ADVERTISEMENT

ಪ್ರಜಾವಾಣಿ ಚರ್ಚೆ | UGC ಕರಡು ನಿಯಮಾವಳಿ: ಅಧ್ಯಾಪಕರ ಅರ್ಹತೆ ಬದಲು ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 23:30 IST
Last Updated 10 ಜನವರಿ 2025, 23:30 IST
ರಾಜಾರಾಮ ಹೆಗಡೆ
ರಾಜಾರಾಮ ಹೆಗಡೆ   
ವಿಷಯ ಜ್ಞಾನವನ್ನೇ ಗಮನದಲ್ಲಿಟ್ಟು ಕೊಂಡರೂ ಇಂದಿನ ವಾಸ್ತವದಲ್ಲಿ ಒಂದು ವಿಷಯದ ಕುರಿತು ಪರಿಣತಿ ಸಾಧಿಸುವ ಮತ್ತು ಸಮರ್ಥವಾಗಿ ಕಲಿಸುವ ಅರ್ಹತೆಗೂ, ಒಂದು ಘೋಷಿತ ಪದವಿಗೂ ಇರುವ ಸಂಬಂಧ ಸಡಿಲವಾಗಿದೆ ಎಂಬುದು ಸತ್ಯ. ಈ ದೃಷ್ಟಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರ ಅರ್ಹತೆಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತರುವ ವಿಚಾರ ಸ್ವಾಗತಾರ್ಹ

ಜನವರಿ 7ರಂದು ಕೇಂದ್ರ ಶಿಕ್ಷಣ ಸಚಿವರು ಬಿಡುಗಡೆ ಮಾಡಿದ 2025ರ ವಿಶ್ವವಿದ್ಯಾಲಯ ಅನುದಾನ ಆಯೋಗದ ಕರಡು ನಿಯಮಾವಳಿಯನ್ನು ‘ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಹಾಗೂ ಪದೋನ್ನತಿಯ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಕ್ರಮಗಳು’ ಎಂಬುದಾಗಿ ಕರೆಯಲಾಗಿದೆ.

ಕರಡು ನಿಯಮಾವಳಿಯು ಈ ಮುಂದಿನ ವಿಷಯಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ:

  1. ಅಧ್ಯಾಪಕ ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆಗಳಲ್ಲಿ ಹೆಚ್ಚು ಸಾಧ್ಯತೆಗಳಿಗೆ ಅವಕಾಶ.

    ADVERTISEMENT
  2. ನೇಮಕಾತಿ ಅಥವಾ ಪದೋನ್ನತಿಯ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಸೂಚ್ಯಂಕದ (ಎಪಿಐ) ಭಾಗವಾಗಿ ಅಂಕಗಳನ್ನು ಪರಿಗಣಿಸುವುದು ಬಿಟ್ಟು ಅಭ್ಯರ್ಥಿಯ ಪಾಠಕ್ರಮ, ಸಂಶೋಧನೆ ಇತ್ಯಾದಿಗಳ ಸಮಗ್ರ ಮೌಲ್ಯಮಾಪನ ನಡೆಸುವುದು.

  3. ಕ್ರೀಡೆ, ಕಲೆ/ ಸಾಂಪ್ರದಾಯಿಕ ಕ್ಷೇತ್ರಗಳ ಸಾಧಕರನ್ನು, ಪರಿಣತರನ್ನು, ಅಂಗವಿಕಲರನ್ನು ವಿವಿಗಳಲ್ಲಿ ನೇಮಕ ಮಾಡುವ ಹೆಚ್ಚಿನ ಸಾಧ್ಯತೆಗಳನ್ನು ಸೃಷ್ಟಿಸುವುದು.

  4. ಕೈಗಾರಿಕೆ, ಸಾರ್ವಜನಿಕ ಆಡಳಿತ ಹಾಗೂ ನೀತಿ ನಿರೂಪಣೆ ಕ್ಷೇತ್ರಗಳ ಪರಿಣತರನ್ನು ಕೂಡ ಕುಲಪತಿಗಳನ್ನಾಗಿ ನೇಮಿಸುವ ಸಾಧ್ಯತೆ. 5) ನೇಮಕಾತಿಗಳ ಹಾಗೂ ಪದೋನ್ನತಿಗಳ ಪ್ರಕ್ರಿಯೆಯ ಕುರಿತು ಪಾರದರ್ಶಕತೆಯನ್ನು ಹೆಚ್ಚಿಸುವುದು. 6) ಶೈಕ್ಷಣಿಕ ಪ್ರಕಟಣೆಗಳು ಹಾಗೂ ಪದವಿ ಶಿಕ್ಷಣಗಳಲ್ಲಿ ಭಾರತೀಯ ಭಾಷೆಗಳ ಬಳಕೆಗೆ ಉತ್ತೇಜನ ನೀಡುವುದು. 

ನೇಮಕಾತಿಯಲ್ಲಿ ಈಗ ಇರುವ ನಿಯಮದ ಪ್ರಕಾರ, ಅಧ್ಯಾಪಕ ಹುದ್ದೆಗೆ ಅರ್ಜಿ ಹಾಕುವ ಒಬ್ಬ ಅಭ್ಯರ್ಥಿಯು ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಆದರೆ, ಇದೇ ಯುಜಿಸಿ ನಿಯಮಾವಳಿಯೇ ಅಂತರ್‌ಶಿಸ್ತೀಯ ಅಧ್ಯಯನ ಹಾಗೂ ಸಂಶೋಧನೆಗಳನ್ನು ವಿಶ್ವವಿದ್ಯಾಲಯಗಳು ಪ್ರೋತ್ಸಾಹಿಸಬೇಕು ಎಂದು ಕೂಡ ನಿರ್ದೇಶಿಸುತ್ತದೆ. ಪದವಿ ಪಾಠಕ್ರಮದಲ್ಲಿ ಕೂಡ ಅಂತರ್‌ಶಿಸ್ತೀಯ ವಿಷಯಗಳನ್ನು ಒಳಗೊಳ್ಳುವುದನ್ನು ಇದೇ ಯುಜಿಸಿ ನಿಯಮಾವಳಿ ಹೆಚ್ಚು ಮೌಲಿಕ ಎಂಬುದಾಗಿ ನೋಡುತ್ತದೆ.

ಕಳೆದೆರಡು ದಶಕಗಳಿಂದೀಚೆಗೆ ಹೊಸ ಹೊಸ ಸೂಕ್ಷ್ಮ ಅಧ್ಯಯನ ಕ್ಷೇತ್ರಗಳು, ಅಂತರ್‌ಶಿಸ್ತೀಯ ಅಧ್ಯಯನ ಕ್ರೇತ್ರಗಳು ವಿವಿಗಳಲ್ಲಿ ಪದವಿ ವಿಷಯಗಳಾಗುತ್ತಿವೆ ಹಾಗೂ ಉದ್ಯೋಗದ ಪ್ರಸ್ತುತತೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇಂಥ ವಾಸ್ತವದಲ್ಲಿ ನೇಮಕಾತಿಗೆ ಪದವಿಯನ್ನೇ ಪ್ರಧಾನವಾಗಿ ತೆಗೆದುಕೊಳ್ಳುವುದು ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಸಂಶೋಧಕರಿಗೂ, ಆಡಳಿತಗಾರರಿಗೂ ಕಠಿಣ ಪ್ರಾಯೋಗಿಕ ಸಮಸ್ಯೆಗಳನ್ನೂ, ಸವಾಲುಗಳನ್ನೂ ಒಡ್ಡುತ್ತಿವೆ. ಇಂಥ ಸಮಸ್ಯೆಗಳಿಗೆ ಹೊರತಾಗಿ ವಿಷಯ ಜ್ಞಾನವನ್ನೇ ಗಮನದಲ್ಲಿಟ್ಟುಕೊಂಡರೂ ಇಂದಿನ ವಾಸ್ತವದಲ್ಲಿ ಒಂದು ವಿಷಯದ ಕುರಿತು ಪರಿಣತಿ ಸಾಧಿಸುವ ಮತ್ತು ಸಮರ್ಥವಾಗಿ ಕಲಿಸುವ ಅರ್ಹತೆಗೂ, ಒಂದು ಘೋಷಿತ ಪದವಿಗೂ ಇರುವ ಸಂಬಂಧ ಸಡಿಲವಾಗಿದೆ ಎಂಬುದು ಸತ್ಯ. ಈ ದೃಷ್ಟಿಯಿಂದ ಅಧ್ಯಾಪಕರ ಅರ್ಹತೆಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತರುವ ವಿಚಾರ ಸ್ವಾಗತಾರ್ಹ. 

ಶೈಕ್ಷಣಿಕ ಪ್ರಕಟಣೆ ಹಾಗೂ ಪದವಿ ಶಿಕ್ಷಣದಲ್ಲಿ ಭಾರತೀಯ ಭಾಷೆಗಳಿಗೆ ಉತ್ತೇಜನ ನೀಡುವ ವಿಚಾರವು ಬಹುಶಃ ಕರಡು ನಿಯಮಾವಳಿಯಲ್ಲೇ ಅತ್ಯಂತ ಪ್ರಸ್ತುತವಾದುದು. ಪ್ರಾದೇಶಿಕ ಭಾಷೆಯಲ್ಲಿ ಸಂಶೋಧನಾ ಪ್ರಕಟಣೆ ನಡೆಸುವುದನ್ನು ಈಗಿರುವ ನಿಯಮಾವಳಿ ಉತ್ತೇಜಿಸುವುದಿಲ್ಲ. ಯುಜಿಸಿ ನಿಯಮಗಳು ತಿಳಿಸುವ ಅಂತರರಾಷ್ಟ್ರೀಯ ಪ್ರಮಾಣ ಲಕ್ಷಣಗಳಿರುವ ಸಂಶೋಧನಾ ಪತ್ರಿಕೆಗಳ ವ್ಯವಸ್ಥೆಯು ಪ್ರಾದೇಶಿಕ ಭಾಷೆಯಲ್ಲಿ ಬೆಳೆದುಬಂದಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಅವು ಬೆಳೆಯುವ ಸಾಧ್ಯತೆಗಳು ಸದ್ಯದಲ್ಲಂತೂ ಕಾಣಿಸುವುದಿಲ್ಲ.

ಹಾಗಾಗಿ, ಭಾರತೀಯ ಸಂಶೋಧಕರಿಗೆ ಇಂಗ್ಲಿಷ್‌ ಭಾಷೆಯಲ್ಲೇ ಪ್ರಕಟಿಸುವ ಅನಿವಾರ್ಯವಿದೆ. ಆದರೆ, ಯುಜಿಸಿಯ ಈ ನಿಲುವು ಪ್ರಾಯೋಗಿಕವಾಗಿ ಸಫಲವಾಗಿಲ್ಲ. ಅದಕ್ಕೆ ಕಾರಣ ಎಂದರೆ, ಭಾರತದಲ್ಲಿನ ವಿವಿಧ ರಾಜ್ಯಗಳ ವಿವಿಗಳು ಅನಧಿಕೃತವಾಗಿ ಪ್ರಾದೇಶಿಕ ಭಾಷಾ ಮಾಧ್ಯಮಕ್ಕೆ ಹೊರಳಿಕೊಂಡು ಕೆಲವು ದಶಕಗಳೇ ಕಳೆದಿವೆ. ಎಷ್ಟರ ಮಟ್ಟಿಗೆ ಎಂದರೆ, ಇಂದು ಈ ವಿವಿಗಳ ಸಮಾಜ ವಿಜ್ಞಾನ ವಿಷಯಗಳ ಪದವಿಗಳಲ್ಲಿ ಹಾಗೂ ಪಿಎಚ್‌.ಡಿ ಸಂಶೋಧನೆಗಳಲ್ಲಿ ಇಂಗ್ಲಿಷ್ ಅನ್ನು ಆಯ್ಕೆ ಮಾಡಿ ಕೊಳ್ಳುವವರು ಬಹುತೇಕ ಕಾಣೆಯಾಗಿದ್ದಾರೆ. ಇಂಥವರಿಗೆ ಕಲಿಸುವವರು ಹಾಗೂ ಮಾರ್ಗದರ್ಶಕರೂ ಪ್ರಾದೇಶಿಕ ಭಾಷೆಯಲ್ಲಿ ಪರಿಣತರಿರಬೇಕಾಗುತ್ತದೆ. ಇಂಥ ವಾಸ್ತವದಲ್ಲಿ ಇಂಗ್ಲಿಷ್‌ ಪ್ರಕಟಣೆಗಳನ್ನು ಒತ್ತಾಯಿಸಿದ ಪರಿಣಾಮ ಖೊಟ್ಟಿ ಸಂಶೋಧನಾ ಪತ್ರಿಕೆಗಳೂ, ಪ್ರಕಟಣೆಗಳೂ ಜಾಲತಾಣಗಳಲ್ಲಿ ತುಂಬಿಹೋಗಿವೆ.

ಇದು ಪ್ರಾಯೋಗಿಕ ಸಮಸ್ಯೆಯಾದರೆ, ಇಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಇನ್ನೊಂದು ಸಮಸ್ಯೆಯೂ ಇದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ನಿಯಮಾವಳಿಗೂ ಹೊರತಾಗಿ ಪ್ರಾದೇಶಿಕ ಭಾಷೆಗಳಲ್ಲಿ ಏಕೆ ಶಿಕ್ಷಣವು ಚಾಲ್ತಿಯಲ್ಲಿ ಬಂದಿತೆಂದರೆ, ಸಂವಹನದ ಸಮಸ್ಯೆಯನ್ನು ಪರಿಹರಿಸುವುದಕ್ಕೆ. ಈಗಂತೂ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡದಿದ್ದರೆ, ಸಂಶೋಧನೆಗೆ ಅವಕಾಶ ನೀಡದಿದ್ದರೆ ಪ್ರಾದೇಶಿಕ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಶಿಕ್ಷಣವೇ ನಿಂತುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಪ್ರಾದೇಶಿಕ ಭಾಷೆಯಲ್ಲಿ ಸಂಶೋಧನೆಯನ್ನು ಒಪ್ಪಿಕೊಳ್ಳ ಬಹುದಾದರೆ, ಇಂಗ್ಲಿಷ್‌ನಲ್ಲೇ ಅದರ ಪ್ರಕಟಣೆ ನಡೆಸಬೇಕೆಂದು ನಿರ್ಬಂಧಿಸುವುದು ಒಂದು ಪ್ರಾಯೋಗಿಕ ದೋಷವಾಗುತ್ತದೆ. ಹೀಗೆ, ಯುಜಿಸಿಯ ನಿಯಮಗಳು ಅರ್ಥ ಕಳೆದುಕೊಂಡು ಹಲವು ದಶಕಗಳೇ ಕಳೆದಿವೆ. ಮತ್ತೆ, ಇಂಗ್ಲಿಷ್ ಭಾಷೆಯಲ್ಲಿ ಬರೆದರೆ ಮಾತ್ರ ಉತ್ತಮ ಸಂಶೋಧನೆಯಾಗುತ್ತದೆ, ಪ್ರಾದೇಶಿಕ ಭಾಷೆಯಲ್ಲಿ ಬರೆದದ್ದು ಕಡಿಮೆ ಗುಣಮಟ್ಟದ್ದು ಎಂದು ಸಮೀಕರಿಸುವುದು ಮೂರ್ಖತನದ ಪರಮಾವಧಿ ಎನ್ನುವುದರಲ್ಲಿ ಸಂದೇಹವಿಲ್ಲ. ಈ ದಿಸೆಯಲ್ಲಿ 2025ರ ಕರಡು ನಿಯಮಾವಳಿಯು ಸ್ವಾಗತಾರ್ಹವಾಗಿದೆ.

ಇನ್ನುಳಿದಂತೆ, ನಿಯಮಾವಳಿಯಲ್ಲಿನ ಇತರೆ ಬದಲಾವಣೆಗಳು, ಅವುಗಳನ್ನು ಜಾರಿಗೊಳಿಸಬೇಕಾದ ಕ್ರಮಗಳನ್ನು ಹೇಗೆ ರಚಿಸಿ ಪ್ರಯೋಗಕ್ಕೆ ತರುತ್ತವೆ ಎಂಬುದರ ಮೇಲೆ ನಿಂತಿವೆ. ನೇಮಕಾತಿಯ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವುದು ಎಂದರೇನು? ಕೈಗಾರಿಕೆ ಮುಂತಾದ ಇತರ ಕ್ಷೇತ್ರಗಳಲ್ಲಿನ ಜನರು ನಮಗೆ ಬೇಕಾದ ಪರಿಣತರು ಎಂಬುದಾಗಿ ನಿಷ್ಕರ್ಷಿಸುವ ವಿಧಾನಗಳು ಯಾವುವು? ಶಿಕ್ಷಕರ ಸಮಗ್ರ ಮೌಲ್ಯಮಾಪನವನ್ನು ಮಾಡಲು ಸೂತ್ರಗಳು ಯಾವುವು? ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯ ಸಂದರ್ಭದಲ್ಲಿ ನಾವು ಕಂಡುಕೊಂಡ ಸತ್ಯವೆಂದರೆ, ನಿಯಮಗಳು ಹೆಚ್ಚಾಗುವುದು ವ್ಯವಸ್ಥೆ ಹಳ್ಳ ಹಿಡಿಯುತ್ತಿರುವ ಸೂಚನೆ ಅಷ್ಟೆ. ಏಕೆಂದರೆ, ನಮ್ಮ ಅನುಭವ ತಿಳಿಸುವಂತೆ ನಿಯಮಗಳು ಹೆಚ್ಚಾದಷ್ಟೂ ಈ ವ್ಯವಸ್ಥೆ ಸುಧಾರಿಸುವ ಬದಲು ಇದರೊಳಗೆ ಕೆಲಸ ಮಾಡುವ ಸಾಧ್ಯತೆಗಳೇ ಮೊಟಕಾಗುತ್ತವೆ ಹಾಗೂ ಭ್ರಷ್ಟ ಆಚರಣೆಗಳು ಹೆಚ್ಚಾಗುತ್ತಿವೆ.  

ಐವತ್ತು ವರ್ಷಗಳ ಹಿಂದೆ ಈ ನಿಯಮಗಳಲ್ಲಿ ಹೆಚ್ಚಿನವು ಇರಲೇ ಇಲ್ಲ. ಆದರೆ, ಅಂದಿನ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವು ಈಗ ವಿಶ್ವವಿದ್ಯಾಲಯಗಳಿಂದಲೇ ಕಾಲ್ಕಿತ್ತಿರುವಂತಿದೆ. ಕುಲಪತಿಗಳನ್ನು ಹಾಗೂ ಅಧ್ಯಾಪಕರನ್ನು ಯಾರೇ ನೇಮಕ ಮಾಡಲಿ, ನೇಮಕಾತಿಗಳಲ್ಲಿ ಹಣದ ಥೈಲಿಯೇ ನಿರ್ಣಾಯಕವಾಗುವುದಾದರೆ ಅಥವಾ ಶೈಕ್ಷಣಿಕೇತರ ಹಿತಾಸಕ್ತಿಗಳೇ ನಿರ್ಣಾಯಕವಾಗುವುದಾದರೆ, ಎಷ್ಟು ನಿಯಮಗಳಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ. ನಿಯಮಗಳ ಉದ್ದೇಶವನ್ನು ತಮ್ಮ ಸ್ವಾರ್ಥಕ್ಕಾಗಿ ಗಾಳಿಗೆ ತೂರುವವರೇ ತುಂಬಿದ ಲೋಕದಲ್ಲಿ ಕೇವಲ ನಿಯಮಗಳ ಬದಲಾವಣೆ ಯಾವ ರೋಮಾಂಚನವನ್ನೂ ಹುಟ್ಟಿಸಲಾರದು. ಇಂಥ ಸಂದರ್ಭದಲ್ಲಿ ಯುಜಿಸಿಯಂಥ ಸಂಸ್ಥೆಗಳು ನಿಯಮಾವಳಿಗಿಂತ ಅದರ ಅನುಷ್ಠಾನದ ಕ್ರಮಗಳು ಮತ್ತು ಅವುಗಳ ಪ್ರಾಯೋಗಿಕ ಸಮಸ್ಯೆಗಳ ಕುರಿತು ಹೆಚ್ಚು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಲೇಖಕ: ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.