ADVERTISEMENT

ತೊಗರಿಗೆ ಬೇಕು ನ್ಯಾಯ ಬೆಲೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ತೊಗರಿಯ ಬೆಲೆ ಕುಸಿದಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಲ್ಬರ್ಗ, ರಾಯಚೂರು, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳ ರೈತರು, ತಾವು ಬೆಳೆದ ಫಸಲಿಗೆ ನ್ಯಾಯ­ಯುತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣ­ದಲ್ಲಿ ತೊಗರಿ ಆವಕವಾಗಿ ಬೆಲೆ ಕುಸಿತ ಉಂಟಾಗಿದೆ. ಬೆಳೆಗಾರರಿಗೆ ಉತ್ಪಾದನಾ ವೆಚ್ಚವೂ ಭರಿಸಲಾಗದ ಸಂಕಷ್ಟದ ಪರಿಸ್ಥಿತಿ ಉದ್ಭವಿಸಿದೆ.

ಎರಡು ವಾರಗಳ ಅವಧಿಯಲ್ಲಿ ಬೆಲೆ ಪರಿಸ್ಥಿತಿಯು ಗಮನಾರ್ಹ ಕುಸಿತ ಕಂಡರೂ ರಾಜ್ಯ ಸರ್ಕಾರವು ರೈತರ ಬವಣೆ ಬಗ್ಗೆ ಕಂಡೂ ಕಾಣದಂತೆ ಇರುವುದು  ಆಡಳಿತ ಯಂತ್ರ ಮತ್ತು ಜನಪ್ರತಿನಿಧಿ­ಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ತೊಗರಿ ಬೆಲೆಯು, ಬೆಂಬಲ ಬೆಲೆ ಮಟ್ಟಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದ್ದರೂ  ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡದಿ­ರುವುದು  ಅನ್ನದಾತನ ಬಗೆಗಿನ ನಿಷ್ಕಾಳಜಿಗೆ ಕನ್ನಡಿ ಹಿಡಿಯುತ್ತದೆ.

ಉತ್ಪಾದನಾ ವೆಚ್ಚ ಏರಿಕೆ ಮತ್ತು ಗರಿಷ್ಠ ಮಟ್ಟದ ಹಣ­ದುಬ್ಬ­ರದ ಹಿನ್ನೆಲೆಯಲ್ಲಿ, ತೊಗರಿ ಖರೀದಿ ದರ ಇಳಿಮುಖ ಆಗುತ್ತಿ­­ರುವುದರಿಂದ ರೈತರು ಸಹಜವಾಗಿಯೇ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವು ಸಕಾಲದಲ್ಲಿ ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಖರೀದಿ ಆರಂಭಿಸ­ದಿರುವುದೇ ಈ ಭಾಗದ ರೈತರು ಬವಣೆ ಪಡಲು ಮುಖ್ಯ ಕಾರಣವಾಗಿದೆ.

ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಸ್ಥಾಪಿಸಿರುವ ತೊಗರಿ ಅಭಿವೃದ್ಧಿ ಮಂಡಳಿಯೂ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರ ರಕ್ಷಣೆಗೆ ಸ್ಪಂದಿಸಿಲ್ಲ.  ಹೆಸರು, ಉದ್ದು ಬೆಲೆಗಿಂತಲೂ ತೊಗರಿಗೆ ಕಡಿಮೆ ಬೆಂಬಲ ಬೆಲೆ ಪ್ರಕಟಿಸಿರುವ ಕೇಂದ್ರ ಸರ್ಕಾರವೂ ತನ್ನ  ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಆಮದು ಸುಂಕ ಹೆಚ್ಚಳ, ಬೆಂಬಲ ಬೆಲೆ ಏರಿಕೆ, ಆವರ್ತ ನಿಧಿ ಬಿಡುಗಡೆ ಮಾಡುವ ಮೂಲಕ ಬೆಲೆ ಸ್ಥಿರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕಾಗಿವೆ.

ADVERTISEMENT

ಶಾಲಾ ಮಕ್ಕಳ ಬಿಸಿಯೂಟಕ್ಕೆ ಮಧ್ಯವರ್ತಿಗಳ ಮೂಲಕ ದುಬಾರಿ ದರಕ್ಕೆ ತೊಗರಿ  ಬೇಳೆ ಖರೀದಿಸುವ ಸರ್ಕಾರವು, ರೈತರಿಂದಲೇ ನೇರವಾಗಿ  ತೊಗರಿ ಖರೀದಿಸಿ ಬೇಳೆ ಮಾಡಿಸಿ ಬಿಸಿಯೂಟ ಯೋಜನೆಗೆ ಪೂರೈಸುವ ಮೂಲಕವೂ ರೈತರ ನೆರವಿಗೆ ಬರಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಪಾರಿಗಳಿಗೆ  ಅನುಕೂಲ­ವಾಗು­ವಂತಹ ಆಮದು ನೀತಿ ಕೈಬಿಟ್ಟು ಬೆಳೆಗಾರರ ಹಿತರಕ್ಷಣೆ ಕಾಯುವಂತಹ  ‘ರೈತ ಸ್ನೇಹಿ’ ಧೋರಣೆಯನ್ನೇ ಅಳವಡಿಸಿಕೊಳ್ಳಬೇಕಾಗಿದೆ.

ಬೆಲೆ ಅಸ್ಥಿರತೆಗೆ ಕಾರಣವಾಗಿರುವ ನಿರ್ಧಾರ­ಗಳನ್ನು ಕೈಬಿಟ್ಟು, ತೊಗರಿ ಮಂಡಳಿ­ಯನ್ನು ಆರ್ಥಿಕವಾಗಿ ಸಶಕ್ತಗೊಳಿಸಿ ರೈತರ ಹಿತ ಕಾಪಾಡಬೇಕಾಗಿರುವುದು ತನ್ನ ಪ್ರಾಥಮಿಕ ಕರ್ತವ್ಯ ಎನ್ನುವುದನ್ನು ರಾಜ್ಯ ಸರ್ಕಾರ ಮರೆಯಬಾರದು. ರೈತರ ಪ್ರತಿಭಟನೆ ತೀವ್ರಗೊಳ್ಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣಕ್ಕೆ ಕಾರ್ಯೋನ್ಮುಖ­ವಾಗಬೇಕಾ­ಗಿದೆ.  ತೊಗರಿ ಬೆಳೆಗಾರರ ಬವಣೆ ನಿವಾರಿಸಲು ಶಾಶ್ವತ ವ್ಯವಸ್ಥೆಯೇ ಆಗಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯೋ­ನ್ಮುಖ­ವಾದರೆ ಖಂಡಿತವಾಗಿಯೂ ರೈತರ ಸಂಕಷ್ಟವು  ಶಾಶ್ವತವಾಗಿಯೇ ದೂರ­ವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.