ADVERTISEMENT

ಜನಸಾಮಾನ್ಯರಿಗೆ ಹೊರೆ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಬೆಲೆ ಏರಿಕೆಗಳ ಭಾರದಲ್ಲಿ ಕುಗ್ಗಿ ಹೋಗಿರುವ ಶ್ರೀ ಸಾಮಾನ್ಯನ ಮೇಲೆ ಕೇಂದ್ರ ಸರ್ಕಾರ ಮತ್ತೊಮ್ಮೆ ಬರೆ ಎಳೆದಿದೆ. ಈಗಾಗಲೇ ಒಂಬತ್ತು ಬಾರಿ ಪೆಟ್ರೋಲ್ ಬೆಲೆ ಏರಿಸಿದ್ದ ಸರ್ಕಾರ, ಈ ಬಾರಿ ಬಹಳ ದುಬಾರಿ ಎನಿಸುವಷ್ಟು ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ದರ ಏರಿಕೆಯ ಅಧಿಕಾರ ಕೊಟ್ಟು, ನಿಯಂತ್ರಣವನ್ನು ಕೈಬಿಟ್ಟ ಮೇಲೆ ತೈಲ ಕಂಪೆನಿಗಳು ಮನಬಂದಂತೆ ಬೆಲೆ ಏರಿಸುತ್ತಿರುವುದು ಸಮರ್ಥನೀಯವೇ ಅಲ್ಲ. ರೂಪಾಯಿ ಮೌಲ್ಯ ಕುಸಿತದಿಂದ ಹಾಗೂ ದೇಶದ ಆಮದು ವೆಚ್ಚ ಹೆಚ್ಚುತ್ತಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ತೈಲ ಕಂಪೆನಿಗಳು ಹೇಳುತ್ತಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೂ ಎರಡು ತಿಂಗಳಿಂದ ತೈಲೋತ್ಪನ್ನಗಳ ಬೆಲೆಯನ್ನು ಏರಿಸಿಲ್ಲ. ಬೆಲೆ ಏರಿಸದ್ದ್ದಿದರೆ ಕಂಪೆನಿಗಳು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಕಂಪೆನಿಗಳ ವಾದ.  ದೇಶದ ಆರ್ಥಿಕ ದುಃಸ್ಥಿತಿ, ಹಣದುಬ್ಬರವನ್ನು ನಿಯಂತ್ರಿಸಲಾಗದ ಸರ್ಕಾರದ ನಿಷ್ಕ್ರಿಯತೆಯೂ ಇದಕ್ಕೆ ಕಾರಣ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾದಂತೆಲ್ಲಾ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸುವುದರಲ್ಲಿ ಅರ್ಥವಿಲ್ಲ. ನಿಯಂತ್ರಣ ನೀತಿ ಇದ್ದಾಗ ಬೆಲೆ ಹೆಚ್ಚಿಸುವ ಸಂದರ್ಭ ಬಂದಾಗಲೆಲ್ಲಾ ಜನರ ಬದುಕಿನ  ಮೇಲಾಗುವ ಪರಿಣಾಮವನ್ನು ಸರ್ಕಾರ ಗಂಭೀರವಾಗಿ ಚಿಂತಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಜನರ ಬಗ್ಗೆ ಚಿಂತಿಸದೇ ಬೆಲೆ ಏರಿಸುವುದನ್ನು ಅರ್ಥವ್ಯವಸ್ಥೆಯ ಸಮರ್ಪಕ ನಿರ್ವಹಣೆ ಎನ್ನಲಾಗದು. ಇದು ಜನವಿರೋಧಿ ನಿಲುವು ಎನ್ನಬಹುದಷ್ಟೇ.

 ಪೆಟ್ರೋಲ್ ಬೆಲೆ ಏರಿಕೆಯ ನೇರ ಪರಿಣಾಮ ಸರಕು ಸಾಗಾಣಿಕೆ ವೆಚ್ಚದ ಮೇಲೆ ಆಗುತ್ತದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಬದುಕು ಇದರಿಂದ ಮತ್ತಷ್ಟು ಹದಗೆಡುತ್ತದೆ.

ಯೂರೋಪಿನಲ್ಲಿ ಆರ್ಥಿಕ ಅಸ್ಥಿರತೆ ತಲೆದೋರಿದ ನಂತರ, ಡಾಲರ್ ಎದುರು ರೂಪಾಯಿ ವಿನಿಮಯ ದರ ತೀವ್ರವಾಗಿ ಕುಸಿದಿರುವುದರಿಂದ ತೈಲ ಬೆಲೆ ಏರಿಕೆಯಂತಹ ಕಠಿಣಕ್ರಮ ಕೈಗೊಳ್ಳುವುದಾಗಿ ಸರ್ಕಾರ ಈ ಹಿಂದೆಯೇ ಎಚ್ಚರಿಸಿತ್ತು. ಆದರೆ ಪೆಟ್ರೋಲ್ ಬೆಲೆ ಏರಿಸುವುದೊಂದೇ ಇದಕ್ಕಿರುವ ಮಾರ್ಗ ಎಂದು ಸರ್ಕಾರ ನಂಬಿರುವುದು ಹಾಸ್ಯಾಸ್ಪದ.

ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ತರುವುದೂ ಸೇರಿದಂತೆ ಹಲವಾರು ಕ್ರಮಗಳ ಮೂಲಕ ಆರ್ಥಿಕ ಸುಧಾರಣೆಯತ್ತ ಗಮನ ಹರಿಸಬಹುದಿತ್ತು.  ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟು ನಷ್ಟದ ಹೊರೆಯನ್ನು ಜನರ ಮೇಲೆ ಹೊರಿಸುವುದು ಜನದ್ರೋಹ.
 
ಜನಸಾಮಾನ್ಯರಿಗೆ ಹೊರೆಯಾಗುವುದನ್ನು ಮನಗಂಡು ಕೆಲವು ರಾಜ್ಯಗಳಲ್ಲಿ ಈ ಹಿಂದೆ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸಿದ ಉದಾಹರಣೆಗಳಿವೆ. ದೇಶದಲ್ಲಿ ಪೆಟ್ರೋಲ್ ಮೇಲೆ ಅತೀ ಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ.

ಆದರೆ ರಾಜ್ಯ ಸರ್ಕಾರ ಹಟಮಾರಿ ಧೋರಣೆ ತಳೆದು ತೆರಿಗೆ ಇಳಿಸಲು ನಿರಾಕರಿಸಿತು. ಜನರ ಸಂಕಷ್ಟವನ್ನು ಅರಿತು ರಾಜ್ಯ ಸರ್ಕಾರ ಈಗಲಾದರೂ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ ಇಳಿಸುವ ತೀರ್ಮಾನ ಕೈಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.