ADVERTISEMENT

ಎಚ್ಚರಿಕೆಯ ಗಂಟೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಬಿಹಾರದಲ್ಲಿ ಸಂಭವಿಸಿದ ಬಿಸಿಯೂಟ ದುರಂತ ಎಲ್ಲ ರಾಜ್ಯಗಳಿಗೂ ಎಚ್ಚರಿಕೆಯ ಗಂಟೆ. ಸರನ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಸೇವಿಸಿದ 23 ಮಕ್ಕಳು ಅಸುನೀಗಿದ್ದಾರೆ. ಈ ಅವಘಡ ದೇಶದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದೆ. ಹಸಿವು ತಣಿಸಬೇಕಾದ ಊಟ, ಮಕ್ಕಳ ಉಸಿರು ನಿಲ್ಲಿಸಿರುವುದು ಯೋಜನೆಯ ಅನುಷ್ಠಾನದಲ್ಲಿನ ಅತಿನಿಕೃಷ್ಟ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತದೆ.

ಅನ್ನ ಮತ್ತು ಆಲೂಗೆಡ್ಡೆ, ಸೋಯಾ ಅವರೆ ಸಾರಿನಿಂದ ಕೂಡಿದ ಊಟದಲ್ಲಿ ವಿಷದ ಅಂಶ ಇರುವುದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ. ಇದಕ್ಕೆ ನಿಖರ ಕಾರಣ ಸಮಗ್ರ ತನಿಖೆಯಿಂದ ಹೊರಬರಲಿದೆ.

ಆದರೆ, ಅಲ್ಲಿಯವರೆಗೂ ಕಾಯುವ ಸಂಯಮ ನಮ್ಮನ್ನು ಆಳುವ ರಾಜಕಾರಣಿಗಳಿಗೆ ಇಲ್ಲ. ಈ ದುರಂತ ಮುಂದಿಟ್ಟುಕೊಂಡು ರಾಜಕೀಯ ಲಾಭದ ಲೆಕ್ಕಾಚಾರ ನಡೆಸಿರುವುದು ಅಕ್ಷಮ್ಯ. ಅವಘಡ ಖಂಡಿಸಿ ವಿರೋಧ ಪಕ್ಷಗಳು ಸರನ್ ಜಿಲ್ಲೆಯ ಬಂದ್‌ಗೆ ಕರೆ ಕೊಟ್ಟಿದ್ದವು.

ದುರಂತದ ಹಿಂದೆ ಸರ್ಕಾರ ಉರುಳಿಸುವ ಸಂಚು ಅಡಗಿದೆ ಎಂದು ಆಡಳಿತಾರೂಢ ಸಂಯುಕ್ತ ಜನತಾದಳ (ಜೆಡಿಯು) ಆರೋಪಿಸಿದೆ. ಈ ಬಗೆಯ ರಾಜಕೀಯ ಕೆಸರೆರಚಾಟದಲ್ಲಿ ವಿಷಯದ ಗಾಂಭೀರ್ಯತೆಯನ್ನು ಕುಗ್ಗಿಸುವುದು ಖಂಡಿತಾ ಸಲ್ಲದು
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ರಾಷ್ಟ್ರೀಯ ಕಾರ್ಯಕ್ರಮ. 2001ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಅನ್ವಯ ಇದು ರಾಷ್ಟ್ರದಾದ್ಯಂತ ಜಾರಿಗೆ ಬಂದಿದೆ.

ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವುದು, ಅಪೌಷ್ಟಿಕತೆ ಹಾಗೂ ಸಾಮಾಜಿಕ ತಾರತಮ್ಯ ನಿವಾರಿಸುವಂತಹ ಉದಾತ್ತ ಧ್ಯೇಯವನ್ನು ಹೊಂದಿದೆ. ಸುಮಾರು 11 ಕೋಟಿ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾರೆ. ಇದು ವಿಶ್ವದ ಬೃಹತ್ ಶಾಲಾ ಊಟದ ಯೋಜನೆಯಾಗಿದೆ. ಶಿಕ್ಷಣದ ಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನೂ ವಹಿಸುತ್ತಿದೆ.

ಆದರೆ, ಅನುಷ್ಠಾನದಲ್ಲಿನ ನ್ಯೂನತೆಗಳಿಂದ ಅವಘಡಗಳು ಸಂಭವಿಸುತ್ತಿವೆ. ಕರ್ನಾಟಕ ಕೂಡ ಇದಕ್ಕೆ ಹೊರತಲ್ಲ. ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಮಕ್ಕಳ ಕುರಿತು ವರದಿಗಳು ಪ್ರಕಟವಾಗುತ್ತಲೇ ಇವೆ. ಈಗಿರುವ ವ್ಯವಸ್ಥೆ ನೋಡಿದರೆ ಎಲ್ಲಿ ಬೇಕಾದರೂ ದುರಂತ ಸಂಭವಿಸಬಹುದು. ಅದನ್ನು ಸರಿಪಡಿಸಲು ತುರ್ತು ಕ್ರಮಗಳು ಅನಿವಾರ್ಯ.

ಮಕ್ಕಳ ಹಿತದೃಷ್ಟಿಯಿಂದ ಅಗತ್ಯವಾಗಿ ಬೇಕಾಗಿರುವ ಯೋಜನೆ ಬಿಸಿಯೂಟ. ದಕ್ಷತೆಯಿಂದ ಕಾರ್ಯಗತಗೊಳಿಸಿದರೆ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಕೆಲವು ರಾಜ್ಯಗಳಲ್ಲಿ ಬಿಸಿಯೂಟ ಪೂರೈಕೆ ಹೊಣೆಯನ್ನು ಸರ್ಕಾರವೇ ವಹಿಸಿಕೊಂಡಿದ್ದು, ನಿರ್ವಹಣೆ ಚೆನ್ನಾಗಿರುವ ಕಡೆ ಸಮರ್ಪಕವಾಗಿ ನಡೆದಿದೆ. ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ, ಹಲವೆಡೆ ವೈಫಲ್ಯದ ಹಾದಿ ಹಿಡಿದಿದೆ.

ಶಾಲೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು ಶಾಲಾ ಶಿಕ್ಷಣ ಕಡೆಗಣಿಸಿರುವುದರ ಪರಿಣಾಮ. ಶಾಲಾ ಪರಿಸರ ಮತ್ತು ಅಡುಗೆ ಕೋಣೆಯಲ್ಲಿ ನೈರ್ಮಲ್ಯ ಕಾಪಾಡುವುದು ಆದ್ಯತೆ ಆಗಬೇಕು. ಬಿಸಿಯೂಟದ ಮೇಲುಸ್ತುವಾರಿಯನ್ನು ಶಿಕ್ಷಕರ ಹೆಗಲಿಗೇರಿಸಿರುವುದು ಸರಿಯಲ್ಲ.

ಅದಕ್ಕೆ ಬೇರೊಂದು ವ್ಯವಸ್ಥೆ ಮಾಡಬೇಕು. ಅಡುಗೆಗೆ ಗುಣಮಟ್ಟದ ಧಾನ್ಯ, ಸಾಮಗ್ರಿ ಪೂರೈಸಬೇಕು. ತಯಾರಿಕೆಗೂ ಅಷ್ಟೇ ಮುತುವರ್ಜಿ ವಹಿಸಬೇಕು. ಮಕ್ಕಳ ಜೀವ ಅಮೂಲ್ಯ. ಈ ಯೋಜನೆಯ ಧ್ಯೇಯವೂ ಇದೇ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.