ADVERTISEMENT

ಕೇಂದ್ರದ ನೆರವು ಬಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ರಾಜ್ಯದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದೆ. ಆದರೆ ಅದನ್ನು ನಿರ್ದಿಷ್ಟ ಕಾರ್ಯಕ್ರಮಗಳಿಗೆ ಬಳಕೆ ಮಾಡಿ ಅದರ ಪ್ರಯೋಜನ ಉದ್ದೇಶಿತ ಜನರಿಗೆ ತಲುಪುತ್ತಿದೆಯೇ ಎನ್ನುವ ಬಗೆಗೆ ಶಂಕೆ ಇದೆ.

ಕಾರ್ಮಿಕರ ವಿವಿಧ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಹಣವನ್ನು ಖರ್ಚು ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪವಿದೆ. ಈಗಾಗಲೇ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದು ಹೋಗಿದ್ದು ಕೇಂದ್ರ ನೀಡಿರುವ ಹಣದಲ್ಲಿ ರಾಜ್ಯ ಸರ್ಕಾರ ಇದುವರೆಗೆ 2.95 ಕೋಟಿ ರೂಪಾಯಿಯನ್ನು ಮಾತ್ರ ಬಳಸಿಕೊಂಡಿದೆ ಎಂಬುದಾಗಿ ಕೇಂದ್ರ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಆದರೆ ಕೇಂದ್ರದ ಉಳಿದ ಹಣವನ್ನು ಇನ್ನು ಆರು ತಿಂಗಳಲ್ಲಿ ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಹೇಳಿರುವುದನ್ನು ನೋಡಿದರೆ ಈ ಉದ್ದೇಶಿತ ಹಣ ಈ ಅಲ್ಪಾವಧಿಯಲ್ಲಿ ನಿಜವಾಗಿಯೂ ನಿಗದಿತ ಕಾರ್ಯಕ್ರಮಗಳಿಗೆ ಖರ್ಚಾಗುವುದೇ ಎನ್ನುವ ಅನುಮಾನಕ್ಕೆ ಎಡೆಕೊಡುತ್ತದೆ.

ಈ ಹಣವಲ್ಲದೆ ಇಎಸ್‌ಐ ಆಸ್ಪತ್ರೆಗಳಲ್ಲಿನ ಚಿಕಿತ್ಸೆ, ಔಷಧ, ಕಟ್ಟಡಗಳ ನಿರ್ಮಾಣ, ದುರಸ್ತಿ ಮತ್ತಿತರೆ ಕಾರ್ಯಗಳಿಗೆ ಶೇ 87.5 ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ನೀಡುತ್ತಿದೆ. ಈ ಹಣವನ್ನೂ ರಾಜ್ಯ ಸರ್ಕಾರ ಸಮರ್ಥವಾಗಿ ನಿರ್ದಿಷ್ಟ ಕಾರ್ಯಗಳಿಗೆ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಂದ್ರದ್ದು. ಕೇಂದ್ರದಿಂದ ಬರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳದಿರುವುದು ರಾಜ್ಯ ಸರ್ಕಾರದ ವೈಫಲ್ಯ. ಇದು ರಾಜ್ಯದ ಜನತೆಗೆ ಮಾಡುತ್ತಿರುವ ಮೋಸ.

ಕೇಂದ್ರವು ಮೂರ‌್ನಾಲ್ಕು ವರ್ಷಗಳಲ್ಲಿ ಒದಗಿಸಿರುವ ಹಣದಲ್ಲಿ ಒಂದು ನಯಾಪೈಸೆಯನ್ನೂ ಉಳಿಸದೆ ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಅವರು ಹೇಳಿದರೆ ಸಾಲದು, ಆ ಹಣವನ್ನು ಖರ್ಚು ಮಾಡಲು ಏನೇನು ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವುದು ಮುಖ್ಯ.

ಹಣ ಎಂದರೆ ಕೇವಲ ದುಂದುವೆಚ್ಚ ಮಾಡುವುದಲ್ಲ. ಆ ಹಣ ನಿಗದಿತ ಕಾರ್ಯಕ್ರಮಗಳಿಗೆ ಮತ್ತು ಅದು ಮುಟ್ಟಬೇಕಾದ ಜನರಿಗೆ ತಲುಪುವುದು ಅಗತ್ಯ. ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಹೆಚ್ಚಿನ ನೆರವು ಸಿಕ್ಕಿರುವಂತೆ ಇತರೆ ಇಲಾಖೆಗಳಿಂದಲೂ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸಾಕಷ್ಟು ಅನುದಾನ ದೊರೆತಿರುವುದಾಗಿ ರಾಜ್ಯ ಸರ್ಕಾರದ ಮೂಲಗಳೇ ಹೇಳುತ್ತಿವೆ.

ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಒಟ್ಟು 23 ಸಾವಿರ ಕೋಟಿ ರೂಪಾಯಿ ಕೇಂದ್ರದ ಅನುದಾನ ದೊರೆತಿದೆ. ಗ್ರಾಮೀಣಾಭಿವೃದ್ಧಿಯ ಸುಮಾರು 20 ಕಾರ್ಯಕ್ರಮಗಳಿಗೆ ಎಂಟು ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಿರುವುದಾಗಿ ದೆಹಲಿಯಲ್ಲಿನ ಕರ್ನಾಟಕದ ಹೆಚ್ಚುವರಿ ವಿಶೇಷ ಪ್ರತಿನಿಧಿ ಕಾರ್ಯಾಲಯದ ಮಾಹಿತಿ ತಿಳಿಸಿದೆ. ಆದರೆ ಈ ಹಣ ನಿಜವಾದ ಉದ್ದೇಶಗಳಿಗೆ ಬಳಕೆಯಾಗದಿದ್ದರೆ ಏನು ಪ್ರಯೋಜನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.