ಗಡಿಯಲ್ಲಿ ಕೇಳಿಬರುತ್ತಿರುವ ಗುಂಡಿನ ದಾಳಿ, ಬರ್ಬರ ಹತ್ಯೆ, ಎರಡೂ ದೇಶಗಳ ಮಧ್ಯೆ ಬಾಂಧವ್ಯ ವೃದ್ಧಿ ಸಮಯದಲ್ಲಿ ಅಹಿತಕರವಾದುದನ್ನು ಧ್ವನಿಸುತ್ತಿದೆ. ದಿನದಿಂದ ದಿನಕ್ಕೆ ಗಡಿಯಲ್ಲಿ ಚಕಮಕಿ ಹೆಚ್ಚುತ್ತಿರುವುದು ಆತಂಕದ ಬೆಳವಣಿಗೆ. ಭಾರತ - ಪಾಕಿಸ್ತಾನದ ನಡುವೆ ಆಗಿರುವ ಕದನವಿರಾಮ ಘೋಷಣೆ ಈಗ ಅಪಾಯದ ಅಂಚಿಗೆ ತಲುಪಿದೆ. ಪರಿಹಾರಕ್ಕೆ ಸೇರಿದ್ದ ಉಭಯ ದೇಶಗಳ ಬ್ರಿಗೇಡಿಯರುಗಳ ಮಟ್ಟದ ಸಭೆ ಕೂಡ ವಿಫಲವಾಗಿರುವುದು ಪರಿಸ್ಥಿತಿಯ ಜಟಿಲತೆಗೆ ಸಾಕ್ಷಿ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆದಿರುವುದು, ಅದರ ಬಿಸಿ ಎರಡೂ ರಾಷ್ಟ್ರಗಳನ್ನು ಸುಡುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.
ರಾಯಭಾರಮಟ್ಟದಲ್ಲಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದಾದ ಪ್ರಶ್ನೆ ಈಗ ಬೀದಿರಂಪವಾಗಿದೆ. ಪಾಕಿಸ್ತಾನದಲ್ಲಿ ರಾಜಕೀಯ ಸಂಕಟ ಬಂದಾಗಲೆಲ್ಲಾ ಭಾರತವನ್ನು ಈ ರೀತಿ ಚಿವುಟಿ ವಿಷಯಾಂತರ ಮಾಡುವ ಕೆಟ್ಟ ಚಾಳಿ ಇದೆ. ಭಾರತೀಯ ಯೋಧರಿಬ್ಬರನ್ನು ಬರ್ಬರವಾಗಿ ಕೊಂದು, ಯೋಧನೊಬ್ಬನ ಶಿರಚ್ಛೇದ ಮಾಡಿದ ಹೇಯಕೃತ್ಯದ ಬಗ್ಗೆ ವಿವರಣೆ ನೀಡಬೇಕೆಂಬ ಭಾರತದ ಒತ್ತಾಯಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರ ಪ್ರತಿಕ್ರಿಯೆ ದುರಹಂಕಾರದ ಪ್ರತೀಕವಾಗಿದೆ. ನಾಗರೀಕತೆಯೇ ನಾಚುವ ಇಂತಹ ಕೃತ್ಯವನ್ನು ಅವರು ಉದ್ಧಟತನದಿಂದ ತಳ್ಳಿಹಾಕಿರುವುದು ಖಂಡನೀಯ.
ನೆರೆ ರಾಷ್ಟ್ರದೊಡನೆ ಬಾಂಧವ್ಯ ವೃದ್ಧಿಗೆ ಸದಾ ಯತ್ನಿಸುವ ಆಶಯ ಹೊಂದಿರುವ ಪ್ರಧಾನಿ ಮನಮೋಹನಸಿಂಗ್ ಇದೇ ಮೊದಲಬಾರಿಗೆ ಮೌನಮುರಿದಿದ್ದು, ಪಾಕಿಸ್ತಾನದ ಜೊತೆ ಇನ್ನು ಸಹಜ ವ್ಯವಹಾರ ಸಾಧ್ಯವಿಲ್ಲ ಎಂದಿದ್ದಾರೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಮಂಗಳವಾರ ಆರಂಭವಾಗಬೇಕಿದ್ದ ಹೊಸ ವೀಸಾ ನೀತಿಯನ್ನು ತಡೆಹಿಡಿಯಲಾಗಿದೆ. ಜೊತೆಗೆ, ಹಾಕಿ ಪಂದ್ಯಗಳಲ್ಲಿ ಭಾಗವಹಿಸಬೇಕಿದ್ದ ಪಾಕಿಸ್ತಾನದ ಎಲ್ಲ ಒಂಬತ್ತು ಆಟಗಾರರನ್ನು ವಾಪಸು ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಭಾರತೀಯ ಯೋಧರಿಬ್ಬರನ್ನು ಬರ್ಬರವಾಗಿ ಕೊಂದ ಪಾಕಿಸ್ತಾನದ ಸೈನಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗಟ್ಟಿದನಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ, ಆವೇಶದ ಹೇಳಿಕೆಗಳನ್ನು ನೀಡುವುದರಲ್ಲಿ ರಾಜಕಾರಣಿಗಳು ತಾಮುಂದು, ನಾಮುಂದು ಎಂದು ನುಗ್ಗುತ್ತಿದ್ದಾರೆ. `ಪಾಕಿಸ್ತಾನದ ಯೋಧರು ಒಬ್ಬರ ತಲೆ ತೆಗೆದರೆ ನಾವು ಹತ್ತು ತಲೆ ತೆಗೆಯಬೇಕು' ಎಂಬಂತಹ ಬಿಜೆಪಿ ನಾಯಕಿ ಸುಷ್ಮಾಸ್ವರಾಜ್ ಅವರ ಹೇಳಿಕೆಯೂ ಹಿರಿಯ ನಾಯಕಿಯೊಬ್ಬರ ವ್ಯಕ್ತಿತ್ವಕ್ಕೆ ತಕ್ಕ ತೂಕದ ಮಾತೆನಿಸುವುದಿಲ್ಲ. ಭಾರತಕ್ಕೆ ತನ್ನದೇ ಆದ ಘನತೆ ಇದೆ. ದಕ್ಷಿಣ ಏಷ್ಯಾದಲ್ಲಿ ಸದಾ ಶಾಂತಿ ಸ್ಥಾಪನೆಗೆ ಯತ್ನಿಸುವ ಆಶಯವನ್ನು ಹೊಂದಿರುವ ಮಹತ್ವದ ಪಾತ್ರವನ್ನು ಭಾರತ ನಿರ್ವಹಿಸುತ್ತಿದೆ.
ಭಯೋತ್ಪಾದನಾ ಕೃತ್ಯಗಳಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಜಗತ್ತಿಗೇ ಗೊತ್ತಿದೆ. ಭಾರತ ಜವಾಬ್ದಾರಿಯಿಂದಲೇ ಈ ವಿಷಯವನ್ನು ನಿರ್ವಹಿಸಬೇಕಿದೆ. ಇಬ್ಬರು ಯೋಧರನ್ನು ಬರ್ಬರವಾಗಿ ಕೊಂದ ಘಟನೆಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಕ್ಷಮಿಸಲೂ ಸಾಧ್ಯವಿಲ್ಲ. ಭಾರತೀಯರಲ್ಲಿ ಆಕ್ರೋಶ ಕೆರಳಿರುವುದು ಮಾನವ ಸಹಜ. ಆದರೆ ಪಾಕಿಸ್ತಾನದೊಂದಿಗೆ ಯುದ್ಧ ಸಾರುವುದೇ ಇದಕ್ಕೆ ಪರ್ಯಾಯ ಕ್ರಮವಲ್ಲ. ಅಣ್ವಸ್ತ್ರರಾಷ್ಟ್ರಗಳ ನಡುವೆ ಸಂಬಂಧ ಸಂಪೂರ್ಣ ಹದಗೆಡುವ ಮುನ್ನ ಎಚ್ಚರಿಕೆಯ ನಡೆ ಮುಖ್ಯ. ಪಾಕಿಸ್ತಾನವನ್ನು ಮಾತುಕತೆಯ ಮಣೆಯ ಮುಂದೆ ಕಟ್ಟಿಹಾಕುವುದು ಆಗ ಬೇಕಾಗಿರುವ ಕೆಲಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.