ADVERTISEMENT

ಚರ್ಚೆ: ಸಂಸ್ಕೃತ– ‘ಸುಲಭದ ದಾರಿ’ ಬೇಡ

ಬರೀ ಅಂಕ ಗಳಿಕೆಯ ಉದ್ದೇಶದಿಂದ ಅಲ್ಲದೆ ಶ್ರಮವಹಿಸಿ ಭಾಷೆಯನ್ನು ತಮ್ಮದನ್ನಾಗಿಸಿಕೊಳ್ಳುವ ವಿಧಾನವನ್ನು ಮಕ್ಕಳಿಗೆ ನಿರ್ದೇಶಿಸುವುದು ಗುರುವಿನ ಜವಾಬ್ದಾರಿ

ಬಿ.ಎಸ್.ಭಗವಾನ್
Published 6 ಮೇ 2025, 20:09 IST
Last Updated 6 ಮೇ 2025, 20:09 IST
<div class="paragraphs"><p>ಚರ್ಚೆ: ಸಂಸ್ಕೃತ– ‘ಸುಲಭದ ದಾರಿ’ ಬೇಡ</p></div>

ಚರ್ಚೆ: ಸಂಸ್ಕೃತ– ‘ಸುಲಭದ ದಾರಿ’ ಬೇಡ

   

‘ಪ್ರಥಮ ಭಾಷೆ ಮತ್ತು ನ್ಯಾಯದ ಗಂಟೆ’ ಎಂಬ ಪು.ಸೂ.ಲಕ್ಷ್ಮೀನಾರಾಯಣ ರಾವ್‌ ಅವರ ಲೇಖನ (ಸಂಗತ, ಮೇ 5) ಗಮನಿಸಿದೆ. ಸಂಸ್ಕೃತವು ಕೋಡಿಂಗ್‌ ಮಾಡಬಹುದಾದ ಕಂಪ್ಯೂಟರ್‌ಸ್ನೇಹಿ ವೈಜ್ಞಾನಿಕ ಭಾಷೆ ಎಂಬ ‘ನಾಸಾ’ದ ಅಭಿಪ್ರಾಯವೂ  ಕಾಕತಾಳೀಯವಾಗಿ ಅದೇ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಹಾತ್ಮ ಗಾಂಧಿ ‘ಸಂಸ್ಕೃತವನ್ನು ತಿಳಿಯದೆ ನಿಜ ಭಾರತೀಯನಾಗಲು, ನಿಜ ಶಿಕ್ಷಿತನಾಗಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ‘ಅಕ್ಷರಮ್‌’  ಸಂಸ್ಥೆಯಲ್ಲಿ ಹನ್ನೊಂದು ವರ್ಷಗಳ ಹಿಂದೆ ‘ಸಂಸ್ಕೃತ ಭಾರತೀ’ ಅಂತರರಾಷ್ಟ್ರೀಯ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಹತ್ತು ದಿನಗಳ ‘ಸಂಭಾಷಣೆ ಮೂಲಕ ಸಂಸ್ಕೃತ’ ಎಂಬ ಕಮ್ಮಟದಲ್ಲಿ ಭಾಗವಹಿಸಿದ್ದೆ. ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಮನಮುಟ್ಟುವಂತೆ ಸಂಸ್ಕೃತವನ್ನು ಹೇಳಿಕೊಡಲಾಯಿತು. ಸಮಾರೋಪದ ದಿನ ಇಪ್ಪತ್ತು ಶಿಬಿರಾರ್ಥಿಗಳೂ ಸಂಸ್ಕೃತದ ಮೂಲಕ ಕೆಲವು ವಾಕ್ಯಗಳಲ್ಲಾದರೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಕೆಲವರು ಸಂಸ್ಕೃತದಲ್ಲಿ ಪುಟ್ಟ ಕಥೆ, ಕವನ, ಪ್ರಬಂಧಗಳನ್ನು ರಚಿಸಿದ್ದರು.

ADVERTISEMENT

ಹಾಗಿದ್ದರೆ ಆ ಶಿಬಿರದ ಯಶಸ್ಸಿಗೆ ಕಾರಣವೇನು? ಬೋಧಕರು ಸಂಸ್ಕೃತದ ಮೂಲಕವೇ ಸಂಸ್ಕೃತವನ್ನು ಹೇಳಿಕೊಟ್ಟಿದ್ದು. ಅವರು ಇಂಗ್ಲಿಷ್‌ ಅಥವಾ ಕನ್ನಡದ ಒಂದು ಪದವನ್ನೂ ಅಪ್ಪಿತಪ್ಪಿಯೂ ಬಳಸುತ್ತಿರಲಿಲ್ಲ. ಮೊದಲ ಎರಡು ದಿನ ನಮಗೆ ಹೊರನಡೆಯೋಣ ಅನ್ನುವಷ್ಟು ಬೇಸರವಾಯಿತು. ಆದರೆ ನಂತರದ ದಿನಗಳಲ್ಲಿ ತರಗತಿಯು ಸೂಜಿಗಲ್ಲಿನಂತೆ ಸೆಳೆಯಿತು. ಕಂಪ್ಯೂಟರ್‌ಗೆ ‘ಸಂಗಣಕ’, ಚೆಕ್‌ಗೆ ‘ಧನಾದೇಶ ಪತ್ರ’, ಚಿಲ್ಲರೆ ಹಣಕ್ಕೆ ‘ಪರ್ಯಾಯ ಧನಮ್‌’... ಹೀಗೆಲ್ಲ ಪರಿಚಿತ ಎನ್ನಿಸುವ ಪದಗಳೇ ಅಲ್ಲಿ ಕೇಳಿಬರುತ್ತಿದ್ದವು. 8, 9 ಮತ್ತು 10ನೇ ತರಗತಿಗಳಲ್ಲಿ ಹೀಗೆ ಸಂಸ್ಕೃತವನ್ನು ಸಂಸ್ಕೃತದ ಮೂಲಕವೇ ಬೋಧಿಸಿದರೆ ಸಂಸ್ಕೃತ ಭಾಷೆ ಖಂಡಿತವಾಗಿಯೂ ಆಟಕ್ಕೂ ಲೆಕ್ಕಕ್ಕೂ ಸಲ್ಲುತ್ತದೆ.

ನಿಜವೆ, ಮೂರು ವರ್ಷ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಕಲಿತವರು ಬಂದೆ, ಹೋದೆ ಅಥವಾ ಹೇಗಿದ್ದೀರಿ ಎನ್ನುವಂತಹ ಪದಗಳನ್ನಾದರೂ ಸಂಸ್ಕೃತದಲ್ಲಿ ಮಾತನಾಡಬೇಕು. ಈ ದಿಸೆಯಲ್ಲಿ ಸಂಸ್ಕೃತದ ಮೇಷ್ಟ್ರುಗಳು ಔದಾರ್ಯಕ್ಕೆ ಸೊಪ್ಪುಹಾಕದೆ ಸಂಸ್ಕೃತ ಮಾಧ್ಯಮದಲ್ಲೇ ಸಂಸ್ಕೃತವನ್ನು ಹೇಳಿಕೊಡಬೇಕು. ಭಾಷಾಂತರ ಪಠ್ಯವನ್ನು ಬದಿಗಿಟ್ಟು ಮೂಲ ಪಠ್ಯವನ್ನೇ ಬೋಧಿಸಬೇಕು. ಅಂಕ ಗಳಿಕೆಯ ನಿಮಿತ್ತ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿಸಿಕೊಂಡ ವಿದ್ಯಾರ್ಥಿಗಳ ಮನಸ್ಸು ಜ್ಞಾನದ ಕಡೆಗೆ ಹರಿಯುವಂತೆ ಅವರು ಮಾಡಬೇಕು.

ಬಹುಮುಖ್ಯವೆಂದರೆ, ಸಂಸ್ಕೃತದ ಮೇಷ್ಟ್ರುಗಳು ಕಾಲೇಜು, ವಿಶ್ವವಿದ್ಯಾಲಯ ಅಥವಾ ಎಲ್ಲಿಯಾದರೂ ಒಂದೆಡೆ ಕಲೆತಾಗ ಸಂಸ್ಕೃತದಲ್ಲೇ ಪರಸ್ಪರ ಸಂಭಾಷಿಸಿದರೆ ಮಾದರಿ ಎನ್ನಿಸುತ್ತದೆ. ಇಲ್ಲವಾದರೆ, ಸಂಸ್ಕೃತ ತಮ್ಮ ಬೋಧಕರಿಗೂ ಅಪಥ್ಯ ಎಂಬ ಭಾವನೆ ತಳೆದು ಮಕ್ಕಳು ಅನುವಾದ, ಕಂಠಪಾಠ, ಅಂಕಗಳ ಮೋಹದಲ್ಲಿ ಸಿಲುಕುತ್ತಾರೆ.

ದಿನನಿತ್ಯ ಒಂದಿಲ್ಲೊಂದು ಸಂದರ್ಭದಲ್ಲಿ ನಮ್ಮ ಕಿವಿಗೆ ಸಂಸ್ಕೃತದ ಸುಭಾಷಿತಗಳು, ಶ್ಲೋಕಗಳು, ವ್ಯಂಗ್ಯೋಕ್ತಿಗಳು ಬೀಳುತ್ತಲೇ ಇರುತ್ತವೆ. ನಾವು ಅವನ್ನು ಯಾಂತ್ರಿಕವಾಗಿ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯ ಮೂಲಕ ಸಾಗಹಾಕುವುದೇ ಹೆಚ್ಚು. ನಮಗೆ ಈಗಾಗಲೇ ಅಲ್ಪಸ್ವಲ್ಪವಾದರೂ ಪರಿಚಿತವಿರುವ ಪದಗಳೊಂದಿಗೆ ಅವನ್ನು ಅರ್ಥಮಾಡಿಕೊಂಡರೆ ನಿಜಕ್ಕೂ ಎಷ್ಟೊಂದು ಸ್ವಾರಸ್ಯ, ಸತ್ವಯುತ ಅನ್ನಿಸುತ್ತದೆ. ಅಲ್ಪಸ್ವಲ್ಪ ವ್ಯಾಕರಣ, ಉಚ್ಚಾರಣೆ ಗೊತ್ತಿದ್ದರೆ ಆಯಿತು, ಜ್ಞಾನದ ಕೀಲಿಕೈ ನಮ್ಮದಾಗುತ್ತದೆ.

ಇಂಗ್ಲಿಷ್‌ ಬೋಧಿಸುವವರು ಇಂಗ್ಲಿಷ್‌ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು, ಅವರು ಇಂಗ್ಲಿಷ್‌ ಮುಖಾಂತರವೇ ಸಮರ್ಥವಾಗಿ ಪಾಠ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಆದರೆ ಸಂಸ್ಕೃತದ ಬಗ್ಗೆ ಅದೇ ಆಶಯ ಏಕಿಲ್ಲ?

ಯಾವುದೇ ಭಾಷೆಯನ್ನು ಇನ್ನೊಂದು ಭಾಷೆಯ ಮೂಲಕ ‘ಈ ಪದಕ್ಕೆ ಆ ಪದ, ಅದಕ್ಕೆ ಇದು’ ಎಂಬ ಸೂತ್ರದಿಂದ ಕಲಿಸಲು ಸಾಧ್ಯವೇ? ಹೊಸದನ್ನು ಆಡಿಯೇ ಕಲಿಸಬೇಕು. ಲೇಖಕರು ಉಲ್ಲೇಖಿಸಿದಂತೆ, ಸಂಸ್ಕೃತವನ್ನು ಪ್ರಥಮ ಭಾಷಾ ವಿಷಯವಾಗಿ ಅಳವಡಿಸಿಕೊಂಡಾಗಿನಿಂದಲೂ ಅಂದರೆ ಸುಮಾರು ಐವತ್ತು ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಪ್ರಥಮ ಭಾಷೆಯಾಗಿ ಸಂಸ್ಕೃತದ ಓದು ವಿದ್ಯಾರ್ಥಿಗಳಿಗೆ ಬರೀ ನೆಪ ಎಂಬಂತೆ ಅಥವಾ ಅಂಕ ಗಳಿಕೆಗಾಗಿ ಮಾತ್ರ ಎಂಬಂತೆ ಆಗುವುದು ಶಿಕ್ಷಣ ಕ್ರಮಕ್ಕೇ ಅವಮಾನ. ಬರೀ ಅಂಕ ಗಳಿಕೆಯ ಉದ್ದೇಶದಿಂದ ‘ಸುಲಭದ ದಾರಿ’ ತೋರದೆ, ಭಾಷೆಯನ್ನು ಶ್ರಮವಹಿಸಿ ತಮ್ಮದನ್ನಾಗಿಸಿಕೊಳ್ಳುವ ವಿಧಾನವನ್ನು ಶಿಷ್ಯರಿಗೆ ನಿರ್ದೇಶಿಸುವುದು ಗುರುವಿನ ಜವಾಬ್ದಾರಿ. ಅಂಕ ಗಳಿಸಿದೆ, ಆದರೆ ಸಂಸ್ಕೃತ ಸಾಹಿತ್ಯದಲ್ಲಿ ಅಪಾರವಾಗಿರುವ ಶ್ರೇಷ್ಠ ಕಾವ್ಯ, ನಾಟಕ, ಅರ್ಥಶಾಸ್ತ್ರ, ವಿಜ್ಞಾನ, ಗಣಿತ, ಸುಭಾಷಿತವನ್ನು ಅರಿಯುವಂತೆ ಆಗದೇ ಹೋದೆನಲ್ಲ ಎಂದು ಕೊರಗುವವರುಂಟು.

ಪ್ರಥಮ ಭಾಷೆಯೋ ಐಚ್ಛಿಕವೋ ಒಟ್ಟಿನಲ್ಲಿ ಸಂಸ್ಕೃತ ಕಲಿಯುವವರನ್ನು ಉತ್ತೇಜಿಸೋಣ. ಸಂಸ್ಕೃತವನ್ನು ಕಲಿಯುವವರೆಲ್ಲರೂ ಅಂಕ ವ್ಯಾಮೋಹಿಗಳು ಅಥವಾ ಹೆಚ್ಚಿನ ಅಂಕಕ್ಕಾಗಿ ಹಿಂಬಾಗಿಲನ್ನು ಆಶ್ರಯಿಸುವವರು ಆಗಬೇಕಿಲ್ಲ.

ಸಂಸ್ಕೃತ ಕಲಿಕೆಗೆ ಈಗ ಬಹಳಷ್ಟು ಅವಕಾಶಗಳಿವೆ. ಸಂಸ್ಕೃತದ ಮೂಲಕ ವಾರ್ತೆಗಳು ಪ್ರಸಾರವಾಗುತ್ತವೆ. ಆನ್‌ಲೈನ್‌ ಮೂಲಕ ಸಂಸ್ಕೃತವನ್ನು ಕಲಿಯಬಹುದು. ಸಂಸ್ಕೃತದಿಂದ ಹಾಗೂ ಸಂಸ್ಕೃತಕ್ಕೆ ಭಾಷೆಗಳು ಕ್ಷಣಾರ್ಧದಲ್ಲಿ ಭಾಷಾಂತರಗೊಳ್ಳುತ್ತವೆ. ಕಾಳಿದಾಸನ‌ ‘ಅಭಿಜ್ಞಾನ ಶಾಕುಂತಲಮ್’, ಶೂದ್ರಕನ ‘ಮೃಚ್ಛಕಟಿಕ’, ವಿಶಾಕದತ್ತನ ‘ಮುದ್ರಾರಾಕ್ಷಸ’ದಂತಹ ಸಂಸ್ಕೃತ ನಾಟಕಗಳು ಬಿತ್ತರಗೊಳ್ಳುತ್ತವೆ. ಅಡಿ ಟಿಪ್ಪಣಿ, ಭಾಷಾಂತರ ವ್ಯವಸ್ಥೆಯೂ ಇರುತ್ತದೆ. ಮುಖ್ಯವಾಗಿ, ಇಲ್ಲಿ ಬೇಕಾಗಿರುವುದು ಕಲಿಯಲು ಅಗತ್ಯವಾದ ಕುತೂಹಲ ಮತ್ತು ಶ್ರದ್ಧೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.