ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2014–15ನೇ ಸಾಲಿನ ಪೂರ್ಣ ಪ್ರಮಾಣದ ರಾಜ್ಯ ಮುಂಗಡ ಪತ್ರದಲ್ಲಿ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಇಲ್ಲದಿರುವುದು ಅಚ್ಚರಿ ಮೂಡಿಸದು. ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಮೂಲಕ ಮುಖ್ಯಮಂತ್ರಿಗಳು ಜಾಣ್ಮೆ ಮೆರೆದಿದ್ದಾರೆ. ಆದರೆ, ಒಟ್ಟಾರೆ ಅರ್ಥ ವ್ಯವಸ್ಥೆಯಲ್ಲಿ ಕೈಗಾರಿಕಾ ವಲಯಕ್ಕೆ ಸೂಕ್ತ ಆದ್ಯತೆ ನೀಡದಿರುವುದರಿಂದ ಸಮತೋಲನ ತಪ್ಪಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಕಾರಣ ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರು ‘ಜನಪ್ರಿಯ’ ಹಾದಿ ತುಳಿದಿದ್ದಾರೆ.
ಮತದಾರರನ್ನು ಸಂಪ್ರೀತಗೊಳಿಸಲು ಸಾಕಷ್ಟು ಕಸರತ್ತು ಮಾಡಿರುವುದು ಕಂಡುಬರುತ್ತದೆ. ಜನಸಾಮಾನ್ಯರಷ್ಟೇ ಅಲ್ಲದೇ ವಣಿಕ ಸಮುದಾಯಕ್ಕೂ ವಾಣಿಜ್ಯ ತೆರಿಗೆ ಹೊರೆಯಿಂದ ವಿನಾಯ್ತಿ ನೀಡಲಾಗಿದೆ. ಭತ್ತ, ಅಕ್ಕಿ, ಗೋಧಿ, ಬೇಳೆಕಾಳು ಮತ್ತು ಅವುಗಳ ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರೆಸಲಾಗಿದೆ. ಜೊತೆಗೆ ‘ಭಾಗ್ಯ’ ಯೋಜನೆಗಳ ಪಟ್ಟಿಯಲ್ಲಿ ಈಗ ಕೃಷಿ ಹಾಗೂ ಗೃಹ ಸೇರ್ಪಡೆಯಾಗಿವೆ.
ರೈತರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಲು ಯತ್ನಿಸಿರುವುದು ಸ್ವಾಗತಾರ್ಹ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದಲೇ ಮುಸ್ಲಿಮರು, ಕ್ರೈಸ್ತರಿಗಾಗಿ ಹೆಚ್ಚುವರಿ ಅನುದಾನ ನೀಡಿರುವುದು ಸ್ಪಷ್ಟಗೊಳ್ಳುತ್ತದೆ. ಬೆಂಗಳೂರಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಒತ್ತು ನೀಡಿದ್ದರೂ, ರಾಜ್ಯದ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡುವ ರಾಜಧಾನಿಗೆ ನಿಗದಿ ಮಾಡಿರುವ ಅನುದಾನ ಸಾಲದು.
ಬಿಯರ್ ಮತ್ತು ದೇಶಿ ಮದ್ಯದ ಮೇಲಿನ ಅಬಕಾರಿ ಸುಂಕ ಮತ್ತು ಮದ್ಯ ತಯಾರಿಕಾ ಘಟಕಗಳ ಮೇಲಿನ ತೆರಿಗೆ ಏರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮಾರಾಟವಾಗುವ ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಪ್ರಮಾಣ ಕಡಿಮೆ ಮಾಡುವ ಮೂಲಕ ಗರಿಷ್ಠ ಪ್ರಮಾಣದ ‘ವ್ಯಾಟ್’ ಸಂಗ್ರಹದ ಮೂಲಕವೂ ವರಮಾನ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಈ ಕ್ರಮಗಳು ಬೊಕ್ಕಸವನ್ನು ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿ ಮಾಡಲಾರವು.
ರಾಜ್ಯದ ಅರ್ಥವ್ಯವಸ್ಥೆಯನ್ನು ಗರಿಷ್ಠ ಬೆಳವಣಿಗೆಯ ಪಥದತ್ತ ಕೊಂಡೊಯ್ಯಲು ಕ್ರಮ ಕೈಗೊಂಡಿರುವುದಾಗಿ ಬಜೆಟ್‌ನಲ್ಲಿ ಪುನರುಚ್ಚರಿಸಿದ್ದರೂ, ಅಂತಹ ಲಕ್ಷಣಗಳೇನೂ ಕಾಣುತ್ತಿಲ್ಲ. ರಾಜ್ಯದ ಹಣಕಾಸು ಸ್ಥಿತಿಗತಿ ತೃಪ್ತಿದಾಯಕವಾಗಿಲ್ಲ ಎಂದು ಹೇಳಿಕೊಂಡಿದ್ದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ‘ಆರ್ಥಿಕ ಆರೋಗ್ಯ’ ಸುಧಾರಣೆಗೆ ಅಗತ್ಯವಾದ ಗಮನ ಹರಿಸದಿರುವುದು ವಿಷಾದನೀಯ.
ಹೆಚ್ಚುವರಿ ಸಬ್ಸಿಡಿ ಹೊರೆಯ ಫಲವಾಗಿ ಅಸಮತೋಲನ ಉಂಟಾಗಿದೆ ಎಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿದ್ದರೂ, ಅದಕ್ಕೆ ಕಿವಿಗೊಡದಿರುವುದು ಜಾಣತನವಲ್ಲ. ಜನಸಾಮಾನ್ಯರ ಮೇಲೆ ಹೊರೆಯಾಗದಂತೆಯೂ ವರಮಾನ ಹೆಚ್ಚಿಸಿಕೊಳ್ಳಲು ಇತರ ಅನೇಕ ಮಾರ್ಗೋಪಾಯಗಳಿದ್ದರೂ ಅವುಗಳ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ.
ವರಮಾನ ಸಂಗ್ರಹ ಗುರಿಯನ್ನು ಪ್ರಸಕ್ತ ಸಾಲಿನ ರೂ. 37,740 ಕೋಟಿಗಳಿಂದ ರೂ. 42,000 ಕೋಟಿಗಳಿಗೆ ನಿಗದಿ ಮಾಡಲಾಗಿದೆ. ವಿತ್ತೀಯ ಕೊರತೆ, ಒಟ್ಟು ಸಾಲ ಮತ್ತಿತರ ಆಯವ್ಯಯ ಮಾನದಂಡಗಳು ‘ರಾಜ್ಯ ವಿತ್ತೀಯ ಹೊಣೆಗಾರಿಕೆ ಕಾಯ್ದೆ’ ವ್ಯಾಪ್ತಿ ಒಳಗೆ ಇರುವುದು ಸಮಾಧಾನಕರ ಸಂಗತಿ. ಆದರೆ, ಯೋಜನಾ ವೆಚ್ಚಕ್ಕಿಂತ ಯೋಜನೇತರ ವೆಚ್ಚಗಳೇ ಹೆಚ್ಚಾಗಿ ರಾಜ್ಯ ಸರ್ಕಾರ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವ ಅಪಾಯ ತಳ್ಳಿ ಹಾಕುವಂತಿಲ್ಲ. ಒಟ್ಟಾರೆ ಬಜೆಟ್ ಆಶಯದಲ್ಲಿ ಅಭಿವೃದ್ಧಿ ಕಡೆಗಣನೆಗೆ ಗುರಿಯಾಗಿರುವುದು ಮಾತ್ರ ಸಮರ್ಥನೀಯವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.