ADVERTISEMENT

ಅಹಂಕಾರದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಪತ್ನಿ ಮೇಲೆ ಹಲ್ಲೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಚಿತ್ರನಟ ದರ್ಶನ್ ವರ್ತನೆ ಅವರ ವಿಕೃತ ಮನಸ್ಥಿತಿಯ ಸಂಕೇತ. ಇದನ್ನು ಅವರ ಕುಟುಂಬದ ಜಗಳ ಎಂದು ಉಪೇಕ್ಷಿಸುವಂತಿಲ್ಲ.
 
ಸಿನಿಮಾಗಳಲ್ಲಿ ಸರ್ವಗುಣ ಸಂಪನ್ನ ನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ ಅವರ ವೈಯಕ್ತಿಕ ಬದುಕು ಅಕ್ಷರಶಃ ಅದಕ್ಕೆ ತದ್ವಿರುದ್ಧವಾಗಿದೆ. ಹಲ್ಲೆಗೊಳಗಾಗಿ ನೊಂದ ಹೆಣ್ಣುಮಗಳಿಗೆ ಸಾಂತ್ವನ ನೀಡುವುದಕ್ಕಿಂತ, ಬಂಧನಕ್ಕೊಳಗಾದ ದರ್ಶನ್ ಪರ ಬೆಂಬಲವನ್ನೇ ಮುಖ್ಯ ಗುರಿಯಾಗಿಸಿಕೊಂಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳ ವರ್ತನೆ ನಾಚಿಕೆಗೇಡಿನದು. ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪುಂಡಾಟಿಕೆ ನಡೆಸಿ ಬಸ್ಸುಗಳಿಗೆ ಕಲ್ಲು ಹೊಡೆದದ್ದು ಅಕ್ಷಮ್ಯ.

ಅದಕ್ಕಿಂತ ಕೆಟ್ಟ ಬೆಳವಣಿಗೆ, ಹಿರಿಯ ನಟ ಅಂಬರೀಷ್ ಅವರು ದರ್ಶನ್ ದುರ್ವರ್ತನೆಯನ್ನು ಖಂಡಿಸುವ ಬದಲು ಗಂಡ, ಹೆಂಡತಿಯನ್ನು ಹೊಡೆಯುವುದು, ಮಗ, ತಾಯಿಯನ್ನು ಹೊಡೆಯುವುದು ಅತ್ಯಂತ ಸಾಮಾನ್ಯ ನಡವಳಿಕೆ ಎಂಬ ಹೊಣೆಗೇಡಿತನದ ಹೇಳಿಕೆ ನೀಡಿದ್ದು ಅತ್ಯಂತ ಖಂಡನೀಯ.

ದರ್ಶನ್ ಪತ್ನಿಗೆ ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಹಾಕಿದ ವರ್ತನೆ ಕಾನೂನು ದೃಷ್ಟಿಯಲ್ಲಿ ದೊಡ್ಡ ಅಪರಾಧ. ಪತ್ನಿ ಮೇಲಿನ ದೌರ್ಜನ್ಯವನ್ನು ಲಘು ಧಾಟಿಯಲ್ಲಿ ಕಾಣುವಂತಹದ್ದು ಶತಶತಮಾನಗಳಿಂದ ಜಡ್ಡುಗಟ್ಟಿಹೋಗಿರುವ ಪುರುಷ ಅಹಂಕಾರದ ಪ್ರತೀಕ. ಗಂಡ ಹೆಂಡತಿ ಜಗಳ ವೈಯಕ್ತಿಕವಾಗಿದ್ದರೂ ಅದು ಮೇರೆ ಮೀರಿದಾಗ, ಕಾನೂನಿನಡಿ ರಕ್ಷಣೆ ಪಡೆಯುವ ಹಕ್ಕು ಮಹಿಳೆಗಿದೆ.

ಭಾರತದಲ್ಲಿ 15ರಿಂದ 49ರ ವಯೋಮಾನದ ಶೇ 35ರಷ್ಟು ಮಹಿಳೆಯರು ಒಂದಲ್ಲ ಒಂದು ವಿಧದಲ್ಲಿ ಪತಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆ  ಎನ್ನುತ್ತವೆ ಅಂಕಿ ಅಂಶಗಳು. ಈ ಹಿನ್ನೆಲೆಯಲ್ಲಿಯೇ, `ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ಕಾನೂನು~ 2006ರ ಅಕ್ಟೋಬರ್‌ನಿಂದ ರಾಷ್ಟ್ರದಲ್ಲಿ ಜಾರಿಯಾಗಿದೆ.

ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಕುಟುಂಬದ ರಕ್ಷಣೆಯ ಸದುದ್ದೇಶ ಈ ಕಾನೂನಿನಲ್ಲಿದೆ. ದರ್ಶನ್ ಅವರು ಚಿತ್ರರಂಗದ ಜನಪ್ರಿಯ ನಟನಿರಬಹುದು. ದರ್ಶನ್‌ಗೆ ಶಿಕ್ಷೆ ಆಗುವುದನ್ನು ತಪ್ಪಿಸಲು ಅವರ ಪತ್ನಿಯ ಮೇಲೆ ಒತ್ತಡ ಹೇರಿ ದೂರನ್ನು ಹಿಂದಕ್ಕೆ ಪಡೆಯುವಂತೆ ಮಾಡಲಾಗಿದೆ.

ದರ್ಶನ್ ಪತ್ನಿ ನಿಜವಾಗಿಯೂ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಆದರೆ ಪತ್ನಿಯ ಮೇಲೆ ತೀವ್ರವಾದ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಕಾನೂನು ತನ್ನದೇ ಹಾದಿಯಲ್ಲಿ ಮುಂದುವರಿಯಲು ಅವಕಾಶ ಇದೆ.

ಕಾನೂನಿನ ಅನ್ವಯ ಮುಂದುವರಿಯಬೇಕಾದ ಈ ಪ್ರಕರಣದಲ್ಲಿ ಸರಿ ತಪ್ಪುಗಳನ್ನು ನಿರ್ಣಯಿಸುವ ಹೊಣೆಯನ್ನು ಚಿತ್ರೋದ್ಯಮದ ಕೆಲವರು ಹೊತ್ತುಕೊಳ್ಳಲು ಹೊರಟಿರುವುದು ಅಸಂಗತ. ಅಷ್ಟೇ ಅಲ್ಲ, ಈ ಪ್ರಕರಣಕ್ಕೆ ನಟಿ ನಿಖಿತಾರನ್ನು ಹೊಣೆಯಾಗಿಸಿ ಕನ್ನಡ ಚಿತ್ರರಂಗದಿಂದ ಆಕೆಗೆ ಮೂರು ವರ್ಷ ನಿಷೇಧ ಹೇರಿರುವುದಂತೂ ನಮ್ಮ ಚಿತ್ರೋದ್ಯಮದ ಬೌದ್ಧಿಕ ದಿವಾಳಿತನದ ಪರಾಕಾಷ್ಠೆ.
 
ದರ್ಶನ್ ದುರ್ವರ್ತನೆಯ ಜವಾಬ್ದಾರಿಯನ್ನು ನಟಿ ನಿಖಿತಾ ಹೆಗಲಿಗೆ ವರ್ಗಾಯಿಸುವ ಕ್ರಮ ದುರದೃಷ್ಟಕರ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಪುರುಷ ಅಹಂಕಾರದ ಅಸಹ್ಯಕರ ವಿಜೃಂಭಣೆಯ ಪಾಳೇಗಾರಿಕೆಯ ದರ್ಪ ಖಂಡನಾರ್ಹ. ಕಾನೂನಿನಲ್ಲಿ ಇಂಥ ದುರ್ವರ್ತನೆಗೆ ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.