ADVERTISEMENT

ಜೀವಪರ ನಿಲುವು ಇರಲಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಗಲ್ಲುಶಿಕ್ಷೆ ಇರಬೇಕೇ, ಬೇಡವೇ ಎನ್ನುವುದೊಂದು ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಭಾರತ ಈ ವಿಷಯದಲ್ಲಿ ಇತರ ರಾಷ್ಟ್ರಗಳೊಂದಿಗೆ ಸಹಮತ ತಾಳಿಲ್ಲ. ದೆಹಲಿಯಲ್ಲಿ  1993 ರ ಸೆಪ್ಟೆಂಬರ್‌ನಲ್ಲಿ ಬಾಂಬ್ ಸ್ಫೋಟಿಸಿ ಒಂಬತ್ತು ಜನರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನ್ ವಿಮೋಚನಾ ಪಡೆಯ ಉಗ್ರ ದೇವಿಂದರ್ ಪಾಲ್‌ಸಿಂಗ್ ಭುಲ್ಲರ್‌ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿರುವುದು, ಮರಣದಂಡನೆಗೆ ವಿದಾಯ ಹೇಳಬೇಕೆಂಬ ಚಳವಳಿಗೆ ಆದ ಹಿನ್ನಡೆ ಎನ್ನಬಹುದು. ದೆಹಲಿ ಬಾಂಬ್‌ಸ್ಫೋಟ ಘಟನೆ ನಡೆದದ್ದು 20 ವರ್ಷಗಳ ಹಿಂದೆ. ಸೆಷೆನ್ಸ್‌ಕೋರ್ಟ್ 2001ರಲ್ಲಿ  ಭುಲ್ಲರ್‌ಗೆ ಗಲ್ಲು ಶಿಕ್ಷೆ ನೀಡಿತು.

ಮಾರ್ಚ್ 2002ರಲ್ಲಿ ಸುಪ್ರೀಂಕೋರ್ಟ್ ಅದನ್ನು ಕಾಯಂಗೊಳಿಸಿತು. ಭುಲ್ಲರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿರಸ್ಕರಿಸಿದ್ದರು. ಆದರೆ ಆ ವೇಳೆಗಾಗಲೇ ಸುದೀರ್ಘ ಒಂಬತ್ತು ವರ್ಷಗಳು ಉರುಳಿಹೋಗಿದ್ದವು. ಕ್ಷಮಾದಾನ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಲು ಇಷ್ಟೊಂದು ವಿಳಂಬ ಏಕೆ ಎನ್ನುವುದಕ್ಕೆ ಸಕಾರಣಗಳಿಲ್ಲ. ಇದೂ ಒಂದು ರೀತಿಯ ಕ್ರೌರ್ಯ. ಅಸಮಂಜಸ. ಕ್ಷಮಾದಾನ ಅರ್ಜಿ ತೀರ್ಮಾನ ವಿಳಂಬವಾಗಿರುವುದರಿಂದ, ಅದು ಅರ್ಜಿದಾರನ ಮಾನಸಿಕ ಕ್ಷೋಭೆಗೆ ಕಾರಣವಾಗಿದೆ. ದಿನನಿತ್ಯ ಮರಣಭಯದಲ್ಲಿ ಅಪರಾಧಿ ಕಾಲಕಳೆದಿದ್ದಾನೆ. ವ್ಯಕ್ತಿಯ ಜೀವಿಸುವ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಈ ಮೂಲಕ ಆಗಿದೆ. ಈ ಕಾರಣದಿಂದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕೆಂಬ ವಾದವನ್ನು ಒಪ್ಪದ ಸುಪ್ರೀಂಕೋರ್ಟ್, ಟಾಡ ಮತ್ತು ಅದಕ್ಕೆ ಸರಿಸಮನಾದ ಅಪರಾಧ ಕಾಯ್ದೆಯಡಿ ಬಂಧಿತರಾದವರ ವಿಷಯದಲ್ಲಿ ಮರಣ ದಂಡನೆ ಶಿಕ್ಷೆ ಸಡಿಲಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ಅಮಾಯಕ ನಾಗರಿಕರನ್ನು ವಿನಾಕಾರಣ ಕೊಂದವರು, ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿಕೊಂಡವರ ವಿಷಯದಲ್ಲಿ ಯಾವುದೇ ಮುಲಾಜು ತೋರಿಸುವ ಪ್ರಸಂಗವೇ ಇಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಯತ್ನವನ್ನು  ಸುಪ್ರೀಂಕೋರ್ಟ್ ತೆಗೆದುಕೊಂಡಂತಿದೆ. ಸುಪ್ರೀಂಕೋರ್ಟ್‌ನ ಈ ದೂರಗಾಮಿ ತೀರ್ಪು ವೀರಪ್ಪನ್ ಸಹಚರರು ಹಾಗೂ ರಾಜೀವ್‌ಗಾಂಧಿ ಹಂತಕರೂ ಸೇರಿದಂತೆ 17 ಅಪರಾಧಿಗಳ ಅರ್ಜಿಗಳ ಮೇಲೂ ಪರಿಣಾಮ ಬೀರಲಿದೆ. ರಾಷ್ಟ್ರದಾದ್ಯಂತ ಮರಣದಂಡನೆ ಶಿಕ್ಷೆಗೊಳಗಾಗಿರುವ 450 ಮಂದಿ ಸೆರೆಮನೆಗಳಲ್ಲಿ ದಿನಗಣನೆ ಮಾಡುತ್ತಿದ್ದಾರೆ.

ಗೃಹಸಂಬಂಧಿ ಕೃತ್ಯಗಳಲ್ಲಿ ಕೊಲೆಗಾರರಾದವರೂ ಈ ಪಟ್ಟಿಯಲ್ಲಿದ್ದಾರೆ. ಕ್ಷಮಾದಾನದಂತಹ ಅರ್ಜಿ ಬಂದಾಗ ಅದನ್ನೂ ಮಾನವೀಯ ನೆಲೆಗಳಲ್ಲಿ ಪರಿಶೀಲಿಸುವ ಅಗತ್ಯವಿದೆ. ಜೀವಿಸುವ ಸ್ವಾತಂತ್ರ್ಯ ಹರಣವಾಗದಂತೆ ಸಮರ್ಥನೀಯ ನ್ಯಾಯಕ್ಕಾಗಿ ಅಪರಾಧಿಗಳು ಎದುರು ನೋಡುವುದೂ ಕೂಡ ವಾಸ್ತವ. ವಿಶ್ವದ 150 ರಾಷ್ಟ್ರಗಳು ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿವೆ. ಭಾರತವೂ ಹಿಂದೇಟು ಹಾಕುವುದು ಏಕೆ? ಜೀವಪರ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ನಾವೂ ಮಾನವೀಯತೆಯತ್ತ ಏಕೆ ಹೆಜ್ಜೆಹಾಕಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.