಹನಿಟ್ರ್ಯಾಪ್‍ಗೆ ಒಳಗಾಗಿ ಜಾಲತಾಣದಲ್ಲಿ ಜಮಾ ಆದ ಅನೇಕರು ಮಾನ, ಪ್ರಾಣ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೋದ ಮಾನ ಟೀವಿ ಮೀಡಿಯಾದಲ್ಲಿ ಕುಳಿತು ಕ್ಷಮೆ ಕೇಳಿದರೂ ಬರೋಲ್ಲ ಕಣ್ರೀ. ಮಾನಹರಣಮಾಡುವ ಹನಿಟ್ರ್ಯಾಪ್ ಬಗ್ಗೆ ನೀವು ಹುಷಾರಾಗಿರಿ...’ ಎಂದು ಸುಮಿ ಎಚ್ಚರಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.