ADVERTISEMENT

ಒಳಮೀಸಲಾತಿ ಜಾರಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಸಾಮಾಜಿಕ ನ್ಯಾಯದ ಪ್ರಮುಖ ಅಸ್ತ್ರವಾದ ಮೀಸಲಾತಿಯ ಜತೆ ಸದಾ ವಿವಾದ ತಳಕುಹಾಕಿಕೊಂಡಿರುತ್ತದೆ.  ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಕರ್ನಾಟಕದಲ್ಲಿ ಇಂತಹದ್ದೇ ವಿವಾದದ ಸುಳಿಯಲ್ಲಿದೆ. ಈ ವಿವಾದ ಹೊರಗಿನ ವಿರೋಧದಿಂದ ಉದ್ಭವವಾಗಿದ್ದಲ್ಲ, ಇದು ಆಂತರಿಕ ಬಿಕ್ಕಟ್ಟಿನ ಫಲ.

ಪರಿಶಿಷ್ಟ ಜಾತಿ ಎನ್ನುವುದು ಮೇಲ್ನೋಟಕ್ಕೆ ಒಂದೇ ಎಂಬಂತೆ ಕಂಡರೂ ವಾಸ್ತವ ಸ್ಥಿತಿ ಹಾಗಿಲ್ಲ. ಅದು ಹಲವು ಜಾತಿಗಳ ಒಂದು ಗುಂಪು, ಅಧಿಕೃತವಾಗಿ ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿಗಳಿವೆ. ಇವುಗಳಲ್ಲಿ ಹೊಲೆಯ ಮತ್ತು ಮಾದಿಗರು ಅಸ್ಪೃಶ್ಯರಾಗಿದ್ದರೆ, ಬೋವಿ, ಲಂಬಾಣಿ, ಕೊರಮ ಕೊರಚರು ಸ್ಪೃಶ್ಯ ಜಾತಿಗಳು.

ಈ ಎಲ್ಲ ಜಾತಿಗಳಿಗೆ ಒಟ್ಟಾಗಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಶೇಕಡಾ 15ರ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿ ಪರಿಶಿಷ್ಟರೊಳಗಿನ ಎಲ್ಲ ಜಾತಿಗಳ ನಡುವೆ ಅವರ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಹಂಚಿಕೆಯಾಗಿಲ್ಲ ಎನ್ನುವ ದೂರು ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿಯೇ  ನ್ಯಾ.ಸದಾಶಿವ ಆಯೋಗ ರಚನೆಗೊಂಡದ್ದು.

ADVERTISEMENT

ಪರಿಶಿಷ್ಟರಲ್ಲಿರುವ ಮಾದಿಗರಿಗೆ ಶೇಕಡಾ 6, ಹೊಲೆಯರಿಗೆ ಶೇಕಡಾ 5, ಲಂಬಾಣಿ,ಬೊವಿ, ಕೊರಚ ಮತ್ತು ಕೊರಮರಿಗೆ ಶೇಕಡಾ 3 ಮತ್ತು ಹದಿನಾರು ಜಾತಿಗಳನ್ನೊಳಗೊಂಡ ಅಲೆಮಾರಿ ಅಸ್ಪೃಶ್ಯರಿಗೆ ಶೇಕಡಾ ಒಂದರಂತೆ ಮೀಸಲಾತಿ ನಿಗದಿಪಡಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ನ್ಯಾ. ಸದಾಶಿವ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಸಾರ್ವಜನಿಕವಾಗಿ ಚರ್ಚೆಗೊಳಗಾಗಬೇಕಾಗಿದ್ದ ಈ ವರದಿಯ ಪೂರ್ಣಪಾಠವನ್ನು ನ್ಯಾ.ಸದಾಶಿವ ಅವರೂ ಬಿಡುಗಡೆ ಮಾಡದೆ ಮುಖ್ಯಾಂಶಗಳನ್ನಷ್ಟೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.  ನಿಯಮಾವಳಿ ಪ್ರಕಾರ ರಾಜ್ಯ ಸಚಿವ ಸಂಪುಟ ಈ ವರದಿ ಬಗ್ಗೆ ಚರ್ಚೆ ನಡೆಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.

ಆದರೆ ಸರ್ಕಾರ ವಹಿಸಿರುವ ಮೌನ, ವರದಿ ಜಾರಿಗೆ ಒತ್ತಾಯಿಸುವವರು ಮಾಡುತ್ತಿರುವ ಆರೋಪಗಳನ್ನು ಪುಷ್ಟೀಕರಿಸುವಂತಿದೆ. ಸಂಖ್ಯೆಯಲ್ಲಿ ಕಡಿಮೆಯಿದ್ದರೂ ರಾಜಕೀಯವಾಗಿ ಬಲಿಷ್ಠರಾಗಿರುವ ಹೊಲೆಯರು ಪರಿಶಿಷ್ಟ ಜಾತಿಯ ಮೀಸಲಾತಿಯನ್ನು  ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದಾರೆ ಎನ್ನುವುದನ್ನು ಅಧಿಕೃತ ಮಾಹಿತಿ ಕೂಡಾ ದೃಢಪಡಿಸುತ್ತದೆ.

ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆಯಲ್ಲಿ ತಾವು ಶೇ 33.47ರಷ್ಟಿದ್ದರೂ ಆ ಪ್ರಮಾಣದ ಪ್ರಾತಿನಿಧ್ಯ ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಿಕ್ಕಿಲ್ಲ ಎನ್ನುವುದು ವರದಿ ಜಾರಿಗಾಗಿ ಒತ್ತಾಯಿಸುತ್ತಿರುವ ಮಾದಿಗ ಸಮುದಾಯದ ಆರೋಪ. ಇದರ ಜತೆ ಅಸ್ಪೃಶ್ಯರಲ್ಲದ ಜಾತಿಗಳಿಗೆ ಒಳಮೀಸಲಾತಿ ನೀಡಿರುವುದಕ್ಕೆ ಕೂಡಾ ಇತರರ ವಿರೋಧ ಇದೆ.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಮೀಸಲಾತಿ ಕುರಿತ ಕೇಂದ್ರ ಇಲ್ಲವೆ ರಾಜ್ಯಸರ್ಕಾರಗಳ  ಯಾವ ನಿರ್ಧಾರವೂ ಪ್ರತಿಭಟನೆಯನ್ನು ಎದುರಿಸದೆ ಜಾರಿಗೆ ಬಂದಿಲ್ಲ. ಸರ್ಕಾರದ ಉದ್ದೇಶ ಪ್ರಾಮಾಣಿಕತೆಯಿಂದ ಕೂಡಿದ್ದರೆ ಭಿನ್ನಾಭಿಪ್ರಾಯ-ವಿರೋಧಗಳನ್ನು ಮಾತುಕತೆಯ ಮೂಲಕ ಬಗೆಹರಿಸುವುದು ಕಷ್ಟ ಅಲ್ಲ. ಅಂತಹ ರಾಜಕೀಯ ಇಚ್ಛಾಶಕ್ತಿಯ ಮೂಲಕ ರಾಜ್ಯ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.