ADVERTISEMENT

ಕಂಬಾರರಿಗೆ ಜ್ಞಾನಪೀಠ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಕನ್ನಡಕ್ಕೆ ಮತ್ತೊಂದು ಶೃಂಗಸದೃಶ ಪುರಸ್ಕಾರದ ಪುಳಕ. ಅದನ್ನು ತಂದುಕೊಟ್ಟವರು ಕವಿ ಚಂದ್ರಶೇಖರ ಕಂಬಾರ. 2009ರ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸುವ ಮೂಲಕ ಕಂಬಾರರು ಕನ್ನಡಿಗರ ಸಾಂಸ್ಕೃತಿಕ ಹಿರಿಮೆಗೆ ಕೋಡು ಮೂಡಿಸಿದ್ದಾರೆ.

ಇದು ಕನ್ನಡಕ್ಕೆ ಸಂದ ಎಂಟನೆಯ ಜ್ಞಾನಪೀಠ. ಕನ್ನಡ ಸಾಹಿತ್ಯದ ಭವ್ಯ ಪರಂಪರೆ, ಹೊಸತನ ಮತ್ತು ಮೌಲಿಕ ಸತ್ವಗಳಿಗೆ ಮತ್ತೊಮ್ಮೆ ಸಂದಿರುವ ರಾಷ್ಟ್ರೀಯಮಟ್ಟದ ಪುರಸ್ಕಾರ. ಭಾರತೀಯ ಸಾಹಿತ್ಯದಲ್ಲಿ ಪ್ರತಿಷ್ಠಿತವಾಗಿರುವ ಈ ಪ್ರಶಸ್ತಿಯನ್ನು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗಳಿಸಿದ ಹಿರಿಮೆ ಕನ್ನಡದ್ದಾಗಿದೆ.

ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರಯೋಗಗಳ ಕಾಲದಲ್ಲಿ ಸಾಹಿತ್ಯಕೃಷಿಯನ್ನು ಆರಂಭಿಸಿದ ಕಂಬಾರರದು ಹೊಸಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಯಶಸ್ಸು ಕಂಡ ಸಮೃದ್ಧತೆ.

ನವ್ಯ ಸಾಹಿತ್ಯದ ಪ್ರಚಾರ ಅಬ್ಬರದ ಕಾಲದಲ್ಲಿಯೂ ಹತ್ತರಲ್ಲಿ ಒಬ್ಬರಾಗದೆ, `ಹೇಳತೇನ ಕೇಳ ಗೆಳೆಯ ನಿನ ಮುಂದ ಕತಿಯೊಂದ, ನನ ಮುಂದೆ ಕುಂಡ್ರ ಹೀಂಗ ತೆರೆದ ಮನ~ ಎಂದು ತಮ್ಮದೇ ಪ್ರತ್ಯೇಕ ಧ್ವನಿಯನ್ನೂ ಅದಕ್ಕೆ ಸ್ಪಂದಿಸುವ ಆಪ್ತವಾದ ಓದುಗ ವರ್ಗವನ್ನೂ ಸೃಷ್ಟಿಸಿಕೊಂಡವರು ಕಂಬಾರರು.

ತಮ್ಮೆಲ್ಲ ಬರಹಗಳಲ್ಲಿ ಅವರದು ಮಿತ್ರಸಂಹಿತೆಯ ಅನುನಯ. ಅದು ಹತ್ತು ಕಾವ್ಯ ಸಂಕಲನ, 24 ನಾಟಕ, ಐದು ಕಾದಂಬರಿ ಹಾಗೂ ಸಂಶೋಧನೆ ಮತ್ತು ಸಾಹಿತ್ಯ ಸಂಸ್ಕೃತಿಯ ಚಿಂತನೆ ಕುರಿತ ಹದಿಮೂರು ಮೌಲಿಕ ಕೃತಿಗಳ ಸಮೃದ್ಧ ಸಾಹಿತ್ಯ ಭಂಡಾರ.

ಸಮೃದ್ಧಿಯ ಜೊತೆಗೆ ವೈವಿಧ್ಯ. ಈ ಪ್ರಮಾಣದ ಪ್ರಕಾರ ವೈವಿಧ್ಯ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿರಳ. ಚಲನಶೀಲ ಸಮಾಜದ ಗತಿಸ್ಥಿತಿಯನ್ನು ನೆಲಮೂಲದ ಜಾನಪದ ಹಿನ್ನೆಲೆಯಲ್ಲಿ ರೂಪಕವಾಗಿ ಕಂಡರಿಸಿದ ಅಭಿಜಾತ ಪ್ರತಿಭೆ ಕಂಬಾರರ ಸಾಹಿತ್ಯ ಕೃತಿಗಳಲ್ಲಿ ಹರಳುಗಟ್ಟಿದೆ.

ಕನ್ನಡದಲ್ಲಿ ದೇಸಿ ಸತ್ವವನ್ನು ಕವಿ ದ.ರಾ. ಬೇಂದ್ರೆ ಅವರಿಗಿಂತಲೂ ವಿಭಿನ್ನವಾಗಿ ಮತ್ತು ಸಮರ್ಥವಾಗಿ ಸಾಹಿತ್ಯದಲ್ಲಿ ತಂದವರೆಂದು ಕಂಬಾರರನ್ನು ವಿಮರ್ಶಕರು ಗುರುತಿಸಿದ್ದಾರೆ. ಈ ಪ್ರಶಸ್ತಿಯ ಮೂಲಕ ಕನ್ನಡದ ಜಾನಪದ ಸತ್ವಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.
 
ಗ್ರಾಮೀಣ ಹಿನ್ನೆಲೆಯಿಂದ ಬಂದು ಪ್ರತಿಭಾ ವಿಶೇಷ ಮಾತ್ರದಿಂದಲೇ ಸಾಹಿತ್ಯದ ಮುಖ್ಯಧಾರೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಕಂಬಾರರು ಈ ನಿಟ್ಟಿನಲ್ಲಿ ದಾರ್ಶನಿಕ ಕವಿ ಕುವೆಂಪು ಅವರನ್ನು ನೆನಪಿಗೆ ತರುತ್ತಾರೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮೊದಲಾಗಿ ಹಲವಾರು ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆದಿರುವ ಕಂಬಾರರು ಬಹುಮುಖ ಪ್ರತಿಭೆಯ ಧೀಮಂತ.

ಕಂಬಾರರ ಈಚಿನ ಮಹತ್ವದ ಕಾದಂಬರಿ `ಶಿಖರಸೂರ್ಯ~ವನ್ನು ಉತ್ಕೃಷ್ಟ ಕಾವ್ಯವೆಂದೇ ಪರಿಭಾವಿಸಿರುವ ವಿಮರ್ಶಕರು, ಅದು ಸಾಂಸ್ಕೃತಿಕ ಮತ್ತು ದಾರ್ಶನಿಕ ಸ್ವಾಯತ್ತತೆಯನ್ನು ಸಾಧಿಸುವ ಕೃತಿಯೆಂದು ಬಣ್ಣಿಸಿದ್ದಾರೆ.

ಅವರ ಸಮಕಾಲೀನ ಬರಹಗಾರರೆಲ್ಲ ಸೃಜನಾತ್ಮಕ ಚಟುವಟಿಕೆಯಿಂದ ನಿರ್ಗಮಿಸಿ ಆತ್ಮಕತೆ, ಸಮಗ್ರ ಸಾಹಿತ್ಯ ಸಂಗ್ರಹಗಳಲ್ಲಿ ತೊಡಗಿರುವಾಗ ಸಮಕಾಲೀನ ವಸ್ತುಗಳನ್ನು ಆಧರಿಸಿ ಇನ್ನೂ ಹೊಸರೀತಿಯ ನಾಟಕ ಬರೆಯುವ ಉತ್ಸಾಹವನ್ನು ಕಂಬಾರರು ಪ್ರಕಟಿಸಿದ್ದಾರೆ.
 
ಸಾಹಿತ್ಯ ವಿದ್ಯಾರ್ಥಿಗಳು ಮಾತ್ರವಲ್ಲದೆ, ನಾಡಿನ ಎಲ್ಲ ವರ್ಗದ ಜನತೆ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ. ಶ್ರೀಸಾಮಾನ್ಯರ ಬದುಕಿನಿಂದಲೇ ಬರವಣಿಗೆಗೆ ಪ್ರೇರಣೆ ಪಡೆದು ಅದನ್ನು ಜಾನಪದ ಸತ್ವದಲ್ಲಿ ಪುನರ್‌ಸೃಷ್ಟಿಸುವ ಚೈತನ್ಯವನ್ನು ಕಂಬಾರರು ಈ ವರೆಗೆ ಪ್ರಕಟಿಸಿದ್ದಾರೆ.

ಎಪ್ಪತ್ತರ ಎತ್ತರದಲ್ಲೂ ಕಂಬಾರರಲ್ಲಿ ಉಳಿದುಕೊಂಡಿರುವ ಕಾರಯತ್ರೀ ಪ್ರತಿಭೆ ಅವರಿಂದ ಇನ್ನಷ್ಟು ಮಹತ್ವದ ಸಾಹಿತ್ಯ ಕೃಷಿಯನ್ನು ನಿರೀಕ್ಷಿಸುವಂತೆ ಮಾಡಿದೆ.
 
ಈ ಸಂದರ್ಭದಲ್ಲಿ, ಕಂಬಾರರ ಶ್ರೇಷ್ಠ ಕೃತಿಗಳು ಕೈಗೆಟಕುವ ಬೆಲೆಯಲ್ಲಿ ಓದುಗರಿಗೆ ಸಿಗುವಂತೆ ಮಾಡುವ ಸಾಹಿತ್ಯಿಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ನಿರ್ವಹಿಸುವುದು ಅದರ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.