ADVERTISEMENT

ಅಪಾಯಕಾರಿ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರಗಳನ್ನು (ಎನ್‌ಸಿಟಿಸಿ) ರಾಜ್ಯಗಳಲ್ಲಿ ತೆರೆಯುವುದಕ್ಕೆ ಕಾಂಗ್ರೆಸ್ಸೇತರ ಸರ್ಕಾರಗಳ ವಿರೋಧಕ್ಕೆ ರಾಜಕೀಯ ಕಾರಣದ ವಿನಾ ಅನ್ಯ ನೆಪಗಳಿಲ್ಲ.
 
ದೇಶದ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿರುವ ಭಯೋತ್ಪಾದನೆ ನಿಗ್ರಹ ಕೇಂದ್ರ ಸರ್ಕಾರದ ಹೊಣೆಗಾರಿಕೆ.
 
ರಾಜ್ಯಗಳಲ್ಲಿ ಎನ್‌ಸಿಟಿಸಿ ಆರಂಭಿಸುವ ಉದ್ದೇಶವೇ ಭಯೋತ್ಪಾದಕ ಬೆದರಿಕೆ ಕುರಿತ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡುವುದಾಗಿರುವುದರಿಂದ ಈ ಕ್ರಮವನ್ನು, ಕಾನೂನು ವ್ಯವಸ್ಥೆಯನ್ನು ರಕ್ಷಿಸುವ ರಾಜ್ಯಗಳ ಹೊಣೆಗಾರಿಕೆಯ ಮೇಲೆ ಕೇಂದ್ರದ ಸವಾರಿ ಎಂದು ವಿಶ್ಲೇಷಿಸಲಾಗದು.
 
ಭಯೋತ್ಪಾದಕ ಕೃತ್ಯಗಳನ್ನು ಮಾಡಿ ಅಡಗಿಕೊಂಡವರನ್ನು ಹುಡುಕಿ ಬಂಧಿಸುವುದಕ್ಕೆ ಕೇಂದ್ರದ ಪಡೆಗಳಿಗೆ ರಾಜ್ಯಗಳಲ್ಲಿ ಮುಕ್ತ ಅವಕಾಶ ನೀಡುವ ಈ ಕ್ರಮವನ್ನು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಎಂದು ಬಣ್ಣಿಸುವುದಕ್ಕೆ ಆಧಾರವಿಲ್ಲ.
 
ಅಷ್ಟಕ್ಕೂ ಈ ಎನ್‌ಸಿಟಿಸಿ ಪಡೆ ರಾಜ್ಯಗಳಲ್ಲಿ ಕಾನೂನು ವ್ಯವಸ್ಥೆಯ ಉಸ್ತುವಾರಿಗೆ ನಿಯೋಜಿತವಾಗುವಂಥದ್ದಲ್ಲ.
 
ಭಯೋತ್ಪಾದನೆ ನಿಗ್ರಹಕ್ಕೆ ವಿಶೇಷ ಪರಿಣಿತಿ ಪಡೆದ ಕೇಂದ್ರದ ಸಿಬ್ಬಂದಿಗೆ ತಮ್ಮಲ್ಲಿರುವ ಮಾಹಿತಿಯನ್ನು ರಾಜ್ಯಗಳು ಒದಗಿಸುವ ಮೂಲಕ ಉಗ್ರರ ದಮನಕ್ಕೆ ಸಹಕಾರ ನೀಡದೆ, ಹೀಗೆ ಕ್ಷುಲ್ಲಕ ನೆಪಗಳನ್ನು ಮುಂದೆ ಮಾಡಿ ವಿರೋಧಿಸುವುದು ಭಯೋತ್ಪಾದನೆ ಕೃತ್ಯಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತಾಗುತ್ತದೆ. ಇಂಥ ಅಪಾಯಕಾರಿ ನಿಲುವನ್ನು ರಾಜ್ಯ ಸರ್ಕಾರಗಳು ತಾಳುತ್ತಿರುವುದು ಖಂಡನೀಯ.

ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಕಂಟಕವಾಗಿ ಬೆಳೆದಿರುವ ಭಯೋತ್ಪಾದನೆಗೆ ಈಚಿನ ದಶಕಗಳಲ್ಲಿ ಭಾರತ ಗುರಿಯಾಗಿದೆ. ದೆಹಲಿ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳು ಭಯೋತ್ಪಾದಕರ ದಾಳಿಯ ಗುರಿಯಾಗಿವೆ.
 
ಎಷ್ಟೇ ಎಚ್ಚರ ವಹಿಸಿದರೂ ಭಯೋತ್ಪಾದಕ ಕೃತ್ಯಗಳನ್ನು ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ರಾಜಧಾನಿ ದೆಹಲಿ ಸೇರಿದಂತೆ ದೇಶದ ಅನೇಕ ಕಡೆ ಬಾಂಬ್ ದಾಳಿಯ ಪ್ರಕರಣಗಳು ನಡೆಯುತ್ತಿವೆ.
 
ಕಳೆದ ವಾರವಷ್ಟೇ ಪ್ರಧಾನಿ ನಿವಾಸದ ಸನಿಹದಲ್ಲಿಯೇ ಇಸ್ರೇಲ್ ರಾಯಭಾರ ಕಚೇರಿಯ ವಾಹನ ಭಯೋತ್ಪಾದಕರ ದುಷ್ಕೃತ್ಯಕ್ಕೆ ಗುರಿಯಾಗಿದೆ. ಎಲ್ಲ ಕಡೆಯೂ ಸದಾಕಾಲ ಕಟ್ಟೆಚ್ಚರ ವಹಿಸುವಂತಹ ಗಂಭೀರ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಒತ್ತಡದಲ್ಲಿದೆ.
 
ಭಾರತದ ಮೇಲೆ ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲೂ ಕ್ಷೋಭೆ ಎಬ್ಬಿಸುವಂಥ ಮತಾಂಧ ಪ್ರವೃತ್ತಿ ಕ್ರಿಯಾಶೀಲವಾಗಿರುವುದರಿಂದ ರಾಜ್ಯ ಸರ್ಕಾರಗಳ ಹೊಣೆಗಾರಿಕೆಯೂ ಹೆಚ್ಚಿದೆ.

ರಾಜ್ಯಗಳಲ್ಲಿನ ಬೇಹುಗಾರಿಕೆ ವ್ಯವಸ್ಥೆ ಆಡಳಿತಾರೂಢ ಪಕ್ಷಗಳಿಗೆ ಅನುಕೂಲವಾಗುವಂತೆ ಸ್ಥಳೀಯ ರಾಜಕೀಯ ವಿರೋಧಿಗಳ ಚಟುವಟಿಕೆಗಳ ಮೇಲೆ ಕಣ್ಣಿಡುವುದಕ್ಕೆ ದುರ್ಬಳಕೆ ಆಗುತ್ತಿರುವುದರಿಂದ ಅವುಗಳಿಂದ ಭಯೋತ್ಪಾದನೆ ಕೃತ್ಯಗಳ ಕುರಿತ ಮಾಹಿತಿ ನಿರೀಕ್ಷಿಸುವಂತಿಲ್ಲ.
 
ಕೇಂದ್ರ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರ ಹಿಡಿದಿರುವ ಮಾತ್ರಕ್ಕೆ ದೇಶದ ಭದ್ರತೆಗೆ ಸವಾಲು ಒಡ್ಡುವ ಭಯೋತ್ಪಾದಕ ಶಕ್ತಿಗಳ ವಿರುದ್ಧ ಸನ್ನದ್ಧತೆ ದುರ್ಬಲವಾಗಬಾರದು.

ಎನ್‌ಸಿಟಿಸಿ ಕ್ರಮದ ವಿರುದ್ಧ ಕೆಲವು ರಾಜ್ಯಗಳು ತಾಳಿದ ನಿಲುವು ಇಂಥ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಇದರಿಂದ ದೇಶದ ಸಮಗ್ರತೆಗೆ ಧಕ್ಕೆಯಾಗುವುದನ್ನು ಈ ರಾಜಕೀಯ ಪಕ್ಷಗಳು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.