ADVERTISEMENT

ಜಾಲತಾಣಗಳ ದುಃಸ್ಥಿತಿ ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2013, 19:30 IST
Last Updated 3 ನವೆಂಬರ್ 2013, 19:30 IST

ಕಂಪ್ಯೂಟರ್‌ನಲ್ಲಿ ಬಳಸುವ ಕನ್ನಡದ ಅಧಿಕೃತ ಶಿಷ್ಟತೆ ಯೂನಿಕೋಡ್ ಆಗಿರಬೇಕು ಎಂದು ಕರ್ನಾಟಕ ಸರ್ಕಾರ ನೇಮಿಸಿದ್ದ ‘ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ’ಯ ಶಿಫಾರಸಿಗೆ ಮೂರು ವರ್ಷವಾಯಿತು. ಎಲ್ಲಾ ಇ-ಆಡಳಿತ ಯೋಜನೆಗಳಲ್ಲೂ ಭಾಷಾ ಬಳಕೆ ಯೂನಿಕೋಡ್ ಶಿಷ್ಟತೆಯಲ್ಲಿರಬೇಕು ಎಂಬ ಕೇಂದ್ರ ಸರ್ಕಾರದ ಸುತ್ತೋಲೆ ಹೊರಬಂದು ಐದು ವರ್ಷಗಳು ಉರುಳಿತು. ಎಲ್ಲದಕ್ಕಿಂತ ಮುಖ್ಯವಾಗಿ ಕರ್ನಾಟಕ ಸರ್ಕಾರವೇ ಯೂನಿಕೋಡ್‌ ಕನ್ನಡ ಕಂಪ್ಯೂಟಿಂಗ್‌ನ ಅಧಿಕೃತ ಶಿಷ್ಟತೆ ಎಂದು ಘೋಷಿಸಿ ಒಂದು ವರ್ಷ ಕಳೆಯಿತು. ಈ ಅವಧಿಯಲ್ಲಿ ಯೂನಿಕೋಡ್ ಬಳಕೆ ಇರಲಿ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕನ್ನಡದ ಬಳಕೆ ಎಷ್ಟಿದೆ ಎಂಬುದನ್ನು ನೋಡಿದರೇ ಆಘಾತವಾಗುವಂಥ ಸ್ಥಿತಿ ಇದೆ.

2012ರ ನವೆಂಬರ್‌ನಲ್ಲಿ ‘ಪ್ರಜಾವಾಣಿ’, ಸರ್ಕಾರಿ ವೆಬ್‌ಸೈಟ್‌ಗಳ ವಿಸ್ತೃತ ಸಮೀಕ್ಷೆಯೊಂದನ್ನು ನಡೆಸಿ ಕನ್ನಡ ಬಳಕೆಯ ಪ್ರಮಾಣ ಶೇಕಡಾ ಏಳರಷ್ಟು ಎಂದು ಗುರುತಿಸಿತ್ತು. ಒಂದು ವರ್ಷದ ನಂತರ ಸರ್ಕಾರಿ ವೆಬ್‌ಸೈಟ್‌ಗಳ ಸ್ಥಿತಿಯನ್ನು ಮತ್ತೆ ಪರಿಶೀಲಿಸಿದಾಗಲೂ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ಸರ್ಕಾರವೇ ಉತ್ತರಿಸಿರುವಂತೆ ಒಟ್ಟು 79 ಅಧಿಕೃತ ವೆಬ್‌ಸೈಟುಗಳಲ್ಲಿ ಎಂಟರಲ್ಲಿ ಮಾತ್ರ ಕನ್ನಡವಿದೆ. ಇವುಗಳಲ್ಲಿ ಮೂರು ಮಾತ್ರ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಿಕೊಂಡಿವೆ. ಈ ಮಾಹಿತಿಯನ್ನು ‘ಪ್ರಜಾವಾಣಿ’ ಮರುಪರಿಶೀಲನೆಗೆ ಒಳಪಡಿಸಿದಾಗ ಮತ್ತಷ್ಟು ವಿವರಗಳು ಬೆಳಕಿಗೆ ಬಂದವು. ಸರ್ಕಾರದ ಯಾವ ವೆಬ್‌ಸೈಟ್ ಯಾವ ಶಿಷ್ಟತೆಯನ್ನು ಬಳಸುತ್ತಿದೆ ಎಂಬ ಮಾಹಿತಿ ಇ–ಆಡಳಿತ ಕೇಂದ್ರಕ್ಕೇ  ಇರಲಿಲ್ಲ.

ಮಾಹಿತಿ ತಂತ್ರಜ್ಞಾನ ಇಲಾಖೆ, ಇ–ಆಡಳಿತ ಇಲಾಖೆ, ಇ–ಆಡಳಿತ ಕೇಂದ್ರ ಹೀಗೆ ಎರಡು ಇಲಾಖೆ ಮತ್ತು ಹಲವು ಸಂಸ್ಥೆಗಳು ಆಡಳಿತ ತಂತ್ರಜ್ಞಾನವನ್ನು ನಿರ್ವಹಿಸುವುದಕ್ಕಾಗಿಯೇ ಇವೆ. ಆದರೆ ಇವುಗಳಲ್ಲಿ ಯಾವುದೂ  ಕನ್ನಡವನ್ನು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ ಎಂಬುದು ಸ್ಪಷ್ಟ. ಐ.ಟಿ-ಬಿ.ಟಿ ಸಚಿವರಿಗೆ ಉದ್ಯಮ ಮಾತ್ರ ಕಾಣಿಸುತ್ತದೆ. ಇ–ಆಡಳಿತ ಇಲಾಖೆ, ತಂತ್ರಾಂಶ ಖರೀದಿ ಇಲಾಖೆಯಾಗಿ ಬದಲಾಗಿಬಿಟ್ಟಿದೆ.

ಎಲ್ಲಾ ಅಧಿಕಾರಿಗಳಿಗೂ ತಮ್ಮ ‘ಲಾಭ’ಕ್ಕೆ ಬೇಕಾದ ತಂತ್ರಜ್ಞಾನ ಬೇಕೇ ಹೊರತು ಜನೋಪಯೋಗಿ ತಂತ್ರಜ್ಞಾನವಲ್ಲ. ಸರ್ಕಾರದ ವ್ಯವಹಾರವಿರುವುದು ಅಧಿಕಾರಿಗಳ ಮಧ್ಯೆ ಮಾತ್ರ ಎಂಬಂತೆ ಈ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇನ್ನು ಆಡಳಿತದಲ್ಲಿ ಕನ್ನಡವನ್ನು ಖಾತರಿಪಡಿಸಬೇಕಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆಗಳು ಘೋಷಣಾತ್ಮಕ ಮಾತುಗಾರಿಕೆಯಲ್ಲಿ ಕಳೆದು ಹೋಗಿವೆ.

ಜನಪ್ರತಿನಿಧಿಗಳಂತೂ ವೆಬ್‌ಸೈಟ್ ಸರಿಪಡಿಸಿದರೆ ತಮಗೆ ಸಿಗುವ ವೋಟುಗಳ ಪ್ರಮಾಣ ಹೆಚ್ಚುವುದಿಲ್ಲ ಎಂದು ಆರಾಮವಾಗಿದ್ದಾರೆ. ಈ ಎಲ್ಲಾ ನಿರ್ಲಕ್ಷ್ಯಗಳ ಪರಿಣಾಮ ಕನ್ನಡ ಭಾಷೆಯ ಮೇಲೆ ಮತ್ತು ಜನಸಾಮಾನ್ಯರ ಮೇಲೆ ಆಗುತ್ತಿದೆ. ಪಾರದರ್ಶಕ ಆಡಳಿತ, ಸಮರ್ಪಕ ಮಾಹಿತಿ ಒದಗಿಸಲು ಮೂಲವಾಗಬೇಕಿದ್ದ ಸರ್ಕಾರಿ ಜಾಲತಾಣಗಳು ಈಗ ಸರ್ಕಾರಿ ಕಚೇರಿಗಳಂತೆಯೇ ಜನರಿಗೆ ಪ್ರವೇಶವಿಲ್ಲದ ನಿಗೂಢ ತಾಣಗಳಾಗಿವೆ.

ಈ ಪರಿಸ್ಥಿತಿಯ ಸುಧಾರಣೆಗೆ ಇರುವ ಏಕೈಕ ಮಾರ್ಗವೆಂದರೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಅಧಿಕಾರಿಗಳಿಗೆ ಚುರುಕು ಮುಟ್ಟಿಸುವುದು. ಜೊತೆಗೆ ಈ ವಿಷಯದಲ್ಲಿ ಉತ್ತರದಾಯಿತ್ವವನ್ನು ಖಾತರಿಪಡಿಸುವ ನೀತಿಯೊಂದನ್ನು ತುರ್ತಾಗಿ ರೂಪಿಸಬೇಕಾಗಿದೆ. ಆಗ ಮಾತ್ರ ವೆಬ್‌ಸೈಟ್‌ಗಳು ನಿಜ ಅರ್ಥದಲ್ಲಿ ಜನಸ್ನೇಹಿಯಾದಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.