ADVERTISEMENT

ನಿರೀಕ್ಷಿತ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 19:30 IST
Last Updated 6 ಮಾರ್ಚ್ 2011, 19:30 IST

ಹಲವು ಭ್ರಷ್ಟಾಚಾರದ ಹಗರಣಗಳಿಂದ ಸುಪ್ರೀಂ ಕೋರ್ಟಿನಿಂದ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ. ತಮಿಳುನಾಡಿನ ವಿಧಾನ ಸಭೆ ಚುನಾವಣೆಯಲ್ಲಿ ಡಿಎಂಕೆ ಜೊತೆಗೆ ಸ್ಥಾನ ಹೊಂದಾಣಿಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ಕೇಂದ್ರದಲ್ಲಿನ ಮೈತ್ರಿ ಕೂಟದ ಸರ್ಕಾರದ ಅಸ್ತಿತ್ವಕ್ಕೇ ಅಪಾಯ ತಂದೊಡ್ಡಿರುವ ಆತಂಕ ಎದುರಾಗಿದೆ. ಡಿಎಂಕೆಯು ತನ್ನ ಆರು ಮಂದಿ ಸಚಿವರನ್ನು ಸಂಪುಟದಿಂದ ಹೊರಬರುವಂತೆ ತೆಗೆದುಕೊಂಡಿರುವ ನಿರ್ಧಾರ ಸರ್ಕಾರದ ಭವಿಷ್ಯದ ಬಗೆಗೆ ತೂಗುಗತ್ತಿ ನೇತಾಡುವಂತೆ ಮಾಡಿದೆ.

ಆದರೆ ಡಿಎಂಕೆಯು ತನ್ನ ಬೆಂಬಲವನ್ನು ಪೂರ್ಣ ಹಿಂತೆಗೆದುಕೊಳ್ಳದೆ ವಿಷಯಾಧಾರಿತ ಬೆಂಬಲ ಘೋಷಿಸಿರುವುದರಿಂದ ಸದ್ಯಕ್ಕೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಭಯವಿಲ್ಲ. ಸರ್ಕಾರ ಬೆಂಬಲ ಕಳೆ ದುಕೊಂಡು ಬೀಳುವ ಸಮಯ ಬಂದರೆ, ಅದರ ನೆರವಿಗೆ ಬರಲು ಈಗಾಗಲೇ ಹಲವು ಪಕ್ಷಗಳು ತುದಿಗಾಲಲ್ಲಿ ನಿಂತಿವೆ.

ಈ ಹಿಂದೆ ಹೊರಗಿನಿಂದ ಬೆಂಬಲ ಘೋಷಿಸಿದ್ದು ನಂತರ ಆ ಬೆಂಬಲವನ್ನು ವಾಪಸ್ ಪಡೆದಿರುವ 22 ಸದಸ್ಯ ಬಲದ ಸಮಾಜವಾದಿ ಪಕ್ಷ ಸರ್ಕಾರ ಸೇರುವ ಇಂಗಿತವನ್ನು ವ್ಯಕ್ತಪಡಿಸಿದೆ. ಮತ್ತು 4 ಸದಸ್ಯರನ್ನು ಹೊಂದಿರುವ ಆರ್‌ಜೆಡಿ ಮತ್ತು 21 ಸದಸ್ಯ ಬಲದ ಬಿಎಸ್‌ಪಿಯೂ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರಕ್ಕೆ ಆಸರೆಯಾಗಿ ನಿಲ್ಲುವ ಸಂಭವವೂ ಇದೆ. ಈ ಎಲ್ಲದರ ಜೊತೆಗೆ ಈಗ ಜನರ ಮುಂದೆ ಹೋಗಲು ಯಾವ ಪಕ್ಷವೂ ಸಿದ್ಧವಾಗಿಲ್ಲದ ಕಾರಣ ಸರ್ಕಾರ ಕುಸಿದು ಮಧ್ಯಂತರ ಚುನಾವಣೆಯ ಸಾಧ್ಯತೆ ತೀರಾ ಕಮ್ಮಿ. ಪರಿಸ್ಥಿತಿಯ ಈ ದೌರ್ಬಲ್ಯ ಕಾಂಗ್ರೆಸ್ಸಿಗೆ ಅನುಕೂಲಕರವಾಗಿರುವುದು ವಿಶೇಷ.

ತಮಿಳುನಾಡಿನ ವಿಧಾನ ಸಭೆ ಚುನಾವಣೆಯಲ್ಲಿನ ಸೀಟು ಹಂಚಿಕೆ ವಿವಾದ ಮೇಲ್ನೋಟಕ್ಕೆ ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಕಾರಣವಾದರೂ, 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ರಾಜಾ ರಾಜೀನಾಮೆ- ಬಂಧನ, ಮುಖ್ಯಮಂತ್ರಿ ಕರುಣಾನಿಧಿ ಕುಟುಂಬದ ಟಿವಿ ಚಾನೆಲ್ ಮೇಲಿನ ಸಿಬಿಐ ದಾಳಿ, ಸಂಸದೆ ಕನಿಮೋಳಿಯ ವಿಚಾರಣೆಯ ಗುಸುಗುಸು, ಈ ಎಲ್ಲ ಪ್ರಕರಣಗಳು ಕಾಂಗ್ರೆಸ್ ಮತ್ತು ಡಿಎಂಕೆ ನಡುವಣ ಮೈತ್ರಿಗೆ ಧಕ್ಕೆ ತರುವ ಎಲ್ಲ ಸಾಧ್ಯತೆಗಳು ಬೂದಿ ಮುಚ್ಚಿದ ಕೆಂಡದಂತಿರುವುದು ರಹಸ್ಯವಾಗಿ ಉಳಿದಿಲ್ಲ. ಇದೇನೇ ಇದ್ದರೂ, ಸೀಟು ಹಂಚಿಕೆಯಲ್ಲಿನ ಕಾಂಗ್ರೆಸ್ಸಿನ ಹಟಮಾರಿತನವೇ ಈ ಎಲ್ಲ ಅವಾಂತರಗಳಿಗೆ ಕಾರಣ ಎನ್ನುವುದನ್ನು ಒಪ್ಪಲೇ ಬೇಕಿದೆ.

ತಮಿಳುನಾಡಿನಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ 2006ರ ಚುನಾವಣೆಯಲ್ಲಿ 48 ಸ್ಥಾನಗಳಿಗೆ ತೃಪ್ತಿಪಟ್ಟಿದ್ದು, ಈ ಬಾರಿ 60 ಸ್ಥಾನಗಳಿಗೂ ಒಪ್ಪದೆ 63ಕ್ಕೆ ಜೋತುಬಿದ್ದಿರುವುದು ಆ ಪಕ್ಷದ ಅಧಿಕಾರದ ದುರಾಸೆಯನ್ನು ತೋರಿಸುತ್ತದೆ. ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿ ಮಿತ್ರಪಕ್ಷಗಳ ಬೆಂಬಲದಿಂದ ಸರ್ಕಾರ ನಡೆಸುತ್ತಿದ್ದರೂ ಕಾಂಗ್ರೆಸ್ ಮೈತ್ರಿ ಸಂಸ್ಕೃತಿಯನ್ನು ಇನ್ನೂ ಮೈಗೂಡಿಸಿಕೊಳ್ಳದಿರುವುದು ವಿಪರ್ಯಾಸ. ಅದು ತನ್ನ ದೊಡ್ಡಣ್ಣನ ನಡೆಯನ್ನು ಬದಲಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯವನ್ನು ಬರಮಾಡಿಕೊಳ್ಳುವ ಸಂಭವವೇ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.