ADVERTISEMENT

ಓಲೈಕೆಯ ಕಸರತ್ತು

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2013-14ನೇ ಸಾಲಿನ ಪರಿಷ್ಕೃತ ಮುಂಗಡಪತ್ರದಲ್ಲಿ, ಜನಪ್ರಿಯ, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸುವ ಭರಾಟೆ ಮುಂದುವರಿದಿದೆ. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ರೈತಾಪಿ, ಹಿಂದುಳಿದ ವರ್ಗಗಳನ್ನು ಓಲೈಸುವ ಕಸರತ್ತಿಗೆ ಜೋತು ಬಿದ್ದಿರುವ ಮುಖ್ಯಮಂತ್ರಿ, ಜನಪ್ರಿಯ ಕಾರ್ಯಕ್ರಮಗಳಿಗೆ ಹೇಗೆ ಹಣ ಹೊಂದಿಸುತ್ತಾರೆ ಎನ್ನುವುದಕ್ಕೆ ಬಜೆಟ್‌ನಲ್ಲಿ ಸಮರ್ಥನೀಯ ಉತ್ತರ ನೀಡಿಲ್ಲ.

ಬಜೆಟ್ ಮಂಡನೆಯಲ್ಲಿ ಅಪಾರ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರಿಂದ ನಾಡಿನ ಜನತೆ ಜನಪ್ರಿಯ ಕಾರ್ಯಕ್ರಮಗಳಾಚೆ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿತ್ತು. ಆದರೆ ಮುಖ್ಯಮಂತ್ರಿಯಾಗಿ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಅವರು ಅಷ್ಟೇನೂ ಯಶಸ್ವಿಯಾಗಿಲ್ಲ. ಬಜೆಟ್ ಪೂರ್ವಭಾವಿ ಸಿದ್ಧತೆಗೆ ನೀಡಿದ್ದ ಆದ್ಯತೆ, ಮಂಡನೆಯಲ್ಲಿ ಸಮರ್ಥವಾಗಿ ಬಿಂಬಿತವಾಗದಿರುವುದು ಕಂಡು ಬರುತ್ತದೆ.

ಹಿಂದಿನ ಸರ್ಕಾರ ಬಳುವಳಿಯಾಗಿ ಕೊಟ್ಟು ಹೋಗಿರುವ ಹಣಕಾಸು ಅಶಿಸ್ತು ಸರಿಪಡಿಸಲು ದೂರದೃಷ್ಟಿಯ ಕಾರ್ಯಕ್ರಮಗಳು ಕಾಣುತ್ತಿಲ್ಲ. ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದರೂ ಅನೇಕ ಯೋಜನೆಗಳಿಗೆ ಅನುದಾನ ನಿಗದಿ ಮಾಡದಿರುವುದು ವ್ಯರ್ಥ ಕಸರತ್ತಿನ ಭಾವನೆ ಮೂಡಿಸುತ್ತದೆ. ತೆರಿಗೆ ಹೊರೆ ಹೇರಬಾರದು ಎನ್ನುವ ಹಿಂಜರಿಕೆ ಬಜೆಟ್‌ನಲ್ಲಿ ಪ್ರತಿಫಲನಗೊಂಡಿದ್ದು, ಸಂಪನ್ಮೂಲ ಸಂಗ್ರಹದಲ್ಲಿ ಖಚಿತತೆ ಕಂಡು ಬಂದಿಲ್ಲ.

ಬಜೆಟ್ ಮಂಡಿಸುವವರು ತಾವು ಪ್ರತಿನಿಧಿಸುವ  ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ವಿಚಾರ ಈ ಹಿಂದೆ ಟೀಕೆಗಳಿಗೆ ಗುರಿಯಾಗಿದೆ. ಸಿದ್ದರಾಮಯ್ಯನವರ ಬಜೆಟ್ ಸಹ `ಮೈಸೂರು ಕೇಂದ್ರಿತ' ಬಜೆಟ್ ಎನ್ನುವ ಟೀಕೆಗಳಿಂದ ಹೊರತಾಗಿಲ್ಲ. ಆದರೆ ಕೃಷಿ ಮತ್ತು ನೀರಾವರಿಗೆ ನೀಡಿರುವ ಗಮನಾರ್ಹ ಪ್ರಮಾಣದ ಅನುದಾನವು ರೈತಾಪಿ ವರ್ಗದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ.

ಗ್ರಾಮೀಣ ಅಭಿವೃದ್ಧಿ, ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ,  ಪಶು ಸಂಗೋಪನೆ, ಮೀನುಗಾರಿಕೆ, ಶಿಕ್ಷಣ, ನಗರಾಭಿವೃದ್ಧಿ, ಆರೋಗ್ಯ, ವಸತಿ ಮತ್ತಿತರ ವಲಯಗಳಿಗೆ ನೀಡಿರುವ ಆದ್ಯತೆಯು ಸರ್ಕಾರದ ಜನಪರ ಕಾಳಜಿಗೆ ಕನ್ನಡಿ ಹಿಡಿಯುತ್ತವೆ. ಹಿಂದಿನ ಸರ್ಕಾರ ಹೆಚ್ಚಿಸಿದ್ದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಗ್ರಾಹಕರು ಮತ್ತು ಕೈಗಾರಿಕೋದ್ಯಮಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

ADVERTISEMENT

ಡೀಸೆಲ್ ಮೇಲಿನ ಮಾರಾಟ ತೆರಿಗೆ ಇಳಿಸಿರುವುದನ್ನು ಹೊರತುಪಡಿಸಿದರೆ, ಹೆಚ್ಚಿನ ಹೊಸ ತೆರಿಗೆ ರಿಯಾಯಿತಿಗಳು ಇಲ್ಲ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 16ರಿಂದ ಶೇ 40ಕ್ಕೆ ಏರಿಸಿ ಹೆಚ್ಚಿನ ವರಮಾನ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಸಬ್ಸಿಡಿಗಳ ಹೆಚ್ಚಿನ ಹೊರೆ ಸರಿದೂಗಿಸಲು ತೆರಿಗೆ ಸಂಗ್ರಹದಲ್ಲಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ರೂ 1,452 ಕೋಟಿ ಸಂಗ್ರಹಿಸಲು ಮುಂದಾಗಿರುವುದು ಆರ್ಥಿಕ ಶಿಸ್ತು ಜಾರಿ ಉದ್ದೇಶಕ್ಕೆ ಅಷ್ಟೇನೂ ಪೂರಕವಾಗಲಾರದು.

ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಕಂಡು ಬಂದಿದ್ದ ಪ್ರತ್ಯೇಕ ಕೃಷಿ ಬಜೆಟ್ ಕೈಬಿಟ್ಟಿದ್ದರೂ, ರೈತಾಪಿ ವರ್ಗವನ್ನು ಕಡೆಗಣಿಸಿದಂತೇನೂ ಕಾಣುವುದಿಲ್ಲ. ಹಿಂದಿನ ಸರ್ಕಾರದಲ್ಲಿ ಮಠ ಮಂದಿರಗಳಿಗೆ ನೀಡಲಾಗುತ್ತಿದ್ದ ನೆರವಿಗೆ ತಡೆ ಒಡ್ಡಿರುವ ಸಿದ್ದರಾಮಯ್ಯ, ಕೆಲ ನಿರ್ದಿಷ್ಟ  ಟ್ರಸ್ಟ್‌ಗಳಿಗೆ  ಅನುದಾನ ನೀಡಿರುವುದು ಟೀಕಾತೀತವಾಗಿ ಉಳಿದಿಲ್ಲ. ಯೋಜನೆಗಳ ಜಾರಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸುವ ವಿಚಾರ ಸದುದ್ದೇಶ್ದ್ದದು. ಆದರೆ ಇದರ ಅನುಷ್ಠಾನಕ್ಕೆ ಬದ್ಧತೆ ಪ್ರದರ್ಶಿಸಬೇಕಾದುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.