ADVERTISEMENT

ಅನಗತ್ಯ ಹಸ್ತಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಭಾರತೀಯ ಜನತಾ ಪಕ್ಷದ ಆಂತರಿಕ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮೂಗು ತೂರಿಸುತ್ತಿರುವುದು ಇದು ಮೊದಲ ಸಲವಲ್ಲ.

ಪಕ್ಷದ ಪದಾಧಿಕಾರಿಗಳ ನೇಮಕದಿಂದ ಹಿಡಿದು ಸಂಪುಟಕ್ಕೆ ಯಾರನ್ನೂ ಸೇರಿಸಿಕೊಳ್ಳಬೇಕೆಂಬ ವಿಷಯದ ವರೆಗೆ ಎಲ್ಲವನ್ನೂ ಸಂಘದ ನಾಯಕರ ಜತೆ ಸಮಾಲೋಚನೆ ನಡೆಸಬೇಕೆಂಬ ಅಲಿಖಿತ ನಿಯಮವನ್ನು ಬಿಜೆಪಿ ಪಾಲಿಸುತ್ತಾ ಬಂದಿದೆ.
 
ವಾಜಪೇಯಿ- ಅಡ್ವಾಣಿ ಜೋಡಿ ಜತೆಯಲ್ಲಿದ್ದಷ್ಟು ದಿನ ಒಂದು ಹಂತದವರೆಗೆ ಬಿಜೆಪಿ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಪಕ್ಷದ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು.

ಕೇಂದ್ರದಲ್ಲಿ ಅಧಿಕಾರ ನಷ್ಟ ಮತ್ತು ಹಿರಿಯ ನಾಯಕ ವಾಜಪೇಯಿ ನಿರ್ಗಮನದ ನಂತರ ಆರ್‌ಎಸ್‌ಎಸ್ ಒತ್ತಡವನ್ನು ಎದುರಿಸುವ ಶಕ್ತಿ ಅದರಲ್ಲಿಯೂ ಉಳಿದಿಲ್ಲ. ಈಗ ಒಮ್ಮಿಂದೊಮ್ಮೆಲೇ ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮೊದಲಾದವರು ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದಿದ್ದಾರೆ.

ಪಕ್ಷದೊಳಗೆ ಹುಟ್ಟಿಕೊಂಡಿರುವ ಈ ಅಧಿಕಾರದ ಸಂಘರ್ಷವನ್ನು ನಿರ್ವಹಿಸುವ ಶಕ್ತಿ ಪಕ್ಷದ ಈಗಿನ ದುರ್ಬಲ ನಾಯಕತ್ವಕ್ಕೆ ಇಲ್ಲ. ಇದರಿಂದಾಗಿಯೇ ಸಂಘದ ನಾಯಕರ ಕೈ ಮೇಲಾಗಿದೆ. ಅಡ್ವಾಣಿಯವರು ಭ್ರಷ್ಟಾಚಾರದ ವಿರೋಧಿ ಯಾತ್ರೆಯ ನಿರ್ಧಾರವನ್ನು ಹಠಾತ್ತನೇ ಪ್ರಕಟಿಸಿದಾಗಲೇ ಆರ್‌ಎಸ್‌ಎಸ್ ಅಸಮಾಧಾನ ವ್ಯಕ್ತಪಡಿಸಿತ್ತು.

ಇದನ್ನು ಶಮನಗೊಳಿಸಲಿಕ್ಕಾಗಿಯೇ ಅಡ್ವಾಣಿಯವರು ನಾಗಪುರಕ್ಕೆ ಹೋಗಿ ವಯಸ್ಸಿನಲ್ಲಿ ತಮಗಿಂತ 23 ವರ್ಷಗಳಷ್ಟು ಕಿರಿಯರಾದ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಆಶೀರ್ವಾದ ಪಡೆದು ಅವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಆದರೆ ಭಾಗವತ್ ಅವರು ಇದರಿಂದಲೂ ಸಂತೃಪ್ತರಾದಂತಿಲ್ಲ. ಪ್ರಧಾನಿ ಹುದ್ದೆಗೆ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರೆ ಮಾತ್ರ ಯಾತ್ರೆಗೆ ಬೆಂಬಲ ನೀಡುವುದಾಗಿ ಆರ್‌ಎಸ್‌ಎಸ್ ಹೇಳಿದೆಯಂತೆ.

ಪ್ರಧಾನಿ ಅಭ್ಯರ್ಥಿಯಾಗಿ ಯಾರನ್ನು ಬಿಂಬಿಸಬೇಕೆಂಬುದು ರಾಜಕೀಯ ಪಕ್ಷವೊಂದರ ಆಂತರಿಕ ವಿಚಾರ. ಅದರಲ್ಲಿ ಪಕ್ಷದ ಸದಸ್ಯರಲ್ಲದವರು ತಲೆಹಾಕಬಾರದು. ಹಾಗೆ ನೋಡಿದರೆ ಚುನಾವಣೆಯ ಕಾಲದಲ್ಲಿ ಯಾರನ್ನಾದರೂ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದೇ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು.

ಪ್ರಧಾನಿ ಇರಲಿ ಇಲ್ಲವೇ ಮುಖ್ಯಮಂತ್ರಿ ಇರಲಿ, ಅವರನ್ನು ಆಯ್ಕೆ ಮಾಡಬೇಕಾಗಿರುವುದು ಶಾಸಕಾಂಗ ಪಕ್ಷ. ಇದು ತಮ್ಮ ಪ್ರತಿನಿಧಿಗಳ ಮೂಲಕ ಜನತೆ ಪರೋಕ್ಷವಾಗಿ ಚಲಾಯಿಸುವ ಅಧಿಕಾರ. ನಮ್ಮಲ್ಲಿರುವುದು ಅಧ್ಯಕ್ಷೀಯ ವ್ಯವಸ್ಥೆ ಅಲ್ಲ.
 
ಒಂದೊಮ್ಮೆ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಲೇ ಬೇಕಾದ ಅನಿವಾರ್ಯತೆ ಉದ್ಭವಿಸಿದರೆ ಸಂಬಂಧಿತ ರಾಜಕೀಯ ಪಕ್ಷ ಆಂತರಿಕ ಚರ್ಚೆ- ಸಮಾಲೋಚನೆ ಮೂಲಕ ನಿರ್ಧಾರ ಕೈಗೊಳ್ಳಬೇಕು.

ಇದರಲ್ಲಿ ಹೊರಗಿನವರ ಕೈವಾಡ ಸಲ್ಲದು. ಆರ್‌ಎಸ್‌ಎಸ್ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಅಧಿಕೃತವಾಗಿ ಹೇಳಿಕೊಳ್ಳುತ್ತಿದೆ. ಆ ಕ್ಷೇತ್ರಕ್ಕೆ ತಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸಿ ರಾಜಕೀಯವನ್ನು ಬಿಜೆಪಿಗೆ ಬಿಟ್ಟುಕೊಡುವುದು ಒಳಿತು.

  ಕಾಂಗ್ರೆಸ್ ಪಕ್ಷಕ್ಕೆ ಪರ‌್ಯಾಯವಾಗಿ ಇನ್ನೊಂದು ರಾಷ್ಟ್ರೀಯ ಪಕ್ಷ ಬೆಳೆಯಲು ದೇಶದ ರಾಜಕೀಯದಲ್ಲಿ ಈಗಲೂ ಜಾಗ ಇದೆ. ಅದನ್ನು ತುಂಬಲು ಭಾರತೀಯ ಜನತಾ ಪಕ್ಷಕ್ಕೆ ಸಾಮರ್ಥ್ಯವೂ ಇದೆ. ಆರ್‌ಎಸ್‌ಎಸ್ ಅದಕ್ಕೆ ಅವಕಾಶ ಮಾಡಿಕೊಡಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.