ಬಳ್ಳಾರಿಯ `ಗಣಿ ಧಣಿ~ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಕೇಂದ್ರ ತನಿಖಾ ಮಂಡಲಿ (ಸಿಬಿಐ) ಬಂಧಿಸಿ ವಿಚಾರಣೆ ಆರಂಭಿಸಿರುವುದು ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಇನ್ನೊಮ್ಮೆ ಮನವರಿಕೆ ಮಾಡಿದ ದಿಟ್ಟ ಕ್ರಮ. ಗಣಿಗಾರಿಕೆಯಿಂದ ಗಳಿಸಿದ ಹಣದ ಮದದಿಂದ ಬಳ್ಳಾರಿ ಜಿಲ್ಲೆಯನ್ನು ಪ್ರತ್ಯೇಕ ಸಂಸ್ಥಾನದಂತೆ ಪರಿವರ್ತಿಸಿಕೊಂಡು ಅಲ್ಲಿ ತಾವು ಹೇಳಿದ್ದೇ ಕಾನೂನು, ಮಾಡಿದ್ದೇ ಆಡಳಿತ ಎಂಬಂತಹ ವಾತಾವರಣ ಕಲ್ಪಿಸಿದ್ದನ್ನು ಸ್ವತಃ ಸುಪ್ರೀಂ ಕೋರ್ಟ್ ಗಮನಿಸಿತ್ತು.
ಕರ್ನಾಟಕ ಸರ್ಕಾರದಲ್ಲಿ ಪ್ರಭಾವಿ ಸಚಿವ ಸ್ಥಾನ ಹೊಂದಿ ಅದರ ಬಲದಿಂದ ನೈಸರ್ಗಿಕ ಸಂಪತ್ತನ್ನು ಅವ್ಯಾಹತವಾಗಿ ಲೂಟಿ ಮಾಡುತ್ತಿದ್ದ `ಗಣಿಧಣಿ~ಗಳನ್ನು ಕಾನೂನು ವ್ಯಾಪ್ತಿಗೆ ತರುವ ಯತ್ನ ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಆಗಿದೆ. ಆಂಧ್ರದ ಹೈಕೋರ್ಟ್ ಆದೇಶದ ಅನ್ವಯ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆಂಧ್ರದಲ್ಲಿ ನಡೆಸಿದ ಕಾನೂನು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಜನಾರ್ದನರೆಡ್ಡಿ ಮತ್ತು ಅವರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿದೆ. ಜನಾರ್ದನರೆಡ್ಡಿ ಅವರ ಓಬಳಾಪುರಂ ಮೈನಿಂಗ್ ಕಂಪೆನಿ ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಮತ್ತು ಕರ್ನಾಟಕ- ಆಂಧ್ರಪ್ರದೇಶ ಗಡಿಯ ನಕ್ಷೆಯನ್ನು ವಿಕೃತಗೊಳಿಸಿ ಸಂರಕ್ಷಿತ ಅರಣ್ಯದಲ್ಲಿಯೂ ಗಣಿಗಾರಿಕೆ ನಡೆಸಿದ ಆರೋಪ ಎದುರಿಸುತ್ತಿದೆ. ಜನಾರ್ದನ ರೆಡ್ಡಿ ವಿರುದ್ಧ ಒಳಸಂಚು, ವಂಚನೆ, ಮೋಸ, ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಸಿಬಿಐ ಹೊರಿಸಿದೆ. ಭಾರತೀಯ ದಂಡಸಂಹಿತೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಗಣಿ ಮತ್ತು ಖನಿಜ ನಿಯಂತ್ರಣ ಕಾಯ್ದೆ ಉಲ್ಲಂಘನೆ ಸಂಬಂಧದಲ್ಲಿ ಪ್ರಕರಣಗಳನ್ನು ದಾಖಲಿಸಿದೆ.
ಕರ್ನಾಟಕ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ವರದಿ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಸಂಭವಿಸಿದ್ದನ್ನು ಉಲ್ಲೇಖಿಸಿದೆ. ಈ ವರದಿ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಸದಾನಂದಗೌಡ ಬಂದಿದ್ದಾರೆ.
ಕಳಂಕಿತರಾದ ರೆಡ್ಡಿಗಳು ಸ್ಥಾನ ವಂಚಿತರಾಗಿದ್ದಾರೆ. ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಸಂಪುಟದಲ್ಲಿ ಸ್ಥಾನ ಪಡೆಯುವ ಒತ್ತಡ ತಂತ್ರಕ್ಕೆ ಸಂಚು ನಡೆಸಿದ್ದ ರೆಡ್ಡಿ ಬಳಗಕ್ಕೆ ಸಿಬಿಐನ ಈ ಕ್ರಮ ಆಘಾತ ನೀಡಿದೆ. ರೆಡ್ಡಿಗಳು ಆಂಧ್ರದಲ್ಲಿ ನಡೆಸಿದ ಅವ್ಯವಹಾರಗಳನ್ನು ಅಲ್ಲಿನ ಸರ್ಕಾರ ತನಿಖೆಗೆ ಒಳಪಡಿಸಿರುವಂತೆಯೇ ರಾಜ್ಯದ ಬಿಜೆಪಿ ಸರ್ಕಾರ ಅಕ್ರಮ ಗಣಿಗಾರಿಕೆ ನಡೆಸಿ ಬೊಕ್ಕಸಕ್ಕೆ ನಷ್ಟ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು.
ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುವ ವ್ಯಕ್ತಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು. ಆಗಿರುವ ನಷ್ಟಕ್ಕೆ ನಾಲ್ಕು ಪಟ್ಟು ಹಣವನ್ನು ದಂಡದ ರೂಪದಲ್ಲಿ ವಸೂಲು ಮಾಡುವ ಮೂಲಕ ರಾಜ್ಯದ ಸಂಪತ್ತನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.