ADVERTISEMENT

ಉಪಚುನಾವಣೆಗಳಲ್ಲಿ ಸೋಲು ಬಿಜೆಪಿ ಪ್ರತಿಷ್ಠೆಗೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಉಪಚುನಾವಣೆಗಳಲ್ಲಿ ಸೋಲು ಬಿಜೆಪಿ ಪ್ರತಿಷ್ಠೆಗೆ ಪೆಟ್ಟು
ಉಪಚುನಾವಣೆಗಳಲ್ಲಿ ಸೋಲು ಬಿಜೆಪಿ ಪ್ರತಿಷ್ಠೆಗೆ ಪೆಟ್ಟು   

ಮಧ್ಯಪ್ರದೇಶ ಹಾಗೂ ಒಡಿಶಾ ವಿಧಾನಸಭೆಗಳಿಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮಧ್ಯಪ್ರದೇಶದಲ್ಲಿ ಈ ವರ್ಷವೇ ವಿಧಾನಸಭೆ ಚುನಾವಣೆ ಬೇರೆ ನಡೆಯಲಿರುವುದರಿಂದ ಬಿಜೆಪಿಗೆ ಇದು ಮಹತ್ವದ ಸಂದೇಶ.

ಮಧ್ಯಪ್ರದೇಶದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಒಡಿಶಾದ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ) ಗೆಲುವು ಸಾಧಿಸಿದೆ. ಮೂರೂ ಕ್ಷೇತ್ರಗಳಲ್ಲಿ ಒಂದೂ ಸ್ಥಾನ ಗೆಲ್ಲಲಾಗದ ಬಿಜೆಪಿ ತೀವ್ರ ಮುಖಭಂಗಕ್ಕೆ ಒಳಗಾಗಿರುವುದು ಸಹಜ.

ಮಧ್ಯಪ್ರದೇಶದ ಎರಡೂ ಕ್ಷೇತ್ರಗಳು ಈ ಹಿಂದೆಯೂ ಕಾಂಗ್ರೆಸ್ ವಶದಲ್ಲೇ ಇದ್ದವು. ಈ ಚುನಾವಣೆಯಲ್ಲೂ ಕಾಂಗ್ರೆಸ್ ಈ ಎರಡೂ ಸ್ಥಾನಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ ಎಂಬುದು ಮುಖ್ಯ. ಮಧ್ಯಪ್ರದೇಶದ ಮುಂಗಾಒಲಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಬ್ರಜೇಂದ್ರ ಸಿಂಗ್ ಯಾದವ್ ಅವರು ಬಿಜೆಪಿಯ ಬಾಯಿಸಾಹಬ್ ಯಾದವ್ ಅವರನ್ನು 2,124 ಮತಗಳಿಂದ ಸೋಲಿಸಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್  20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.

ADVERTISEMENT

ಈಗ ಗೆಲುವಿನ ಅಂತರ ತುಂಬಾ ಕಡಿಮೆಯಾಗಿದೆ ಎಂಬುದೂ ಸ್ಪಷ್ಟ. ಹೀಗಿದ್ದೂ, ಮೂರು ಅವಧಿಯಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎದುರಿಸುತ್ತಿರುವ ಆಡಳಿತ ವಿರೋಧಿ ಅಲೆಗೆ ಇದು ಸೂಚನೆಯಂತಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಂತೂ ಈ ಉಪ ಚುನಾವಣೆಗಳನ್ನು ಗೆಲ್ಲಲು ಇನ್ನಿಲ್ಲದ ಹೋರಾಟ ನಡೆಸಿದ್ದರು. ಸ್ವತಃ ತಾವೇ ಚುನಾವಣಾ ಪ್ರಚಾರದ ಹೊಣೆ ಹೊತ್ತುಕೊಂಡಿದ್ದರು.

ಮತಯಾಚನೆಗೆ ಮನೆಮನೆಗೆ ತೆರಳಿದ್ದರು. 40ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು. ಸುಮಾರು 10 ರೋಡ್ ಷೋಗಳನ್ನು ನಡೆಸಿದ್ದರು. ಅಷ್ಟೇ ಅಲ್ಲ, ಅವರ ಸಂಪುಟದ 18 ಸಚಿವರೂ ಪ್ರಚಾರ ಅಭಿಯಾನಗಳಲ್ಲಿ ಪಾಲ್ಗೊಂಡಿದ್ದರು. ಈ ಉಪಚುನಾವಣೆಗಳು, ಚೌಹಾಣ್ ಹಾಗೂ ಕಾಂಗ್ರೆಸ್‌ನ ತಾರಾ ಪ್ರಚಾರಕ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯದ ಪ್ರತಿಷ್ಠೆಯ ಹೋರಾಟವಾಗಿ ಪರಿಣಮಿಸಿತ್ತು. ಆದರೆ, ವಿಪರ್ಯಾಸವೆಂದರೆ ಒಡಿಶಾದಲ್ಲಿ ಕಾಂಗ್ರೆಸ್ ಪ್ರತಿನಿಧಿಸಿದ್ದಂತಹ ಸ್ಥಾನವನ್ನು ಅಲ್ಲಿನ ಆಡಳಿತ ಪಕ್ಷ ಬಿಜೆಡಿ ಗೆದ್ದುಕೊಂಡಿದೆ.

ಒಡಿಶಾದಲ್ಲೂ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಕಳೆದ 18 ವರ್ಷಗಳಿಂದ ಒಡಿಶಾದಲ್ಲಿ ಭದ್ರವಾಗಿ ನೆಲೆನಿಂತಿರುವ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಸೋಲಿನ ಕಹಿ ಉಣ್ಣುವಂತಾಗಿದೆ ಬಿಜೆಪಿಗೆ.

ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ನಿರೀಕ್ಷಿಸಿದಂತಹ ಭಾರಿ ವಿಜಯ ಬಿಜೆಪಿಗೆ ದಕ್ಕಲಿಲ್ಲ. ಆ ನಂತರ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಪದೇ ಪದೇ ಸೋಲಿಗೆ ಮುಖಾಮುಖಿಯಾಗುತ್ತಿದೆ. ರಾಜಸ್ಥಾನದಲ್ಲಿ ವಿಧಾನಸಭೆಯ ಒಂದು ಮತ್ತು ಲೋಕಸಭೆಯ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಗಳಲ್ಲೂ ಕಾಂಗ್ರೆಸ್‌ ಭಾರೀ ಬಹುಮತದಿಂದ ಕಳೆದ ತಿಂಗಳು ಜಯ ಗಳಿಸಿತ್ತು. ಇದರಿಂದಲೂ ಅಲ್ಲಿ ತನ್ನದೇ ಆಡಳಿತ ಹೊಂದಿರುವ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು.

ಉಪಚುನಾವಣೆಗಳಲ್ಲಿನ ಈ ಸರಣಿ ಸೋಲುಗಳು ಬಿಜೆಪಿಯ ಪ್ರತಿಷ್ಠೆಗೆ ಪೆಟ್ಟು ನೀಡಿವೆ. ಇದರಿಂದ ರಾಷ್ಟ್ರದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ ಎಂದು ಸಾರಾಸಗಟಾಗಿ ಈಗಲೇ ಹೇಳಲಾಗದು. ಇಂತಹ ಸಂದರ್ಭದಲ್ಲಿ, ಸನಿಹದಲ್ಲಿರುವ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯು ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.