ಪ್ರತಿಯೊಂದು ರಾಜ್ಯವೂ ಅದರದ್ದೇ ಆದ ಭಾಷೆ ಮತ್ತು ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಶಿಕ್ಷಣ ಎನ್ನುವುದು ಆಯಾ ಭಾಷೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿಯೇ ಒದಗಿಸಬೇಕಾದ ವಿವೇಕವಾಗಿರು ವುದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ನಾಯಕತ್ವಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಗಳಿಗೆ ಇರಬೇಕಿರುವುದು ತಾರ್ಕಿಕವಾಗಿ ಸರಿಯಾದ ನಡೆ
ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ತರುವ ಮತ್ತು ಕನಿಷ್ಠ ಗುಣಮಟ್ಟವನ್ನು ಖಾತರಿಪಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ ನಿಯಮಾವಳಿ ರೂಪಿಸಿ ಕರಡು ಪ್ರಕಟಿಸಿದೆ. ಈ ಕರಡಿನ ಮೊದಲ ಭಾಗದಲ್ಲಿ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಭೋದಕ ಸಿಬ್ಬಂದಿ ನೇಮಕ ಹಾಗೂ ಬಡ್ತಿಯ ಕುರಿತ 2018ರ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿಸಿದೆ. ಅದರಲ್ಲಿಯೂ ಬಡ್ತಿಯ ಕುರಿತಂತೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಭಾರತದಲ್ಲಿನ ಉನ್ನತ ಶಿಕ್ಷಣ ಹಂತದಲ್ಲಿನ ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟ ಕುಸಿಯುತ್ತಿದೆ ಎಂಬ ನಿರಂತರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈಗ ತರಲು ಉದ್ದೇಶಿಸಿರುವ ಕೆಲವು ಹೊಸ ನಿಯಮಗಳು, ಆದರಲ್ಲಿಯೂ ಬಡ್ತಿಯ ಕುರಿತ ನಿಬಂಧನೆಗಳು ಸ್ವಾಗತಾರ್ಹವಾಗಿವೆ.
ಆದರೆ, ಈ ಕರಡಿನ 10ನೇ ನಿಯಮದಲ್ಲಿ ವಿವಿಗಳ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ತರುವ ದಿಕ್ಕಿನಲ್ಲಿ ಕೆಲವು ಅಂಶಗಳನ್ನು ಒಕ್ಕೂಟ ಸರ್ಕಾರ ಪ್ರಸ್ತಾಪಿಸಿದೆ. ಆ ನಿಯಮಗಳ ಪ್ರಕಾರ, ಇನ್ನು ಮುಂದೆ ಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರ ತಿರ್ಮಾನವೇ ನಿರ್ಣಾಯಕವಾಗಲಿದೆ ಮತ್ತು ಬೋಧನೆಯ ಅನುಭವ ಇಲ್ಲದ ‘ಖಾಸಗಿ ಉದ್ದಿಮೆಯ ಅನುಭವಿ ವ್ಯಕ್ತಿಯೂ’ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶವೂ ಇದೆ.
ಯುಜಿಸಿ ರೂಪಿಸಿರುವ ಕರಡು ನಿಯಮಾವಳಿಯಲ್ಲಿರುವ ಈ ಅಂಶಗಳು ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು, ‘ಈ ಪ್ರಸ್ತಾವ ನಾವು ಒಪ್ಪಿಕೊಂಡಿರುವ ‘ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆಗೆ ಮಾರಕ’ ಮತ್ತು ‘ಉನ್ನತ ಶಿಕ್ಷಣದ ಸಂಪೂರ್ಣ ಖಾಸಗೀಕರಣಕ್ಕೆ ಇದು ಮೊದಲ ಹೆಜ್ಜೆಯಾಗಲಿದೆ’ ಎಂಬ ವಿಮರ್ಶೆಗಳನ್ನು ಮುಂದಿಟ್ಟಿವೆ. ಈ ರಾಜ್ಯಗಳ ಮುಖ್ಯಮಂತ್ರಿಗಳೇ ಕರಡು ನಿಯಮಾವಳಿ ವಿರೋಧಿಸಿ ಹೇಳಿಕೆಗಳನ್ನು ನೀಡಿದ್ದಾರೆ.
ರಾಜ್ಯಗಳ ಈ ವಿಮರ್ಶೆಯಲ್ಲಿ ಅರ್ಥವಿದೆ. ಏಕೆಂದರೆ, ಆರಂಭದಲ್ಲಿ ಶಿಕ್ಷಣ ರಾಜ್ಯ ಪಟ್ಟಿಯಲ್ಲಿತ್ತು. ಅಂದರೆ, ಶಿಕ್ಷಣದ ಕುರಿತು ನೀತಿ ನಿಯಮಗಳನ್ನು ರೂಪಿಸುವ ಸಂಪೂರ್ಣ ಅಧಿಕಾರ ರಾಜ್ಯಗಳಿಗೆ ಇತ್ತು. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಡೀ ದೇಶಕ್ಕೆ ಮಾರ್ಗದರ್ಶನ ನೀಡುವ ಶೈಕ್ಷಣಿಕ ಚೌಕಟ್ಟಿನ ಅಗತ್ಯವಿದೆ ಎಂಬ ಚರ್ಚೆಗಳ ಕಾರಣ 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವ ಮೂಲಕ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು. ಆ ಮೂಲಕ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಹೊಣೆಗಾರಿಕೆ ಒಕ್ಕೂಟ ಸರ್ಕಾರಕ್ಕೆ ದಕ್ಕಿತು.
ಹೀಗೆ, ಸಾಂವಿಧಾನಿಕವಾಗಿಯೇ ದಕ್ಕಿದ ಮಾರ್ಗದರ್ಶಿ ಸೂತ್ರ ನೀಡುವ ಅವಕಾಶವನ್ನು ಒಕ್ಕೂಟ ಸರ್ಕಾರ ಹೇಗೆ ಚಲಾಯಿಸಬೇಕು ಎಂಬ ಕುರಿತು ಚರ್ಚೆ, ಸಂಕಥನಗಳು ನಡೆದು, ಹಲವಾರು ಸಮಿತಿಗಳು ತಮ್ಮ ಅಭಿಪ್ರಾಯ ನೀಡಿವೆ. ಆ ಎಲ್ಲಾ ಸಂಕಥನಗಳ ತಿರುಳನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು–2005ರಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ ಶೈಕ್ಷಣಿಕ ವ್ಯವಸ್ಥೆಯ ಕುರಿತ ಒಕ್ಕೂಟ ಸರ್ಕಾರದ ಮಾರ್ಗದರ್ಶಿ ಸೂತ್ರ ಈ ದೇಶದ ವೈವಿಧ್ಯ, ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಬಹಳ ಮುಖ್ಯವಾಗಿ ವೈಜ್ಞಾನಿಕ ಮನೋಧರ್ಮವನ್ನು ಉದ್ದೀಪಿಸುವ ಉದ್ದೇಶವನ್ನು ಹೊಂದಿರಬೇಕು ಎಂಬ ಸಂಗತಿಗಳನ್ನು ಈ ಚೌಕಟ್ಟು ಸ್ಪಷ್ಟವಾಗಿ ಸೂಚಿಸಿದೆ.
ಆದರೆ, ಯುಜಿಸಿ ರೂಪಿಸಿರುವ ಕುಲಪತಿಗಳ ನೇಮಕಾತಿ ಕರಡು ನಿಯಮಗಳು ಉನ್ನತ ಶಿಕ್ಷಣದ ಕುರಿತ ರಾಜ್ಯಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಗುಣ ಹೊಂದಿವೆ. ಏಕೆಂದರೆ, ಪ್ರತಿಯೊಂದು ರಾಜ್ಯವೂ ಅದರದ್ದೇ ಆದ ಭಾಷೆ ಮತ್ತು ವೈವಿಧ್ಯಮಯ ಸಂಸ್ಕೃತಿ ಹೊಂದಿದೆ ಮತ್ತು ಶಿಕ್ಷಣ ಎನ್ನುವುದು ಆಯಾ ಭಾಷೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿಯೇ ಒದಗಿಸಬೇಕಾದ ವಿವೇಕವಾಗಿರುವುದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ನಾಯಕತ್ವಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಗಳಿಗೆ ಇರಬೇಕಿರುವುದು ತಾರ್ಕಿಕವಾಗಿ ಸರಿಯಾದ ನಡೆ. ಆಗ ಮಾತ್ರವೇ ಆಯಾ ರಾಜ್ಯಗಳ ವೈವಿಧ್ಯಗಳನ್ನು ಅರಿತ ಶಿಕ್ಷಣ ತಜ್ಞರು ಇಂದಿನ ಯುವಜನರಿಗೆ ಅಗತ್ಯವಾದ ಶೈಕ್ಷಣಿಕ ನಾಯಕತ್ವವನ್ನು ಒದಗಿಸಬಲ್ಲರು.
ಮೇಲಾಗಿ, ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ನಾವು ಸಾಂವಿಧಾನಿಕವಾಗಿ ಒಪ್ಪಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಲು ಮತ್ತು ಅದನ್ನು ಸಾಮಾಜೀಕರಣಗೊಳಿಸಲು ‘ಶಿಕ್ಷಣವೇ ಪ್ರಮುಖ ಸಾಧನ’. ನಾವು ಆ ಸಾಧನವನ್ನೇ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ರೂಪಿಸದೇ ಒಕ್ಕೂಟ ಸರ್ಕಾರದ ಮರ್ಜಿಗೆ ಬಿಟ್ಟರೆ ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಎರಡೂ ಪರಸ್ಪರ ಸಂಬಂಧವಿಲ್ಲದ ಸ್ಥಿತಿಗೆ ಬಂದು ನಿಲ್ಲುತ್ತವೆ. ಈ ಅರ್ಥದಲ್ಲಿ ಒಕ್ಕೂಟ ಸರ್ಕಾರ ಮಾರ್ಗದರ್ಶಿ ಸೂತ್ರ ನೀಡುತ್ತದೆ. ಆದರೆ, ಉನ್ನತ ಶಿಕ್ಷಣದ ಕುರಿತ ಅಂತಿಮ ತಿರ್ಮಾನ ತೆಗೆದುಕೊಳ್ಳುವ ಅಧಿಕಾರ ರಾಜ್ಯಗಳಿಗೆ ಇರಬೇಕಿರುವುದು ಪ್ರಜಾತಾಂತ್ರಿಕ ನಡೆ. ಶಿಕ್ಷಣದ ಮೇಲಿನ ರಾಜ್ಯಗಳ ಹಕ್ಕನ್ನೇ ಮೊಟಕುಗೊಳಿಸುವ ಕ್ರಮ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಅನ್ನಿಸುತ್ತಿದೆ.
ಇದರ ಜೊತೆಗೆ, ಶೈಕ್ಷಣಿಕ ಹಿನ್ನೆಲೆ ಇಲ್ಲದ ವ್ಯಕ್ತಿ ಕೂಡ ಕುಲಪತಿ ಹುದ್ದೆಗೆ ಅರ್ಹ ಎಂಬ ಅಂಶವೂ ಚರ್ಚಾರ್ಹವಾಗಿದೆ. ಏಕೆಂದರೆ, ಸಾಮಾನ್ಯ ಆಡಳಿತ ಮತ್ತು ಶೈಕ್ಷಣಿಕ ಆಡಳಿತ ಸ್ವರೂಪದಲ್ಲಿ ಬಹಳ ವ್ಯತ್ಯಾಸಗಳಿವೆ. ವಿಶ್ವವಿದ್ಯಾಲಯಕ್ಕೆ ಬೇಕಿರುವುದು ಶೈಕ್ಷಣಿಕ ಆಡಳಿತ. ಅದು ದಕ್ಕುವುದು ಶೈಕ್ಷಣಿಕ ಕ್ಷೇತ್ರದಲ್ಲಿನ ಹಲವಾರು ವರ್ಷಗಳ ಅನುಭವದಿಂದ ಮಾತ್ರ. ಅಂದರೆ, ಒಬ್ಬ ವ್ಯಕ್ತಿ ಸಹಾಯಕ ಪ್ರಾಧ್ಯಾಪಕನಿಂದ ಪ್ರಾಧ್ಯಾಪಕನಾಗುವ ತನಕ ವಿಭಾಗದ ಮುಖ್ಯಸ್ಥ, ಡೀನ್, ಪರೀಕ್ಷಾ ಮಂಡಳಿಯ ಸದಸ್ಯ, ಪಠ್ಯರಚನಾ ಸಮಿತಿಗಳ ಸದಸ್ಯ/ಅಧ್ಯಕ್ಷ, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಇತ್ಯಾದಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಕನಿಷ್ಠ 25ರಿಂದ 30 ವರ್ಷಗಳ ಬೋಧನೆ ಮತ್ತು ಸಂಶೋಧನಾ ಅನುಭವ ಇರುತ್ತದೆ. ಈ ಅನುಭವ ಅವನಿಗೆ ಶೈಕ್ಷಣಿಕ ನಾಯಕತ್ವಕ್ಕೆ ಬೇಕಾದ ಪೂರಕ ವ್ಯಕ್ತಿತ್ವ ಒದಗಿಸುತ್ತದೆ. ಆ ಕಾರಣಕ್ಕೆ ಈವರೆಗೂ ಪ್ರಾಧ್ಯಾಪಕರಾಗಿ ಕನಿಷ್ಠ ಹತ್ತು ವರ್ಷಗಳ ಅನುಭವ ಇರುವವರಿಗೆ ಮಾತ್ರ ಕುಲಪತಿ ಹುದ್ದೆ ನೀಡಲಾಗುತ್ತಿದೆ.
ಈಗ, ಈ ಯಾವ ಅನುಭವವೂ ಇಲ್ಲದ ವ್ಯಕ್ತಿಯನ್ನು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಿದರೆ ಆ ವ್ಯಕ್ತಿಯಿಂದ ವಿಶ್ವವಿದ್ಯಾಲಯಕ್ಕೆ ಬೇಕಾದ ಶೈಕ್ಷಣಿಕ ನಾಯಕತ್ವ ಮತ್ತು ಶೈಕ್ಷಣಿಕ ಆಡಳಿತ ಎರಡನ್ನೂ ನೀಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಆತನಿಗೆ ಆ ಹಿನ್ನೆಲೆಯೇ ಇರುವುದಿಲ್ಲ. ಒಕ್ಕೂಟ ಸರ್ಕಾರ ವಾದಿಸುತ್ತಿರುವಂತೆ ಕೈಗಾರಿಕಾ ಹಿನ್ನೆಲೆಯ ವ್ಯಕ್ತಿಗಳು ವಿಶ್ವವಿದ್ಯಾಲಯಕ್ಕೆ ಬೇಕು ಎನ್ನುವ ವಾದಕ್ಕೆ ಪೂರಕವಾಗಿ, ಆ ಕ್ಷೇತ್ರದಿಂದ ಪ್ರೊಫೆಸರ್‌ಗಳ ನೇಮಕಕ್ಕೆ ಈಗಾಗಲೇ ಒಕ್ಕೂಟ ಸರ್ಕಾರ ಅನುಮತಿಯನ್ನು ನೀಡಿದೆ. ಆ ಅವಕಾಶದ ಮೂಲಕ ಅಂಥವರ ಸೇವೆಯನ್ನು ಬಳಸಿಕೊಳ್ಳಬಹುದು. ಅದಕ್ಕೆ ಯಾವ ಅಡೆತಡೆಯೂ ಇಲ್ಲ. ಆದರೆ, ಶೈಕ್ಷಣಿಕ ಅನುಭವ ಇಲ್ಲದ ವ್ಯಕ್ತಿಗಳು ವಿಶ್ವವಿದ್ಯಾಲಯಗಳ ಶೈಕ್ಷಣಿಕ ನಾಯಕತ್ವಕ್ಕೆ ನೇಮಕವಾದರೆ ಅದೊಂದು ಅಪಕ್ವ ನಡೆಯಾಗುತ್ತದೆ.
ವ್ಯಕ್ತಿಗಳು ಲಾಬಿಗಳ ಮೂಲಕ, ಹಣ ಕೊಡುವ ಮೂಲಕ ನಕಲಿ ವಿವಿಗಳಿಂದ ಪಡೆಯುತ್ತಿರುವ ಗೌರವ ಡಾಕ್ಟರೇಟ್‌ಗಳು ಚರ್ಚೆಯಲ್ಲಿರುವಂತೆ, ಮುಂದೆ ಇದೇ ವ್ಯಕ್ತಿಗಳು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳಿಗೆ ನಡೆಸುವ ಪೈಪೋಟಿ ಸಾರ್ವಜನಿಕ ಚರ್ಚೆಯಾದರೆ ಆಶ್ಚರ್ಯವಿಲ್ಲ.
ಲೇಖಕ: ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.