ADVERTISEMENT

ಕಪ್ಪು ಹಣಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST

ವಾಮಮಾರ್ಗದ ಮೂಲಕ ಸಂಪಾದಿಸಿದ ಕಪ್ಪು ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿಡುವ ಪ್ರವೃತ್ತಿಗೆ ಕಡಿವಾಣ ಹಾಕುವ ಸಲುವಾಗಿ ಹಲವಾರು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಸಂಬಂಧ ಸಂಸತ್ತಿನಲ್ಲಿ 97 ಪುಟಗಳ ಶ್ವೇತಪತ್ರವನ್ನು ಮಂಡಿಸಲಾಗಿದೆ.

ವಿದೇಶಗಳ ಬ್ಯಾಂಕುಗಳಲ್ಲಿ ಇಡಲಾಗಿರುವ ಕಪ್ಪು ಹಣವನ್ನು ವಾಪಸು ತರಿಸಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಕೆಲ ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದವು. ಆದರೆ ಈ ಶ್ವೇತಪತ್ರದಲ್ಲಿ ಈ ವಿಷಯದ  ಪ್ರಸ್ತಾಪವಿಲ್ಲ.

ಭಾರತೀಯರು ಎಷ್ಟು ಹಣ ಅಲ್ಲಿ ಶೇಖರಿಸಿಟ್ಟಿದ್ದಾರೆ ಎನ್ನುವ ಅಂಕಿಅಂಶಗಳನ್ನು ನೀಡುವ ಗೋಜಿಗೂ ಸರ್ಕಾರ ಹೋಗಿಲ್ಲ. ಮುಂದೆ ಅಲ್ಲಿಗೆ ಹಣ ಹೋಗದಂತೆ ಮಾಡುವ ಕಠಿಣ ಕ್ರಮಗಳನ್ನು ಜಾರಿಗೆ ತರುವುದಾಗಿ ಅಭಯ ನೀಡಲಾಗಿದೆ. ಈ ವಿಷಯದಲ್ಲಿ ಸರ್ಕಾರ ಗಟ್ಟಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಯತ್ನಿಸಲಾಗಿದೆ.
 
ಪ್ರತಿಪಕ್ಷಗಳು ಇದರಿಂದ ಸಮಾಧಾನಗೊಂಡಂತಿಲ್ಲ. ಇಷ್ಟು ದೊಡ್ಡ ಪ್ರಮಾಣದ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ದೇಶಗಳ ಸಾಲಿನಲ್ಲಿ ಭಾರತ ಮೊದಲಸ್ಥಾನದಲ್ಲಿದೆ ಎನ್ನುವ ವಿಷಯವೇ ನಮ್ಮ ದೇಶದ ಭ್ರಷ್ಟಾಚಾರದ ವ್ಯಾಪ್ತಿಯನ್ನು ಹೇಳುತ್ತದೆ.

ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಇ್ಲ್ಲಲವೇ ಬಿಜೆಪಿಗೆ ಸೇರಿದ ನಾಯಕರಷ್ಟೇ ಅಲ್ಲ ದೇಶದ ನೂರಾರು ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳ ವಿರುದ್ಧವೂ ಕಪ್ಪುಹಣ ಕೂಡಿಟ್ಟ ಆರೋಪಗಳು ಕೇಳಿ ಬರುತ್ತಿವೆ.
 
ಇದರಿಂದಾಗಿ ಕಪ್ಪುಹಣ ಹೊಂದಿದವರ ಪಟ್ಟಿಯನ್ನು ತರಿಸಿಕೊಳ್ಳಲು ಕೇಂದ್ರ ಹಿಂದೇಟು ಹಾಕುತ್ತಿದೆ ಎಂದು ಭಾವಿಸಲು ಅವಕಾಶವಿದೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ಉದ್ಯಮಿಗಳು, ರಾಜತಾಂತ್ರಿಕರು, ಅಧಿಕಾರಿಗಳು, ರಾಜಕಾರಣಿಗಳು ಇಟ್ಟಿರುವ ಹಣ 24.5 ಕೋಟಿ ಎಂದು ಅಂದಾಜಿಸಲಾಗಿತ್ತು. ವಿಕಿಲಿಕ್ಸ್ ಕೂಡ ಐವತ್ತು ಮಂದಿ ಭಾರತೀಯರ ಪಟ್ಟಿ ಇರುವುದಾಗಿ ಹೇಳಿತ್ತು.
 
ಸ್ವಿಸ್ ಬ್ಯಾಂಕ್ ದಾಖಲೆಗಳ ಪ್ರಕಾರ ಅಲ್ಲಿ ಭಾರತೀಯರು ಇಟ್ಟಿರುವ ಹಣ ರೂ.9.295 ಕೋಟಿ. ಕಪ್ಪುಹಣದ ಖಾತೆಯ ವಿವರಗಳನ್ನು  ತರಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿತ್ತಾದರೂ ಅದು ಅಷ್ಟು ಸುಲುಭದ ಪ್ರಶ್ನೆಯಾಗಿರಲಿಲ್ಲ.

ತಾಂತ್ರಿಕ ಕಾರಣಗಳಿಂದ ಅದು ಅಸಾಧ್ಯವಾದ ಕೆಲಸವಾಗಿತ್ತು. ಆಯಾದೇಶಗಳಲ್ಲಿ ಬ್ಯಾಂಕುಗಳು ಮಾಡಿಕೊಂಡಿರುವ ಕಾನೂನು ಒಪ್ಪಂದಗಳು ಕಠಿಣವಾಗಿರುವುದರಿಂದ ಕೇಂದ್ರಸರ್ಕಾರವೂ ಅಸಹಾಯಕತೆ ವ್ಯಕ್ತಪಡಿಸಿತು.
 
ಈ ಸಂಬಂಧ ಕೇಂದ್ರ ಸರ್ಕಾರ 48 ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇನ್ನೂ 42 ದೇಶಗಳ ಜೊತೆ ಒಪ್ಪಂದ ಮಾಡಿಕೊಂಡರೆ ಕಪ್ಪುಹಣ ದೇಶದಾಟುವುದನ್ನು ನಿಯಂತ್ರಿಸಬಹುದು.
 
ಆರ್ಥಿಕ ಅಪರಾಧಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ, ಡೆಬಿಟ್ ಕಾರ್ಡ್‌ಗಳ ಬಳಕೆಗೆ ತೆರಿಗೆ ವಿನಾಯಿತಿಯಂತಹ ಉತ್ತೇಜನ , ಸರಕು ಹಾಗೂ ಸೇವಾತೆರಿಗೆ  ಅಳವಡಿಕೆ  ಕಪ್ಪುಹಣ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.

ಚಿನ್ನದ ಆಮದು ನಿಯಮಾವಳಿಯನ್ನು ಸಡಿಲಿಸಿದ ನಂತರ ಚಿನ್ನ ಕಳ್ಳಸಾಗಾಣಿಕೆ ಸ್ಥಗಿತಗೊಂಡಂತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಪಾರದರ್ಶಕತೆ ತರಲು ಮುಂದಾಗಿರುವುದು ದಿಟ್ಟಕ್ರಮ. ಹಣ ಸೋರುತ್ತಿರುವುದೇ ಅಲ್ಲಿ.  ಜಮೀನು ಮಾರಾಟದ ಮೂಲದಲ್ಲೇ ಟಿಡಿಎಸ್ ಕಡಿತ ಮಾಡುವ ಚಿಂತನೆ ಕೂಡ ಫಲಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.