ADVERTISEMENT

ಗೋರಕ್ಷಕರ ಹಿಂಸೆಗೆ ಕಡಿವಾಣ: ಮಾತಿಗಿಂತ ಕಠಿಣ ಕ್ರಮ ಬೇಕು

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 20:14 IST
Last Updated 17 ಜುಲೈ 2017, 20:14 IST
ಗೋರಕ್ಷಕರ ಹಿಂಸೆಗೆ ಕಡಿವಾಣ: ಮಾತಿಗಿಂತ ಕಠಿಣ ಕ್ರಮ ಬೇಕು
ಗೋರಕ್ಷಕರ ಹಿಂಸೆಗೆ ಕಡಿವಾಣ: ಮಾತಿಗಿಂತ ಕಠಿಣ ಕ್ರಮ ಬೇಕು   

ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ, ಹಲ್ಲೆ ನಡೆಸುವ, ಪುಂಡಾಟಕ್ಕೆ ಇಳಿಯುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಡುಗಿದ್ದಾರೆ. ಅಲ್ಲದೆ ಇಂತಹ ಕೃತ್ಯಗಳಿಗೆ ಕೋಮು ಅಥವಾ ರಾಜಕೀಯ ಬಣ್ಣ ಕೊಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಪೂರ್ವಭಾವಿಯಾಗಿ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ಗೋವಿನ ಜತೆ ಹಿಂದೂಗಳಿಗೆ ಭಾವನಾತ್ಮಕ ಸಂಬಂಧ ಇದೆ. ಹಾಗೆಂದು ಯಾರೇ ಆಗಲಿ ಕಾನೂನು ಉಲ್ಲಂಘಿಸುವುದು ಸಮರ್ಥನೀಯ ಅಲ್ಲ’ ಎಂದು ಹೇಳುವ ಮೂಲಕ, ಇಂಥ ಹಿಂಸಾಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಕಾನೂನು, ಸುವ್ಯವಸ್ಥೆ ಮತ್ತು ಶಾಂತಿಪಾಲನೆ ರಾಜ್ಯ ಸರ್ಕಾರಗಳ ಹೊಣೆ.ಹೀಗಾಗಿಯೇ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಜವಾಬ್ದಾರಿಯನ್ನು ಅವರು ರಾಜ್ಯಗಳ ಮೇಲೆಯೇ ಹೊರಿಸಿದ್ದಾರೆ. ಸ್ವಯಂಘೋಷಿತ ಗೋರಕ್ಷಕರಿಗೆ ಅವರು ಎಚ್ಚರಿಕೆ ಕೊಡುತ್ತಿರುವುದು ಒಂದು ತಿಂಗಳಲ್ಲಿ ಇದು ಎರಡನೇ ಸಲ.  ಅಂದರೆ, ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಕೃತ್ಯಗಳು ದೇಶದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿರುವುದು ಅವರ  ಸರ್ಕಾರಕ್ಕೂ  ತಲೆನೋವು ತಂದಂತಿದೆ.

ಗೋರಕ್ಷಕರು ಹೆಚ್ಚು ಕ್ರಿಯಾಶೀಲರಾಗಿರುವುದು, ಹೆಚ್ಚಾಗಿ ದೌರ್ಜನ್ಯ ನಡೆಸುತ್ತಿರುವುದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ. ಇನ್ನಿತರ ರಾಜ್ಯಗಳಲ್ಲಿಯೂ ಇಲ್ಲವೆಂದಲ್ಲ. ಗೋರಕ್ಷಣೆ ಹಿಂದುತ್ವ ಸಿದ್ಧಾಂತದ ಪ್ರಮುಖ ಅಂಶಗಳಲ್ಲಿ ಒಂದು. ಅದು ಬಿಜೆಪಿಗೂ ಪ್ರಿಯವಾದ ವಿಷಯ. ರಾಜಕಾರಣಕ್ಕೂ ಅದು ತಳಕು ಹಾಕಿಕೊಂಡಿದೆ. ಹೀಗಾಗಿ, ಗೋರಕ್ಷಣೆಯ ನೆಪದಲ್ಲಿ ಗೂಂಡಾಗಿರಿ ಮಾಡುತ್ತಿರುವವರನ್ನು ಮಟ್ಟ ಹಾಕುವಂತೆ ಪ್ರಧಾನಿ ನೀಡಿದ ಸೂಚನೆಯನ್ನು  ಅವರದೇ ಪಕ್ಷದ ರಾಜ್ಯ ಸರ್ಕಾರಗಳು ಹೇಗೆ ಜಾರಿಗೆ ತರುತ್ತವೆ ಎನ್ನುವುದನ್ನು ಕಾದುನೋಡಬೇಕು. ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಕಿಡಿಗೇಡಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿರುವುದನ್ನು ಅವು ಕಾರ್ಯರೂಪದಲ್ಲಿ ತೋರಿಸಬೇಕು.  ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಕೂಡ ಸಬೂಬು ಹೇಳದೆ, ಸ್ವಯಂಘೋಷಿತ ಗೋರಕ್ಷಕರ ದೌರ್ಜನ್ಯಗಳನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕು. ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು.

ಪ್ರಧಾನಿಯೇ ಸ್ವತಃ ಈ ಬಗ್ಗೆ ಗಮನ ಹರಿಸಿರುವುದರಿಂದ ವಿರೋಧ ಪಕ್ಷಗಳು ಕೂಡ ಸಂಸತ್ತಿನಲ್ಲಿ ಎಚ್ಚರದಿಂದ ನಡೆದುಕೊಳ್ಳಬೇಕು. ಏಕೆಂದರೆ, ಅಧಿವೇಶನದಲ್ಲಿ  ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅವು ಪ್ರಯತ್ನಿಸುವುದು ಸಹಜ.  ಹಾಗೆಂದು, ಗೋರಕ್ಷಣೆ ಹೆಸರಿನಲ್ಲಿ ನಡೆದ, ನಡೆಯುತ್ತಿರುವ ಪುಂಡಾಟಿಕೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿ  ಸಮರ್ಥನೀಯ ಎನಿಸಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ರಚನಾತ್ಮಕ ಚರ್ಚೆ ನಡೆದರೆ ಅದೇನೂ ತಪ್ಪಲ್ಲ. ವಾಸ್ತವವಾಗಿ ಅಂತಹ ಚರ್ಚೆ ನಡೆಯಬೇಕು. ಅದಕ್ಕೆ ಬದಲಾಗಿ ಕಲಾಪಕ್ಕೆ ತಡೆ ಒಡ್ಡುವುದು, ಚರ್ಚೆಗಳೇ ನಡೆಯದಂತೆ ಮಾಡುವ ಹಳೆಯ ಚಾಳಿಯನ್ನು ಅವು ಬಿಟ್ಟು ಹೆಚ್ಚು ಜವಾಬ್ದಾರಿ ಪ್ರದರ್ಶಿಸಬೇಕು. ಏಕೆಂದರೆ ಅಧಿವೇಶನದ ಪ್ರತಿ ಕ್ಷಣಕ್ಕೂ ತೆರಿಗೆದಾರರ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅದು ಅವುಗಳ ಗಮನದಲ್ಲಿ ಇರಬೇಕು. ಅಧಿವೇಶನದಲ್ಲಿ ಚರ್ಚಿಸಲು ಅನೇಕ ಪ್ರಮುಖ ವಿಷಯಗಳಿರುತ್ತವೆ, ಶಾಸನ ಮಾಡುವ ಹೊಣೆ ಇರುತ್ತದೆ. ಅದನ್ನು ನಿಭಾಯಿಸಬೇಕು.  ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಮುಖ್ಯವಾಗಿ ಸರ್ಕಾರದ ಕರ್ತವ್ಯವಾದರೂ, ವಿರೋಧ ಪಕ್ಷಗಳಿಗೂ ಅಷ್ಟೇ ಹೊಣೆಗಾರಿಕೆ ಇದೆ. ಸಣ್ಣಪುಟ್ಟ ವಿಚಾರಗಳಿಗಾಗಿ ಸಂಸತ್ತಿನ ಕಲಾಪವನ್ನೇ ಹಾಳುಮಾಡಿದ ದಿನಗಳನ್ನೂ ಜನ ನೋಡಿದ್ದಾರೆ. ಅಂತಹ ಪ್ರಸಂಗಗಳು ಮರುಕಳಿಸದಿರಲಿ.  ಸಂಸತ್ತು ಇರುವುದು ದೇಶ ಎದುರಿಸುತ್ತಿರುವ  ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು, ಪರಿಹಾರ ಹುಡುಕಲು.  ಈ ಸಲದ ಅಧಿವೇಶನ ಅಂತಹ ಒಂದು ಮೇಲ್ಪಂಕ್ತಿ ಹಾಕಿಕೊಡಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.