ADVERTISEMENT

ಪ್ರಚಾರಕ್ಕೆ ಬೇಕಾಗಿದ್ದಾರೆ

ಗುರು ಪಿ.ಎಸ್‌
Published 24 ಸೆಪ್ಟೆಂಬರ್ 2019, 19:59 IST
Last Updated 24 ಸೆಪ್ಟೆಂಬರ್ 2019, 19:59 IST
ಚುರುಮುರಿ
ಚುರುಮುರಿ   

‘ಏನ್‌ ಮುದ್ದಣ್ಣ, ಹೊಸ ಶೇರ್‌ವಾನಿ, ಹೊಸ ವೇಸ್ಟ್‌ ಕೋಟು ಹಾಕ್ಕೊಂಡು ಅವಸರವಸರದಲ್ಲಿ ಹೋಗ್ತಿದೀಯಾ, ಏನ್‌ ಸಮಾಚಾರ’ ಕುತೂಹಲ
ದಿಂದ ಕೇಳಿದ ವಿಜಿ. ‘ಪೇಪರ್‌ ನೋಡ್ಲಿಲ್ವ ಸಾರ್‌, ಬೇಕಾಗಿದ್ದಾರಂತೆ’ ಖುಷಿಯಿಂದ ಹೇಳ್ದ ಮುದ್ದಣ್ಣ.

‘ಯಾರು?’

‘ಚುನಾವಣೆ ಪ್ರಚಾರಕ್ಕೆ ಬೇಕಾಗಿದ್ದಾರಂತೆ ಸಾರ್‌’.

ADVERTISEMENT

‘ಅದಕ್ಕೆ ನಿನಗೇನು ಅರ್ಹತೆ ಇದೆ ಅಂತಾ ಹೋಗ್ತಿದೀಯೋ?’

‘ಅದಕ್ಕೆ ಎಂಥ ಅನುಭವ ಬೇಕು ಸಾರ್... ಇದ್ದದ್ದನ್ನು ಇರಲಾರದಂಗೆ, ಇರಲಾರದ್ದನ್ನು ಇದ್ದಂಗೆ ಹೇಳಿದ್ರೆ ಮುಗೀತಪ್ಪ. ಸಾವಿರ ಶಿಳ್ಳೆ, ಲಕ್ಷ ಚಪ್ಪಾಳೆ’ ಸಿಂಪಲ್ಲಾಗಿ ಹೇಳಿದ ಮುದ್ದಣ್ಣ.

‘ಹೌದಿ, ಹೌದಿ’.

‘ಅದು ಹೌದಿ ಹೌದಿ ಅಲ್ಲ... ಹೌದು ಹೌದು’.

‘ನಾಲಿಗೆ ಹೊರಳಲಿಲ್ಲ. ಅದು ಸರಿ, ಭಾಷಣ ಕಲೆ ತಿಳಿದಿದೆಯಾ ನಿಂಗೆ?’

‘ರೂಪಕಗಳ ಬಗ್ಗೆ ಎಲ್ಲ ಗೊತ್ತು ಸಾರ್‌... ಮನುಷ್ಯರನ್ನ ಹಾವು, ಚೇಳು, ಹದ್ದು, ಗಿಳಿಗೆ ಹೋಲಿಸಿ ಮಾತಾಡ್ತೀನಿ’ ನಕ್ಕ ಮುದ್ದಣ್ಣ.

‘ನೀನು ಮಾಡೋಕೆ ಹೋಗ್ತಿರೋದು ಪ್ರಚಾರವಾ ಅಥವಾ ಅಪಪ್ರಚಾರವಾ?’

‘ಏನ್‌ ಸಾರ್‌, ಹಿಂದೆ ಆಗಿರೋದನ್ನು ಮರೆಸಿ, ಮುಂದೆ ಆಗದೇ ಇರೋದನ್ನು ಮೆರೆಸೋದು ಮುಖ್ಯ ಸಾರ್. ತೆಗಳಿಕೆಯೇ ನಮ್ಮ ಪ್ರಣಾಳಿಕೆ’.

‘ಅಲ್ಲಾ ಮುದ್ದಣ್ಣ, ಡಬಲ್‌ ಡಿಗ್ರಿ ಮಾಡಿದ್ರೂ ನಿನ್ನ ಮಗ ಉದ್ಯೋಗ ಇಲ್ದೆ ಓಡಾಡ್ತಿದಾನೆ. ಬಿಸಿನೆಸ್‌ ಆಗ್ತಿಲ್ಲ ಅಂತಾ ನೀನು ಕಂಪನಿ ಮುಚ್ಚಿದೀಯಾ... ಸಾಲ ಮನ್ನಾ ಸರಿ ಆಗಿಲ್ಲ ಅಂತಾ ನಿಮ್ಮ ಅಕ್ಕ–ಪಕ್ಕದ ಮನೆ ರೈತರು ಒದ್ದಾಡ್ತಿದ್ದಾರೆ. ನೀನು ನೋಡಿದರೆ ಯಾರದೋ ಚುನಾವಣೆಗೆ ಕ್ಯಾಂಪೇನ್‌ ಮಾಡೋಕೆ ಹೋಗ್ತಿದೀಯಲ್ಲ, ಏನ್‌ ಹೇಳಣ ನಿಂಗೆ’ ಅಸಮಾಧಾನದಿಂದಲೇ ಹೇಳ್ದ ವಿಜಿ.

‘ನಿಮಗೆಲ್ಲ ಯಾವಾಗ ಬುದ್ಧಿ ಬರುತ್ತೆ ಅಂತಾ... ನಾನು, ನನ್ನ ಜನ, ನನ್ನ ಓಣಿ ಅಂತಾನೇ ಯೋಚನೆ ಮಾಡಿದರೆ ಹೇಗೆ ಸಾರ್‌? ಕುವೆಂಪು ಅವರು ಹೇಳಿದಂಗೆ ‘ವಿಶ್ವ ಮಾನವ’ ಆಗಬೇಕು ನಾವು’.

‘ದೊಡ್ಡ ದೊಡ್ಡ ಪದ ಹೇಳಿ ಬಾಯಿ ಮುಚ್ಚಿಸಬೇಡ ಮಾರಾಯ... ಹೋಗ್ಲಿ ಎಲೆಕ್ಷನ್‌ ಮುಗಿದ ಮೇಲೆ ಏನ್ಮಾಡ್ತೀಯಾ?’

‘ಪಕೋಡ ಮಾರ್ತೀನಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.