ADVERTISEMENT

ಕೋರ್ಟ್ ಕಾಳಜಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ರಾಷ್ಟ್ರಪತಿಗಳಿಂದ ಕ್ಷಮಾದಾನ ಅರ್ಜಿಗಳು ತಿರಸ್ಕೃತಗೊಂಡ ಎಂಟು ಮಂದಿಯ ಗಲ್ಲುಶಿಕ್ಷೆಗೆ  ಸುಪ್ರೀಂಕೋರ್ಟ್ ನಾಲ್ಕು ವಾರ ತಡೆ ನೀಡಿದೆ. ಈ ಸಂಬಂಧದಲ್ಲಿ ತುರ್ತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ, ಜಮ್ಮು- ಕಾಶ್ಮೀರಲ್ಲಾದಂತಹ ಘಟನೆ ಮರುಕಳಿಸಬಾರದು ಎಂಬಂತಹ ಕಳವಳ ವ್ಯಕ್ತಪಡಿಸಿರುವುದು ವಿಶೇಷ. ಅಫ್ಜಲ್ ಗುರು ಪ್ರಕರಣವನ್ನು ಹೆಸರಿಸದೆಯೇ  ಕೋರ್ಟ್ ವ್ಯಕ್ತಪಡಿಸಿರುವಂತಹ ಕಾಳಜಿ ಇದು. ಈ ವಿಚಾರದಲ್ಲಿ ಕೇಂದ್ರದ ಅಸೂಕ್ಷ್ಮತೆಯನ್ನು ಒತ್ತಿ ಹೇಳಿದಂತಾಗಿದೆ. ಸಂಪರ್ಕ ಕ್ರಾಂತಿಯ ಈ ದಿನಗಳಲ್ಲೂ, ಗಲ್ಲುಶಿಕ್ಷೆ ಜಾರಿಗೊಳಿಸುವ ವಿಚಾರವನ್ನು ಪತ್ರದ ಮೂಲಕ ಅಫ್ಜಲ್ ಗುರು ಕುಟುಂಬಕ್ಕೆ ತಿಳಿಸಲಾಗಿತ್ತು. ಇದು ಆತನ ಕುಟುಂಬಕ್ಕೆ ತಲುಪಿದ್ದು ಆತ ನೇಣುಗಂಬಕ್ಕೇರಿದ ಎರಡು ದಿನಗಳ ಬಳಿಕ. ಇದರಿಂದಾಗಿ ಗಲ್ಲು ಶಿಕ್ಷೆ ಜಾರಿಯಾಗುವ ಮುನ್ನ ಆತನನ್ನು ಕಡೆಯ ಬಾರಿ ಕಾಣುವ ಹಕ್ಕು ಆತನ ಬಂಧುಗಳಿಗೆ ನಿರಾಕರಣೆಯಾಯಿತು. ಈ ಪ್ರಕರಣ ಕಾಶ್ಮೀರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೂ ಪ್ರೇರಕವಾಗಿತ್ತು. ಈಗ, ಕಳೆದ ವಾರ, ಕರ್ನಾಟಕದ ಮಂಗಳೂರಿನ ಪ್ರವೀಣ್ ಕುಮಾರ್ ಸೇರಿದಂತೆ ಎಂಟು ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿಯವರು ತಿರಸ್ಕರಿಸ್ದ್ದಿದರು. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಎಂಟು ಮಂದಿಯನ್ನು ಗಲ್ಲಿಗೇರಿಸಬಹುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರಿಂದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಪಿ. ಸತ್ಯಶಿವಂ ಮತ್ತು ಎಂ ವೈ ಇಕ್ಬಾಲ್ ತುರ್ತಾಗಿ ವಿಚಾರಣೆ ನಡೆಸಿ ಸಂಬಂಧಿಸಿದ ರಾಜ್ಯಗಳಿಗೆ ನೋಟಿಸ್ ನೀಡಿದ್ದಾರೆ. ಅಪರಾಧಿಯನ್ನು ಗಲ್ಲಿಗೇರಿಸುವ ಮುನ್ನ ಕುಟುಂಬದವರಿಗೆ ಮುಂಚಿತವಾಗಿ ತಿಳಿಸಲೇಬೇಕು ಎಂಬ ನಿಯಮ ಹಿಂದೆ ಇತ್ತು, ಈಗಲೂ ಅದು ಇದೆ ಎಂಬುದನ್ನು ಭಾರತದ ಮುಖ್ಯ ನ್ಯಾಯಾಧೀಶ, ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರೂ ಸುದ್ದಿಗೋಷ್ಠಿಯೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ಒದಗಿಸಿದೆ. ಹೀಗಾಗಿ, ಈ ವಿಚಾರದಲ್ಲಿ ಹೊಂದಬೇಕಿರುವ ಸೂಕ್ಷ್ಮತೆ ಹಾಗೂ ಮಾನವೀಯತೆಯ ಅಗತ್ಯವನ್ನು ಪ್ರತಿಪಾದಿಸಿದಂತಾಗಿದೆ.

ಗಲ್ಲು ಶಿಕ್ಷೆಗೊಳಗಾದವರ ಕ್ಷಮಾದಾನ ಅರ್ಜಿಗಳನ್ನು ಹಲವು ವರ್ಷಗಳವರೆಗೆ ಇತ್ಯರ್ಥ ಪಡಿಸದೆ  ಇಟ್ಟುಕೊಳ್ಳುವುದರ ವಿರುದ್ಧವೂ ಭಾರತದ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಟೀಕೆ ಮಾಡಿರುವುದು ಸರಿಯಾಗಿಯೇ ಇದೆ. `ಈಗಿರುವ ವ್ಯವಸ್ಥೆಯಲ್ಲಿ ಗಲ್ಲುಶಿಕ್ಷೆಗೆ ಅವಕಾಶವಿದೆ. ಇಂತಹ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾದಷ್ಟೂ ಒಳ್ಳೆಯದು' ಎಂಬಂತಹ ನ್ಯಾಯಮೂರ್ತಿ ಕಬೀರ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಕ್ಷಮಾದಾನ ಅರ್ಜಿಗಳನ್ನು ಇತ್ಯರ್ಥಪಡಿಸುವಲ್ಲಿನ ವಿಳಂಬಗಳಿಗೆ ಕೊನೆಯೇ ಇಲ್ಲ. ಅನಿಶ್ಚಯ ಭವಿಷ್ಯದಲ್ಲಿ ಜೈಲಿನಲ್ಲಿ ಅಪರಾಧಿಗಳು ಕೊಳೆಯುವಂತಾಗುವುದು ಅಮಾನವೀಯ. ಈ ತ್ರಿಶಂಕು ಸ್ಥಿತಿಗೆ ರಾಜಕೀಯ ಕಾರಣಗಳೂ ಕಾರಣವಾಗುತ್ತಿವೆ. ನ್ಯಾಯದಾನ ವಿಳಂಬವಾದಷ್ಟೂ ನ್ಯಾಯದ ನಿರಾಕರಣೆಯಾದಂತೆ. ನ್ಯಾಯದಾನ ವ್ಯವಸ್ಥೆಯ ಅಣಕವಾಗುತ್ತದೆ ಅದು. ಹೀಗಾಗಿ ಕ್ಷಮಾದಾನ ಅರ್ಜಿಗಳ ಇತ್ಯರ್ಥಕ್ಕೆ ನಿರ್ದಿಷ್ಟ ಕಾಲಾವಧಿಯನ್ನು ನಿಗದಿಪಡಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.