ADVERTISEMENT

ತಪ್ಪಿದ ಮೇಲ್ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಮೇಲ್ವಿಚಾರಣೆಗಾಗಿ ನಿಯೋಜಿತರಾಗಿದ್ದ ಸಾಮಾಜಿಕ ಲೆಕ್ಕಪರಿಶೋಧಕರೆಂಬ (ಸೋಷಿಯಲ್ ಆಡಿಟರ್) ಕಾವಲು ಸಿಬ್ಬಂದಿಗೆ ಸರ್ಕಾರ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
 
ಈ ಸಿಬ್ಬಂದಿ ಜೀವನ ನಿರ್ವಹಣೆಗಾಗಿ ಈಗ ಬೇರೆ ಕೆಲಸಗಳನ್ನು ಮಾಡುತ್ತಿರುವುದರಿಂದ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಉಸ್ತುವಾರಿ ಕೆಲಸಕ್ಕೆ ಹಿನ್ನಡೆಯಾಗಿದೆ.
 
ಕಾಮಗಾರಿಗಳ ಅನುಷ್ಠಾನದಲ್ಲಿನ ಅವ್ಯವಹಾರಗಳು, ಹಣದ ದುರ್ಬಳಕೆ ಮತ್ತು ಕಳಪೆ ಕಾಮಗಾರಿಯನ್ನು ನಿಯಂತ್ರಿಸಲು ಈ ಸಿಬ್ಬಂದಿಯನ್ನು 2009ರಲ್ಲಿ ನೇಮಕ ಮಾಡಿಕೊಳ್ಳಲಾಯಿತು.

ಜಿಲ್ಲಾ ಪಂಚಾಯ್ತಿಗಳ ವ್ಯಾಪ್ತಿಗೆ ಬಾರದ ಸ್ಥಳೀಯ ಪರಿಸರ ಮತ್ತಿತರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಕಾರ್ಯಕರ್ತರನ್ನು ಉಸ್ತುವಾರಿ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಸಿಬ್ಬಂದಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಕಾರ್ಯ ನಿರ್ವಹಿಸಬೇಕು ಎಂಬುದು ಸರ್ಕಾರದ ಆಶಯ.
 
ಈ ಸಿಬ್ಬಂದಿ ಪ್ರಾಮಾಣಿಕರಾಗಿದ್ದುಕೊಂಡು ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದಾದರೆ ಅವರಿಗೆ ಕಾಲಕಾಲಕ್ಕೆ ವೇತನ ನೀಡಬೇಕು. ಆರು ತಿಂಗಳಿಂದ ವೇತನ ಪಾವತಿ ಆಗದಿರುವುದಕ್ಕೆ ಏನು ಕಾರಣ ಎನ್ನುವುದು ಗೊತ್ತಾಗಿಲ್ಲ.

ಅಗತ್ಯ ವಸ್ತುಗಳೆಲ್ಲ ದುಬಾರಿ ಆಗಿರುವ ಈ ಕಾಲದಲ್ಲಿ  ಆರು ತಿಂಗಳು ವೇತನವಿಲ್ಲದೆ ಕೆಲಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಮೇಲ್ವಿಚಾರಣೆ ತಪ್ಪಿಹೋದರೆ ಒಟ್ಟಾರೆ ಯೋಜನೆಯೇ ನೆಲಕಚ್ಚುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೇಂದ್ರದ ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಬಡತನ ನಿರ್ಮೂಲನಾ ಕ್ರಮ. ಗ್ರಾಮೀಣ ಬಡವರಿಗೆ ಅವರು ವಾಸಮಾಡುವ ಸ್ಥಳದಲ್ಲೇ  ವರ್ಷದಲ್ಲಿ ಇಂತಿಷ್ಟು ದಿನ ಉದ್ಯೋಗ ಕೊಡುವುದು ಈ ಯೋಜನೆಯ ಉದ್ದೇಶ.
 
ಯಂತ್ರಗಳನ್ನು ಬಳಸದೆ ಮಾನವ ಶಕ್ತಿ ಬಳಸಿಕೊಂಡು ಹಳ್ಳಿಗಾಡಿನ ಜನರಿಗೆ ಅಗತ್ಯವಾದ ಮೂಲ ಸೌಲಭ್ಯ ಒದಗಿಸುವುದು ಅದರ ಆಶಯ. ಬರಪೀಡಿತ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶಗಳ ಜನರಿಗೆ ಈ ಯೋಜನೆ ವರದಾನವಾಗಿದೆ.

ದುರದೃಷ್ಟದ ಸಂಗತಿ ಎಂದರೆ ಚುನಾಯಿತ ಪ್ರತಿನಿಧಿಗಳು ಹಾಗೂ ಪಂಚಾಯತ್‌ರಾಜ್ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳೆಲ್ಲ ಒಂದಾಗಿ ಕಾಮಗಾರಿಗಳನ್ನು ನಿರ್ವಹಿಸದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದ ನೂರಾರು ನಿದರ್ಶನಗಳಿವೆ.
 
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉದ್ಯೋಗ ಖಾತರಿ ಯೋಜನೆಗೆ ನೀಡಿದ ಅನುದಾನ ದುರುಪಯೋಗವಾಗಿದೆ. ಈ ಕಾಮಗಾರಿಗಳಲ್ಲಿ ಅವ್ಯವಹಾರ ಆಗದಂತೆ ತಡೆಯುವ ವ್ಯವಸ್ಥೆ ಇದ್ದರೂ ಅದು ಯಶಸ್ವಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಉಸ್ತುವಾರಿ ಸಿಬ್ಬಂದಿಯ ವೇತನವನ್ನು ಬಾಕಿ ಸಮೇತ ಪಾವತಿ ಮಾಡಿ ಮತ್ತೆ ಅವರ ಸೇವೆಯನ್ನು ಬಳಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.