ADVERTISEMENT

ಗ್ಯಾರಂಟಿ ಯೋಜನೆಗಳು: ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗದಂತೆ ಎಚ್ಚರ ವಹಿಸಿ –ಬೊಮ್ಮಾಯಿ

ಚರ್ಚೆ | ಸಮಾಜದ ಸಬಲೀಕರಣವೇ ಇಲ್ಲ ಆರ್ಥಿಕ ಹೊರೆಯೇ?

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 19:02 IST
Last Updated 2 ಜೂನ್ 2023, 19:02 IST
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಹ

ಇದನ್ನು ಯಾವ ರೀತಿ ಹೊಂದಿಸುವುದು ಎಂಬುದರ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಇದರಿಂದ ಆರ್ಥಿಕ ಸಂಕಷ್ಟ ಬರುವುದು ಸ್ಪಷ್ಟ ಮತ್ತು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ರಾಜ್ಯ ದಿವಾಳಿಯತ್ತ ಹೋಗುವುದು ಖಚಿತ

ರಾಜ್ಯದ ಪ್ರಗತಿಗೆ ಆರ್ಥಿಕ ಸ್ಥಿರತೆ ಮತ್ತು ಸದೃಢತೆ ಬಹಳ ಅವಶ್ಯತಕೆ ಇದೆ. ಕೋವಿಡ್‌ನಲ್ಲಿ ಸಂಕಷ್ಡದಲ್ಲಿದ್ದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಿ ಆರ್ಥಿಕತೆಯನ್ನು ಸರಿ ದಾರಿಗೆ ತರುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿತ್ತು.

2021-22ರಲ್ಲಿ ರಾಜ್ಯದ ಬಜೆಟ್ ಗಾತ್ರ ₹2.43 ಲಕ್ಷ ಕೋಟಿ ಇತ್ತು. ಆರ್ಥಿಕ ಕೊರತೆಯು ರಾಜ್ಯದ ಜಿಡಿಪಿಯ (ಜಿಎಸ್‌ಡಿಪಿ) ಶೇಕಡ 3.48ರಷ್ಟಿತ್ತು. ಅದನ್ನು ಆ ವರ್ಷ ₹2.57ಕ್ಕೆ ಹೆಚ್ಚಳ ಮಾಡಿ ಆರ್ಥಿಕ ಕೊರತೆಯನ್ನು ಶೇ 3.26ರಷ್ಟಕ್ಕೆ ಇಳಿಸಿದ್ದೇವೆ. 2021-22ನೇ ಸಾಲಿನಲ್ಲಿ ₹71,432 ಕೋಟಿ ಸಾಲ ಪಡೆಯಲು ವಿಧಾನ ಮಂಡಲದಲ್ಲಿ ಅನುಮೋದನೆ ಪಡೆದರೂ ₹67,462 ಕೋಟಿ ರೂ. ಮಾತ್ರ ಸಾಲ ಪಡೆಯಲಾಗಿದೆ.

ADVERTISEMENT

2023-24ರಲ್ಲಿ ರಾಜ್ಯದ ಬಜೆಟನ್ನು ₹3.09 ಲಕ್ಷ ಕೋಟಿಗೆ ಹೆಚ್ಚಿಸಿ, ಆರ್ಥಿಕ ಕೊರತೆಯು (ಫಿಸಿಕಲ್ ಡೆಫಿಸಿಟ್) ಶೇ 3ರಷ್ಟು ಇರಬೇಕು. ಅದನ್ನು ಜಿಎಸ್‌ಡಿಪಿಯ ಶೇ 2.6 ರ ಒಳಗೆ ತರುವ ಮೂಲಕ ರೆವೆನ್ಯು ಸರ್ ಪ್ಲಸ್ ಮಾಡಿದ್ದೇವೆ.

ಆರ್ಥಿಕವಾಗಿ ಅತ್ಯಂತ ಉತ್ತಮ ಸ್ಥಿತಿಯಲ್ಲಿ ರಾಜ್ಯವನ್ನು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಬಿಟ್ಟು ಹೋಗಿರುವುದು ಸ್ಪಷ್ಟ. ಇಂತಹ ಉತ್ತಮ ಆರ್ಥಿಕ ಸ್ಥಿತಿಯಿಂದ ಈಗ ಇವರು ಕೊಡಮಾಡಿರುವ ಎಲ್ಲ ಗ್ಯಾರಂಟಿಗಳು ಇದಕ್ಕೆ ತಗಲುವ ವೆಚ್ಚ ₹50 ಸಾವಿರ ಕೋಟಿಗೂ ಹೆಚ್ಚು ಅಂತ ಸಿ.ಎಂ ಅಂದಾಜು ಮಾಡಿದ್ದಾರೆ. ಇದನ್ನು ಯಾವ ರೀತಿ ಹೊಂದಿಸುವುದು ಎಂಬುದರ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಇದರಿಂದ ಆರ್ಥಿಕ ಸಂಕಷ್ಟ ಬರುವುದು ಸ್ಪಷ್ಟ ಮತ್ತು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ರಾಜ್ಯ ದಿವಾಳಿಯತ್ತ ಹೋಗುವುದು ಖಚಿತ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು: ಸಂಕಷ್ಟದ ಹೊರೆಯ ಭಾರ ತಗ್ಗಿಸುವ ಸದಾಶಯದ ಪ್ರಯತ್ನ –ಸಿದ್ದರಾಮಯ್ಯ

ಈ ಐದು ಗ್ಯಾರಂಟಿಗಳ ಅನುಷ್ಠಾನ ಮಾಡಲು ರಾಜ್ಯ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ:

* ಈಗಾಗಲೇ ಕಾಮಗಾರಿಯಾಗಿ ಬಿಲ್ ಬಾಕಿ ಇರುವಂತಹ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗೆ ₹17 ಸಾವಿರ ಕೋಟಿ‌ ಪಾವತಿಸಬೇಕಿದೆ. ಉಳಿದ ಇಲಾಖೆಗಳೂ ಸೇರಿ ಸುಮಾರು ₹25 ಸಾವಿರ ಕೋಟಿ ಬಾಕಿ ಇದೆ ಎಂದು ಅಂದಾಜಿಸಲಾಗಿದೆ‌. ಈ ಬಾಕಿ ಸಂದಾಯಕ್ಕೆ ಹಣಕಾಸು ಒದಗಿಸುವುದು ದೊಡ್ಡ ಸವಾಲು

* ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದಲ್ಲಿ ಮದ್ಯಂತರ ಪರಿಹಾರವಾಗಿ ಶೇ 17ರಷ್ಟು ಏರಿಕೆ ಈಗಾಗಲೇ ಜಾರಿಯಾಗಿದ್ದು. ಇದಕ್ಕಾಗಿ ಪ್ರತಿ ವರ್ಷ ಸುಮಾರು ₹17 ಸಾವಿರ ಕೋಟಿ ರಾಜ್ಯದ ಬೊಕ್ಕಸದ ಮೇಲೆ ಹೊರೆ ಆಗುತ್ತದೆ.

* ವಿದ್ಯುತ್, ಆಹಾರ ಧಾನ್ಯ ಮತ್ತು ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳು ಜಾರಿಯಲ್ಲಿದ್ದು ಸುಮಾರು ₹30 ಸಾವಿರ ಕೋಟಿಯಷ್ಟು ಪ್ರತಿ ವರ್ಷ ವೆಚ್ಚವಾಗುತ್ತದೆ‌. ಪ್ರತಿ ಮಧ್ಯಂತರ ಹಣಕಾಸು ವರದಿಯಲ್ಲಿ ಇವುಗಳನ್ನು ಕಡಿಮೆ ಮಾಡಬೇಕೆಂದು ಆರ್ಥಿಕ ಇಲಾಖೆ ಶಿಫಾರಸು ಮಾಡುತ್ತದೆ. ಈಗ ಇನ್ನೂ ಐವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಸಬ್ಸಿಡಿಯ ಭಾರ ಅಧಿಕವಾಗಿರುವುದರಿಂದ ಬರುವ ಎಲ್ಲ ಆದಾಯವನ್ನು ಸಬ್ಸಿಡಿಗೆ ಮೀಸಲಿಡುವುದು ಅನಿವಾರ್ಯ‌. ಇದರ ಒಟ್ಟು ಪರಿಣಾಮ ರಾಜ್ಯದಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ.

ಈ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೆಲವು ಎಚ್ಚರಿಕೆ ವಹಿಸುವುದು ಅನಿವಾರ್ಯ. ರಾಜ್ಯದ ಪ್ರಮುಖ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲಭೂತ ಸೌಕರ್ಯ, ರೈತರು, ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡಬೇಕಿದೆ.

ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಆವರ್ತ ನಿಧಿಯನ್ನು ₹3,500 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, 2023-24ರ ಆಯವ್ಯಯದಲ್ಲಿ ₹1,500 ಕೋಟಿ ಒದಗಿಸಲಾಗಿದೆ. ಇದು ಅತ್ಯಂತ ಅಗತ್ಯವಾಗಿದ್ದು ಇದನ್ನು ಕಡಿತಗೊಳಿಸುವ ಪ್ರಯತ್ನ ಮಾಡಬಾರದು.

ವಿವೇಕ ಯೋಜನೆ ಅಡಿಯಲ್ಲಿ 7,601 ಶಾಲಾಕೊಠಡಿಗಳು ಹಾಗೂ ಇತರ ಯೋಜನೆ ಅಡಿಯಲ್ಲಿ ಸೇರಿ ಒಟ್ಟು 9,556 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದೆ. ಇದರಲ್ಲಿ ಅನುದಾನದ ಕಡಿತ ಮಾಡಿದರೆ, ಶಿಕ್ಷಣ ಕೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.‌ ರೈತರು, ಕಾರ್ಮಿಕರು, ಮೀನುಗಾರರು, ನೇಕಾರರು ಇತರರಿಗೆ ರೈತ ವಿದ್ಯಾನಿಧಿ ಕಾರ್ಯಕ್ರಮ ಮುಂದುವರಿಸುವುದು ಅತ್ಯಂತ ಅವಶ್ಯವಿದ್ದು ಸೂಕ್ತ ಅನುದಾನ ಆಯವ್ಯಯದಲ್ಲಿ ಒದಗಿಸಲಾಗಿದೆ‌.

ಉಚಿತ ಡಯಾಲಿಸಿಸ್ ಸೇವೆ ಒಂದು ಲಕ್ಷ ಸೈಕಲ್‌ಗೆ ವಿಸ್ತರಣೆ ಮಾಡಿದ್ದು, ಹಾಗೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕಿಮೊಥೆರಪಿ ಸೈಕಲ್‌ಗಳನ್ನು ಹೆಚ್ಚಿಸುವಂತಹದ್ದು, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ ಮಾಡುವ ಯೊಜನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.

ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಯ ನೆಪದಲ್ಲಿ ಹಣ ವರ್ಗಾಯಿಸುವ ಪ್ರಯತ್ನ ನಡೆಸಿದರೆ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ದೊಡ್ಡ ದ್ರೋಹ ಮಾಡಿದಂತಾಗುತ್ತದೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಹಾಗೂ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಗಳಾದ ಜಲಜೀವನ ಮಿಷನ್, ಗೃಹ ನಿರ್ಮಾಣ, ನೀರಾವರಿ ಯೋಜನೆ, ಪಂಚಾಯಿತಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಸರ್ಕಾರ ಮೇಲಿದೆ. ಅದೇ ರೀತಿ ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ ಪ್ರಗತಿ ಹಾಗೂ ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಅವಶ್ಯವಿದೆ.

ನಗರ ಪ್ರದೇಶಗಳಲ್ಲಿ ನಗರೋತ್ಥಾನ ಸ್ಮಾರ್ಟ್ ಸಿಟಿ ಯೋಜನೆ, ಮೆಟ್ರೊ, ಉಪನಗರ ಯೋಜನೆಗಳನ್ನು ಮುಂದುವರಿಸುವುದು ಬೆಂಗಳೂರಿನ ಅಭಿವೃದ್ಧಿಗೆ ಅತಿ ಅವಶ್ಯವಿರುತ್ತದೆ.

ರಾಜ್ಯದ ಜನತೆಗೆ ದೋಖಾ

ರಾಜ್ಯ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಅಂತ ಹೇಳಿ, ಗ್ಯಾರಂಟಿ ಕಾರ್ಡ್‌ನಲ್ಲಿಯೂ ಅದೇ ರೀತಿ ಹೇಳಿತ್ತು. ಈಗ ವಾರ್ಷಿಕ ಸರಾಸರಿ ಲೆಕ್ಕ ಹಾಕಿ ಉಚಿತ ಕೊಡುವುದಾಗಿ ಹೇಳುತ್ತಾರೆ. ಇದು ಇವರ ಗುಪ್ತ ಕಾರ್ಯಸೂಚಿಯಾಗಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನತೆಗೆ ದೋಖಾ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.‌

ಇದರ ಒಟ್ಟು ಪರಿಣಾಮ ವಿದ್ಯುತ್ ಶಕ್ತಿ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಖರೀದಿಗೆ ಹಣಕಾಸಿನ ಕೊರತೆಯಾಗಲಿದ್ದು ಇದರಿಂದ ಕರ್ನಾಟಕ ಕತ್ತಲಲ್ಲಿ ಮುಳುಗುವ ಸಾಧ್ಯತೆ ಕಣ್ಣ ಮುಂದೆ ಗೋಚರಿಸುತ್ತಿದೆ.

ಯುವ ನಿಧಿ ಯೋಜನೆಯಡಿ ಎಲ್ಲ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿದ್ದರು. ಈಗ ಈ ವರ್ಷ ಪದವಿ ಪಡೆದವರಿಗೆ  ಮಾತ್ರ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಯುವಕರು ಬಹಳಷ್ಟು ನಿರಾಶರಾಗಿ ಆಕ್ರೋಶಗೊಳ್ಳುವ ಸಾಧ್ಯತೆ‌ ಇದೆ. ಅಲ್ಲದೇ ಮನೆ ಮನೆಯಲ್ಲಿ ಮನೆಯ ಯಜಮಾನಿ ಯಾರೆಂದು ಪ್ರಶ್ನೆ ಎತ್ತಿ ಕೌಟುಂಬಿಕ ಕಲಹ ಹೆಚ್ಚಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುವುದು ನಿಶ್ಚಿತ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.