ಎಲ್ಲಿಯವರೆಗೆ ಬದುಕುವ ಮೂಲಭೂತ ಹಕ್ಕು ಸರ್ವರಿಗೂ ದೊರಕುವುದಿಲ್ಲವೋ ಅಲ್ಲಿಯವರೆಗೆ ತಾತ್ಕಾಲಿಕವಾಗಿ ಆದರೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿ ಇರಲೇಬೇಕಾಗುತ್ತದೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಎನಿಸಬಹುದು. ಆದರೆ, ಅಭಿವೃದ್ಧಿ ಎಂದರೆ ಜನರ ಘನತೆಯ ಬದುಕಿನ ಅಭಿವೃದ್ಧಿಯೂ ಹೌದು ಎನ್ನುವುದನ್ನು ನಾವು ಅರಿತುಕೊಳ್ಳಬೇಕು
ಕಳೆದ ಒಂದಷ್ಟು ವರ್ಷಗಳಿಂದ ಸುಪ್ರೀಂ ಕೋರ್ಟ್ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಸಂವಿಧಾನದ ವ್ಯಾಖ್ಯಾನ ಮಾಡುತ್ತಿದೆ. ಇಂತಹ ಹೊತ್ತಿನಲ್ಲೇ ದೇಶದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರು ಫೆ. 12ರಂದು ‘ಉಚಿತ ಯೋಜನೆಗಳು ಜನರನ್ನು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ತೇಜಿಸುವ ಬದಲು ಪರಾವಲಂಬಿಗಳಾಗಿಸುತ್ತಿಲ್ಲವೆ’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಚಿತ ಯೋಜನೆಗಳು ಜನರನ್ನು ಪರಾವಲಂಬಿಗಳಾಗಿಸುತ್ತಿವೆಯೇ, ಇಲ್ಲವೇ ಎನ್ನುವುದನ್ನು ವಿವೇಚಿಸುವುದು ಈ ಹೊತ್ತಿನ ತುರ್ತಾಗಿದೆ.
ಸಂವಿಧಾನದ 21ನೇ ವಿಧಿ ಈ ದೇಶದ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ನೀಡಿದೆ. ಸಂವಿಧಾನದ ಪ್ರಕಾರ ‘ಬದುಕುವ ಹಕ್ಕು’ ಎಂದರೆ ದುಡಿಯುವ ಹಕ್ಕು, ಸಮಾನ ವೇತನ, ಘನತೆಯಿಂದ ಕೆಲಸ ಮಾಡುವ ವಾತಾವರಣ, ವ್ಯಕ್ತಿತ್ವ ವಿಕಸನ, ಕೆಲಸದಿಂದ ಸಿಗಬೇಕಾದ ಸ್ವಯಂ ಸಂತೃಪ್ತಿ ಎಂದು ಸರಳವಾಗಿ ಅರ್ಥೈಸಬಹುದು. ಸಂವಿಧಾನದ 21ನೇ ವಿಧಿಯ ಹಿನ್ನೆಲೆಯಲ್ಲಿ ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಒಮ್ಮೆ ಗಮನಿಸಿದರೆ, ದೇಶದ ಶೇಕಡ 90ರಷ್ಟು ಜನಸಂಖ್ಯೆಯ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎನ್ನುವ ಅಂಶ ಮನದಟ್ಟಾಗುತ್ತದೆ. ಚುನಾವಣಾ ರಾಜಕಾರಣಗಳನ್ನು ಬದಿಗಿಟ್ಟು ಗ್ಯಾರಂಟಿ ಯೋಜನೆಗಳ ಕುರಿತು ಅವಲೋಕಿಸುವುದಾದರೆ, ಈ ಯೋಜನೆಗಳು ದೇಶದಶೇ 90ರಷ್ಟು ಜನರಿಗೆ ಬದುಕುವ ಹಕ್ಕನ್ನು ತಾತ್ಕಾಲಿಕವಾಗಿಯಾದರೂ ಒದಗಿಸುತ್ತಿವೆ ಎನ್ನುವ ವಾದವನ್ನು ಮುಂದಿಡಬಹುದು. ಹಾಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಗುರಿಯನ್ನಾಗಿ ಹೊಂದಿರುವ ಯೋಜನೆಗಳನ್ನು ‘ಉಚಿತ ಯೋಜನೆಗಳು’ ಎಂದು ಸರ್ಕಾರ ಹಾಗೂ ನಾಗರಿಕರು ಕರೆಯುತ್ತಿರುವುದರಲ್ಲೇ ತಾತ್ವಿಕವಾದ ಸಮಸ್ಯೆಯಿದೆ ಎನಿಸುತ್ತಿದೆ.
ಭಾರತದಲ್ಲಿ ಶೇ 40ರಷ್ಟು ಸಂಪತ್ತು ಶೇ 1ರಷ್ಟು ಜನರ ಬಳಿಯಿದ್ದರೆ, ಶೇ 50ರಷ್ಟು ಜನಸಂಖ್ಯೆಯ ಒಟ್ಟು ಸಂಪತ್ತು ಶೇ 3ರಷ್ಟು ಮಾತ್ರ. ಅನಾರೋಗ್ಯದ ಕಾರಣದಿಂದ ಪ್ರತಿವರ್ಷ ಅಂದಾಜು 6.3 ಕೋಟಿಯಷ್ಟು ಜನರ ಬದುಕು ಬಡತನ ರೇಖೆಗಿಂತಲೂ ಕೆಳಮಟ್ಟಕ್ಕೆ ಕುಸಿಯುತ್ತಿದೆ. ಈ ಮಟ್ಟದ ಆರ್ಥಿಕ ಅಸಮಾನತೆಯಿರುವ ನಮ್ಮ ದೇಶದಲ್ಲಿ ಸಂವಿಧಾನದ 21ನೇ ವಿಧಿ ಪ್ರಕಾರ ಪ್ರತಿಯೊಬ್ಬರಿಗೂ ಸಮಾನ ದುಡಿಯುವ ಅವಕಾಶ ಸಿಗಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕಾಗಿದೆ.
ಭಾರತದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜೀವಿತಾವಧಿ ಇತರೆ ಸಮುದಾಯಗಳಜೀವಿತಾವಧಿಗಿಂತ ಸುಮಾರು 4ರಿಂದ 6 ವರ್ಷಗಳಷ್ಟು ಕಡಿಮೆ ಇದ್ದು, ಶೇ 6ರಷ್ಟು ವಯಸ್ಕರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಂದಾಜುಶೇ 60ರಷ್ಟು ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ಪ್ರಕಟಿಸಿರುವ ‘State of Working India Report– 2023’ರ ವರದಿಯ ಪ್ರಕಾರ, 1980ರ ದಶಕದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಮಹಿಳೆಯರ ಕೆಲಸದಲ್ಲಿ ಭಾಗವಹಿಸುವಿಕೆಯ ದರ (ಡಬ್ಲ್ಯುಪಿಆರ್) ಶೇ 52 ಇತ್ತು. ಅದು 2020ರಲ್ಲಿ ಶೇ 39.1ಕ್ಕೆ ಕುಸಿದಿದೆ. ಇದೇ ರೀತಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರ ಡಬ್ಲ್ಯುಪಿಆರ್ ಶೇ 35.6ರಿಂದ ಶೇ 26.3ಕ್ಕೆ ಇಳಿಮುಖವಾಗಿದ್ದರೆ, ಹಿಂದುಳಿದ ಸಮುದಾಯದ ಮಹಿಳೆಯರ ಡಬ್ಲ್ಯುಪಿಆರ್ ಶೇ 34.4 ಇದ್ದದ್ದು ಶೇ 25.2ಕ್ಕೆ ಇಳಿದಿದೆ. ಮುಸ್ಲಿಂ ಸಮುದಾಯದ ಮಹಿಳೆಯರ ಡಬ್ಲ್ಯುಪಿಆರ್ ಶೇ 16.6ರಿಂದ 16.3ಕ್ಕೆ ಇಳಿದಿದೆ.
ಇಪ್ಪತ್ತೈದು ವರ್ಷದೊಳಗಿನ ಶೇ 42ರಷ್ಟು ಪದವೀಧರರು ಈ ದೇಶದಲ್ಲಿ ನಿರುದ್ಯೋಗಿಗಳಿದ್ದಾರೆ. ನರೇಗಾ ಮತ್ತು ಪಡಿತರ ವ್ಯವಸ್ಥೆ ಶೇ 50ಕ್ಕಿಂತ ಹೆಚ್ಚಿನ ಜನರನ್ನು ಬಡತನ ರೇಖೆಗಿಂತ ಕೆಳಗೆ ಹೋಗದಂತೆ ತಡೆದು ನಿಲ್ಲಿಸಿದೆ. ಒಂದು ವೇಳೆ ಈ ಎರಡು ಯೋಜನೆಗಳನ್ನು ನಿಲ್ಲಿಸಿದರೆ ರಾತ್ರೋರಾತ್ರಿ ಶೇ 50ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತದೆ. ಈ ಅಂಕಿಅಂಶಗಳನ್ನು ಒಮ್ಮೆ ಸಾವಧಾನವಾಗಿ ಗಮನಿಸಿದರೆ ದೇಶದ ಶೇ 90ರಷ್ಟು ಮಂದಿಯನ್ನು ಹೇಗೆ ಅವರ ಮೂಲಭೂತವಾದ ಬದುಕುವ ಹಕ್ಕಿನಿಂದ ವಂಚಿಸಲಾಗುತ್ತಿದೆ ಎನ್ನುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾ. ಬಿ.ಆರ್.ಗವಾಯಿ ಅವರು ಉಚಿತ ಯೋಜನೆಗಳ ಫಲಾನುಭವಿಗಳನ್ನು ‘ಪರಾವಲಂಬಿಗಳು’ ಎಂದಿರುವುದು ಈ ದೇಶದಲ್ಲಿ ನೈಜ ಪರಾವಲಂಬಿಗಳು ಯಾರು ಎಂಬುದರ ಕುರಿತು ನಮ್ಮನ್ನು ವಿಶ್ಲೇಷಣೆಗೆ ಒಡ್ಡುತ್ತದೆ.
ಹತ್ತು ವರ್ಷಗಳಲ್ಲಿ ಈ ದೇಶದ ಬಂಡವಾಳಶಾಹಿಗಳ ಸುಮಾರು ₹15 ಲಕ್ಷ ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಶೇ 30ರಿಂದ ಶೇ 22ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಒಕ್ಕೂಟ ಸರ್ಕಾರದ ಖಜಾನೆಗೆ ಅಂದಾಜು ₹1 ಲಕ್ಷ ಕೋಟಿಗಿಂತಲೂ ಅಧಿಕ ಖೋತಾ ಆಗುತ್ತಿದೆ. ವಾಸ್ತವದಲ್ಲಿ ಕಾರ್ಪೊರೇಟ್ ಕಂಪನಿಗಳು ದೇಶದಲ್ಲಿ ಉದ್ಯೋಗಿಗಳನ್ನು ಸೃಷ್ಟಿ ಮಾಡಲಿ ಎನ್ನುವ ಕಾರಣಕ್ಕಾಗಿ ಈ ರೀತಿಯ ತೆರಿಗೆ ವಿನಾಯಿತಿಯನ್ನು ನೀಡಲಾಯಿತು. ಆದರೆ, ಪ್ರಸ್ತುತ ‘ದೇಶದ ಅಭಿವೃದ್ಧಿ’ ಎಂದರೆ ಅದು ‘ನಿರುದ್ಯೋಗದ ಅಭಿವೃದ್ಧಿ’ ಎನ್ನುವಂತಾಗಿದೆ ಎನ್ನುವುದು ಅನೇಕ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ತೆರಿಗೆ ವಿನಾಯಿತಿ ಪಡೆದ ಕಾರ್ಪೊರೇಟ್ ಕಂಪನಿಗಳು ದೇಶದ ಅಭಿವೃದ್ಧಿ ಮಾಡದೇ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಸಾಲ ಮನ್ನಾದಂತಹ ವಿಶೇಷ ಸವಲತ್ತುಗಳನ್ನು ಪಡೆದುಕೊಂಡ ಕಾರಣ ಭಾರತದಲ್ಲಿ ಸುಮಾರು ನೂರಕ್ಕೂ ಹೆಚ್ಚು ಶತಕೋಟ್ಯಧಿಪತಿಗಳ ಸೃಷ್ಟಿಯಾಯಿತು. ಈ ಆಧಾರದಲ್ಲಿ ಪರಾವಲಂಬಿಗಳು ಶೇ 1ರಷ್ಟಿರುವ ಜನಸಂಖ್ಯೆಯೋ ಅಥವಾ ಉಚಿತ ಯೋಜನೆಗಳ ಫಲಾನುಭವಿಗಳಾದ ಶೇ 90ರಷ್ಟಿರುವ ಜನಸಂಖ್ಯೆಯೋ ಎನ್ನುವುದನ್ನು ವಿವೇಚಿಸಬೇಕಿದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಇಲ್ಲಿನ ಬಹುದೊಡ್ಡ ವರ್ಗದ ದುಡಿಯುವ ಹಕ್ಕನ್ನೇ ಕಸಿದುಕೊಳ್ಳುವುದರ ಮೂಲಕ ಪ್ರಜೆಗಳ ಮೂಲಭೂತ ಬದುಕುವ ಹಕ್ಕಿಗೇ ಧಕ್ಕೆ ಉಂಟಾಗಿದೆ. ಒಂದು ವೇಳೆ ಈ ಬಹುಸಂಖ್ಯಾತ ದುಡಿಯುವ ವರ್ಗ, ‘ತಮ್ಮ ಘನತೆಯ ಬದುಕಿಗೆ ಪೂರಕವಾದ ದುಡಿಯುವ ಅವಕಾಶ ಮತ್ತು ವಾತಾವರಣವನ್ನು ಸೃಷ್ಟಿಸದ ಸರ್ಕಾರಗಳು ನಮಗೇಕೆ ಬೇಕು’ ಎನ್ನುವ ತಾತ್ವಿಕ ಪ್ರಶ್ನೆಯನ್ನು ಕೇಳಿಕೊಂಡರೆ ಎಂತಹ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಲ್ಲದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ.
ಮೇಲಿನ ಎಲ್ಲಾ ವಿಚಾರಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕರ್ನಾಟಕದ ಗ್ಯಾರಂಟಿ ಯೋಜನೆಗಳ ವಿಚಾರಕ್ಕೆ ಬರುವುದಾದರೆ, ಕಳೆದ ಸಾಲಿನ ಕರ್ನಾಟಕ ಸರ್ಕಾರದ ಬಜೆಟ್ ಗಾತ್ರ ₹3.71 ಲಕ್ಷ ಕೋಟಿ. ಇದರಲ್ಲಿ ₹1.20 ಲಕ್ಷ ಕೋಟಿಯನ್ನು ಕಲ್ಯಾಣ ಯೋಜನೆಗಳಿಗೆ ಕಾಯ್ದಿರಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದ ₹52 ಸಾವಿರ ಕೋಟಿ ಮೇಲೆ ಹೇಳಿದ ₹1.20 ಲಕ್ಷ ಕೋಟಿಯ ಒಳಗೆ ಸೇರಿದೆ. ಇದರರ್ಥ ಬಜೆಟ್‍ನ ಶೇ 32.4ರಷ್ಟು ಹಣವನ್ನು ರಾಜ್ಯ ಸರ್ಕಾರ ಕಲ್ಯಾಣ ಯೋಜನೆಗಳಿಗಾಗಿ ವಿನಿಯೋಗ ಮಾಡುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹50 ಸಾವಿರದಿಂದ ₹55 ಸಾವಿರದವರೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊರಕುತ್ತಿದೆ. ಅಂದರೆ, ತಿಂಗಳಿಗೆ ಅಂದಾಜು ₹4,000ದಿಂದ ₹4,500 ದೊರಕುತ್ತಿದೆ. ಶೇ 90ರಷ್ಟಿರುವ ದುಡಿಯುವ ವರ್ಗದ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳನ್ನೂ ಒಳಗೊಂಡಂತೆ ವಿನಿಯೋಗ ಮಾಡುತ್ತಿರುವುದು ಬಜೆಟ್‍ನ ಶೇ 10ರಿಂದ ಶೇ 30ರಷ್ಟು ಮಾತ್ರ. ಮಾನವ ಸಂಪನ್ಮೂಲ ಅಭಿವೃದ್ಧಿ ಕೂಡ ಅಭಿವೃದ್ಧಿಯೇ ಆಗಿರುವುದರಿಂದ ದೇಶದ ಬಹುಸಂಖ್ಯೆಯ ದುಡಿಯುವ ವರ್ಗ ಅಭಿವೃದ್ಧಿ ಹೊಂದಿದರೆ ಇದೇ ವರ್ಗ ಭವಿಷ್ಯದಲ್ಲಿ ನೂರಾರು ಲಕ್ಷ ಕೋಟಿ ರೂಪಾಯಿಗಳ ಭೌತಿಕ ಅಭಿವೃದ್ಧಿಯನ್ನು ಸೃಷ್ಟಿ ಮಾಡಬಲ್ಲದು.
ಎಲ್ಲಿಯವರೆಗೆ ಬದುಕುವ ಮೂಲಭೂತ ಹಕ್ಕು ಸರ್ವರಿಗೂ ದೊರಕುವುದಿಲ್ಲವೋ ಅಲ್ಲಿಯವರೆಗೆ ತಾತ್ಕಾಲಿಕವಾಗಿಯಾದರೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿ ಇರಲೇಬೇಕಾಗುತ್ತದೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಎನಿಸಬಹುದು. ಆದರೆ ಅಭಿವೃದ್ಧಿ ಎಂದರೆ ಜನರ ಘನತೆಯ ಬದುಕಿನ ಅಭಿವೃದ್ಧಿಯೂ ಹೌದು ಎನ್ನುವುದನ್ನು ನಾವು ಅರಿತುಕೊಂಡಾಗ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ‘ಪರಾವಲಂಬಿಗಳಲ್ಲ’; ಬದಲಾಗಿ ಅವರೆಲ್ಲರೂ ತಮ್ಮ ಸಾಂವಿಧಾನಿಕ ‘ಬದುಕುವ ಹಕ್ಕನ್ನು’ ಪಡೆಯುತ್ತಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ.
ಲೇಖಕ: ಪಿಇಎಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.