ಬ್ಯಾಂಕ್ ಖಾತೆಯಲ್ಲಿ ಹಣವುಳ್ಳವರಿಗೆ ದಿನದ ಯಾವ ಹೊತ್ತಿನಲ್ಲಿ ಬೇಕಿದ್ದರೂ ಹಣ ಪಡೆಯುವ ಸೌಲಭ್ಯ ಒದಗಿಸಿರುವ ಎ.ಟಿ.ಎಂ. ಕೇಂದ್ರಗಳು, ಭದ್ರತೆ ಕೊರತೆಯಿಂದ ಅಪಾಯದ ತಾಣಗಳಾಗಿ ಪರಿವರ್ತನೆ ಆಗಿವೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್‌ನ ಎ.ಟಿ.ಎಂ. ಕೇಂದ್ರವೊಂದರಲ್ಲಿ ಮಂಗಳವಾರ ಬೆಳಿಗ್ಗೆ ಮಹಿಳಾ ಗ್ರಾಹಕರೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿ ಹಣ ದೋಚಿರುವ ಆಘಾತಕಾರಿ ಕೃತ್ಯ ನಗರವಾಸಿಗಳನ್ನು ಬೆಚ್ಚಿಬೀಳಿಸಿದೆ. ಎ.ಟಿ.ಎಂ. ಕೊಠಡಿಯೊಳಗೆ ಕಾಲಿಡಲು ಹೆದರುವಂಥ ಸ್ಥಿತಿ ಸೃಷ್ಟಿಸಿದೆ.
ಕಳ್ಳರು, ದರೋಡೆಕೋರರ ದೃಷ್ಟಿ ಎ.ಟಿ.ಎಂ.ಗಳತ್ತ ವಾಲಿದೆ ಎಂಬುದಕ್ಕೆ ಅನೇಕ ನಿದರ್ಶನಗಳು ಸಿಗುತ್ತವೆ. ಇಲ್ಲಿಯತನಕ ಈ ಯಂತ್ರಗಳನ್ನು ಒಡೆದು ಹಣ ದೋಚಿದ, ಇಲ್ಲವೇ ಹೊತ್ತೊಯ್ದ ಘಟನೆಗಳು ಹೆಚ್ಚಿಗೆ ಬಯಲಿಗೆ ಬಂದಿದ್ದವು. ಆದರೆ, ಈಗ ಹಣ ಪಡೆಯಲು ಬರುವ ಗ್ರಾಹಕರನ್ನು ಮಾರಕ ಆಯುಧಗಳಿಂದ ಬೆದರಿಸಿ, ಹಲ್ಲೆ ನಡೆಸಿ ದೋಚುವ ದುಷ್ಕೃತ್ಯ ಶುರುವಾಗಿರುವುದು ಆತಂಕಕಾರಿ ಬೆಳವಣಿಗೆ. ಬ್ಯಾಂಕ್‌ಗಳು ಪೈಪೋಟಿಗೆ ಬಿದ್ದು ಸಣ್ಣಪುಟ್ಟ ಗಲ್ಲಿಗಳಲ್ಲೂ ಎ.ಟಿ.ಎಂ. ಕೇಂದ್ರಗಳನ್ನು ತೆರೆದಿವೆ. ಈ ಸೌಕರ್ಯದ ಫಲವಾಗಿ, ಹಣ ಹಿಂದಕ್ಕೆ ಪಡೆಯಲು ಪ್ರತೀ ಸಲ ಬ್ಯಾಂಕ್‌ಗೆ ಎಡತಾಕುವ ಕಷ್ಟ ನಿವಾರಣೆ ಆಗಿದೆ. ಅಮೂಲ್ಯ ವೇಳೆ ಪೋಲಾಗುವುದೂ ತಪ್ಪಿದೆ.
ಆದರೆ, ಭದ್ರತೆಯ ಲೋಪ ಫಲವನ್ನು ನುಂಗಿದೆ. ಏನೇ ಅನುಕೂಲ ಇದ್ದರೂ ಜೀವ ಬೆದರಿಕೆಯ ಭೀತಿ ಎದುರು ಅದು ತೃಣಸಮಾನ. ನಾಗರಿಕರಲ್ಲಿ ಮೂಡಿರುವ ಇಂತಹ ಭೀತಿ ನಿವಾರಣೆಗೆ ಬ್ಯಾಂಕ್‌ಗಳು ಸ್ಪಂದಿಸಬೇಕಿದೆ. ತಕ್ಷಣ ಕ್ರಮ ಜರುಗಿಸಬೇಕಿದೆ.
ಎ.ಟಿ.ಎಂ. ಕೇಂದ್ರಗಳಲ್ಲಿ ಅನೇಕ ಕಡೆ ಭದ್ರತಾ ಸಿಬ್ಬಂದಿ ಇಲ್ಲ. ಕೆಲವೆಡೆ ಗ್ರಾಹಕರ ರಕ್ಷಣೆಗೆ ಬರಲಾರದಷ್ಟು ನಿಶ್ಶಕ್ತ, ವೃದ್ಧ ಕಾವಲುಗಾರರು ನೆಪಕ್ಕೆ ಎಂಬಂತೆ ಇದ್ದಾರೆ. ಈ ಹಿಂದೆ, ಎ.ಟಿ.ಎಂ. ಬಾಗಿಲಿನ ಕಿಂಡಿಯೊಳಗೆ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡನ್ನು ತೂರಿಸಿದ ನಂತರವಷ್ಟೇ ಬಾಗಿಲು ತೆರೆದುಕೊಳ್ಳುತ್ತಿತ್ತು. ಬೆರಳಿಗೆ ಉಗುರಿನ ರಕ್ಷಣೆ ಎಂಬಂತಿದ್ದ ಆ ವ್ಯವಸ್ಥೆಯನ್ನೂ ಈಗ ಕೈಬಿಡಲಾಗಿದೆ.
ಭದ್ರತೆಗೆ ಸಿಬ್ಬಂದಿ ಸಿಗುತ್ತಿಲ್ಲ ಎಂದು ಬ್ಯಾಂಕ್‌ಗಳು ನೆಪ ಮುಂದಿಡುತ್ತಿವೆ. ಭದ್ರತೆ ನೀಡುವುದು ನಮ್ಮ ಕರ್ತವ್ಯ ಅಲ್ಲ ಎಂದು ಪೊಲೀಸರು ಜಾರಿಕೊಳ್ಳುತ್ತಾರೆ. ಹಾಗಾದರೆ ಗ್ರಾಹಕರಿಗೆ ರಕ್ಷಣೆ ನೀಡುವ ಹೊಣೆ ಯಾರದು? ಭಾರತದಲ್ಲಿ ಎ.ಟಿ.ಎಂ. ಕೇಂದ್ರಗಳ ಒಟ್ಟಾರೆ ವಿನ್ಯಾಸ ಗಮನಿಸಿದರೆ ಯಂತ್ರಕ್ಕೆ ರಕ್ಷಣೆ ಒದಗಿಸುವ ಕಡೆಗೇ ಗಮನ ಕೇಂದ್ರೀಕೃತವಾಗಿದೆ ಎಂದು ಅನಿಸುತ್ತದೆ. ಷಟರ್ ಅಳವಡಿಕೆಯ ಹಿಂದೆ ಯಂತ್ರ ರಕ್ಷಣೆಯ ಉದ್ದೇಶ ಇದೆಯೇ ಹೊರತು ಜೀವ ರಕ್ಷಣೆಯ ಕಾಳಜಿ ಕಾಣುವುದಿಲ್ಲ. ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿದ ಮಾತ್ರಕ್ಕೆ ಭದ್ರತೆ ಒದಗಿಸುವ ಹೊಣೆ ಈಡೇರಿತು ಎಂದು ಭಾವಿಸಲಾಗದು. ಭದ್ರತೆ ಒದಗಿಸುವುದು ತಮ್ಮ ಕರ್ತವ್ಯ ಎಂದು ಬ್ಯಾಂಕ್‌ಗಳು ಭಾವಿಸಬೇಕು. ಈ ಅಗತ್ಯವನ್ನು ಕಾಲಮಿತಿಯೊಳಗೆ ಪೂರೈಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.