ADVERTISEMENT

ನುಡಿಹಬ್ಬದ ಪರಂಪರೆಗೆ ಚ್ಯುತಿ ತರುವ ಯತ್ನ ಸಲ್ಲದು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2016, 19:30 IST
Last Updated 13 ಮಾರ್ಚ್ 2016, 19:30 IST
ನುಡಿಹಬ್ಬದ ಪರಂಪರೆಗೆ ಚ್ಯುತಿ ತರುವ ಯತ್ನ ಸಲ್ಲದು
ನುಡಿಹಬ್ಬದ ಪರಂಪರೆಗೆ ಚ್ಯುತಿ ತರುವ ಯತ್ನ ಸಲ್ಲದು   

ವಿಶ್ವವಿದ್ಯಾಲಯದಲ್ಲಿ ನಡೆದು ಬಂದ  ಪರಂಪರೆಗೆ ರಾಜ್ಯಪಾಲರ ಕಾರ್ಯಕ್ರಮವೂ ಒಗ್ಗಿಕೊಳ್ಳಬೇಕಾದುದು ಅಗತ್ಯ. ಹಂಪಿ ನುಡಿಹಬ್ಬದ ಭಾಷಣವನ್ನು ಐದು ನಿಮಿಷಕ್ಕೆ ಮೊಟಕುಗೊಳಿಸಿದ ಕ್ರಮ ವಿದ್ವಾಂಸರಿಗೆ ಮಾಡಿದ ಅಪಮಾನ.

ಹಂಪಿ ಕನ್ನಡ ವಿಶ್ವವಿದ್ಯಾಲಯದ 24ನೇ ನುಡಿಹಬ್ಬ (ಘಟಿಕೋತ್ಸವ) ಸಮಾರಂಭ ಕೇವಲ 30 ನಿಮಿಷಗಳಲ್ಲಿ ಮುಕ್ತಾಯವಾಗಿದ್ದು ಸಹಜವಾಗಿಯೇ ಶೈಕ್ಷಣಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಪಾಲ್ಗೊಂಡಿದ್ದ ಈ ಸಮಾರಂಭವನ್ನು ಕೇವಲ ಅರ್ಧಗಂಟೆಯೊಳಗೆ ತರಾತುರಿಯಲ್ಲಿ ಯಾಂತ್ರಿಕವಾಗಿ ಮುಗಿಸುವ ಅಗತ್ಯ ಏನಿತ್ತು ಎಂಬುದು ಪ್ರಶ್ನೆ. ಈ ಸಮಾರಂಭ ಆಯೋಜಿಸಲು ವಿಶ್ವವಿದ್ಯಾಲಯ ಸಾಕಷ್ಟು ಪೂರ್ವಸಿದ್ಧತೆ ನಡೆಸಿರುತ್ತದೆ. 

ವರ್ಷಾನುಗಟ್ಟಲೆ ಅಧ್ಯಯನದಲ್ಲಿ ತೊಡಗಿ ಪರಿಶ್ರಮದಿಂದ ಗಳಿಸಿಕೊಂಡ ಪದವಿಯನ್ನು ಘಟಿಕೋತ್ಸವದಲ್ಲಿ ಗಣ್ಯರಿಂದ ಪಡೆದುಕೊಳ್ಳುವ ಸಿಹಿ ಕ್ಷಣಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳಿಗೆ ಜೀವಮಾನವಿಡೀ ನೆನಪಲ್ಲಿ ಇಟ್ಟುಕೊಳ್ಳುವಂತಹವಾಗಿರುತ್ತವೆ. ಆದರೆ ಈ ಬಾರಿಯ ಸಮಾರಂಭ ಅಂತಹ ಸಿಹಿ ನೆನಪಾಗಿ ಉಳಿದುಕೊಳ್ಳುವಂತಾಗದಿರುವುದು ವಿಷಾದನೀಯ. ಯಾವುದೇ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ, ಘಟಿಕೋತ್ಸವ ಭಾಷಣವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಸಮಕಾಲೀನ ಸಂಗತಿಗಳಿಗೆ ಸ್ಪಂದಿಸುತ್ತಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಹ ಘಟಿಕೋತ್ಸವ ಭಾಷಣವನ್ನು ಕೇಳಿಸಿಕೊಳ್ಳಲು ಎಲ್ಲರೂ ಕಾತರರಾಗಿರುತ್ತಾರೆ.

ವಿದ್ಯಾರ್ಥಿಗಳಿಗಂತೂ ತಮ್ಮ ಜೀವಮಾನವಿಡೀ ನೆನಪಿಟ್ಟುಕೊಳ್ಳುವಂತಹ ಭಾಷಣವಾಗಿರುತ್ತದೆ ಅದು. ಈ ಮಟ್ಟಿಗಿನ ಪ್ರತಿಷ್ಠೆ ಇರುವ ಈ ಭಾಷಣವನ್ನು ಕೇವಲ ಐದು ನಿಮಿಷಕ್ಕೆ ಮೊಟಕುಗೊಳಿಸಬೇಕೆಂದು ವೇದಿಕೆಯಲ್ಲಿ ಭಾಷಣಕಾರರಿಗೆ ಸೂಚನೆ ನೀಡಿದ ಕ್ರಮ ಅಸಮರ್ಥನೀಯ. ಇಂತಹ ಒಂದು ತೀರ್ಮಾನವನ್ನು ಕೈಗೊಳ್ಳಲು ಪ್ರೇರಕವಾದ ಸಂಗತಿಯಾದರೂ ಏನು ಎಂಬುದು ಸ್ಪಷ್ಟವಾಗಬೇಕು. ರಾಜ್ಯಪಾಲರು ಪಾಲ್ಗೊಳ್ಳುವಂತಹ ಕಾರ್ಯಕ್ರಮದ ಶಿಷ್ಟಾಚಾರದ ನಿಯಮಾವಳಿಗಳನ್ನು ರಾಜಭವನದ ಕಚೇರಿ ರೂಪಿಸುತ್ತದೆ. ಆದರೆ ಯಾವುದಕ್ಕೆ ಏನು ಆದ್ಯತೆ ನೀಡಬೇಕು ಎಂಬುದರ ಅರಿವು ಈ ಶಿಷ್ಟಾಚಾರದಡಿ ಕಾರ್ಯಕ್ರಮ ರೂಪಿಸುವವರಿಗೆ ಇರಬೇಕಾದುದು ಮುಖ್ಯ. ವಿಶ್ವವಿದ್ಯಾಲಯದಲ್ಲಿ ನಡೆದು ಬಂದ ಪರಂಪರೆಗೆ ರಾಜ್ಯಪಾಲರ ಕಾರ್ಯಕ್ರಮವೂ ಒಗ್ಗಿಕೊಳ್ಳಬೇಕಾದುದು ಅಗತ್ಯ.

ಅರ್ಧ ಗಂಟೆ ಅಥವಾ ಒಂದು ಗಂಟೆ ಕಾಲದ ಘಟಿಕೋತ್ಸವ ಭಾಷಣ ಕೇಳಿಸಿಕೊಳ್ಳುವ ವ್ಯವಧಾನವೂ ಕುಲಾಧಿಪತಿಗೆ ಇರುವುದಿಲ್ಲ ಎಂಬಂತಹ ಸಂದೇಶ ಈ ವಿವಾದದಿಂದ ಸೃಷ್ಟಿಯಾಗಿರುವುದು ಅಹಿತಕರ ಬೆಳವಣಿಗೆ.  ಜೊತೆಗೆ ವಿಶ್ವವಿದ್ಯಾಲಯದ 24 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾರಿಗೂ ‘ನಾಡೋಜ’ ಗೌರವ ಪ್ರದಾನ ಮಾಡಲಿಲ್ಲ. ಇದಕ್ಕೆ ಕಾರಣ ಸಮಾರಂಭ ನಡೆಯುವ ದಿನದವರೆಗೂ ರಾಜ್ಯಪಾಲರ ಕಚೇರಿಯಿಂದ ಈ ಬಗ್ಗೆ ಬರದ ಮಾಹಿತಿ. ವಿಶ್ವವಿದ್ಯಾಲಯಗಳಲ್ಲಿ ನಡೆದುಕೊಂಡು ಬಂದ ಪರಂಪರೆಗೆ ಚ್ಯುತಿ ತರುವಂತಹ ಇಂತಹ ವಿದ್ಯಮಾನಗಳು ಒಳ್ಳೆಯ ಬೆಳವಣಿಗೆಯಲ್ಲ. ಈ ಬಾರಿಯ ನುಡಿಹಬ್ಬದಲ್ಲಿ ಪ್ರಧಾನ ಭಾಷಣ ಮಾಡಬೇಕಿದ್ದವರು  ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಹಳ ಕಾಲ ಕೆಲಸ ಮಾಡಿ ಈಗ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು.

ಘಟಿಕೋತ್ಸವ ಭಾಷಣ ಮಾಡುವುದಕ್ಕಾಗಿಯೇ ದೂರದ ದೆಹಲಿಯಿಂದ ಹಂಪಿಗೆ ಆಗಮಿಸಿದ್ದರು ಅವರು. ಆದರೆ  ಅವರ ಭಾಷಣವನ್ನು ಐದು ನಿಮಿಷಕ್ಕೆ ಮೊಟಕುಗೊಳಿಸಿದ ಕ್ರಮ ವಿದ್ವಾಂಸರಿಗೆ ಮಾಡಿದ ಅಪಮಾನ ಎಂಬುದರಲ್ಲಿ ಎರಡು ಮಾತಿಲ್ಲ.  ಹೀಗಾಗಿ ‘ಈ ರೀತಿ ಮಾಡುವುದಾದಲ್ಲಿ ಘಟಿಕೋತ್ಸವ ಭಾಷಣ ರದ್ದುಪಡಿಸುವುದು ಉತ್ತಮ. ಇಲ್ಲವಾದಲ್ಲಿ ಕಾಲಾವಕಾಶ ವಿಸ್ತರಿಸಿ’ ಎಂದು  ವೇದಿಕೆ ಮೇಲೆಯೇ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ತೋರ್ಪಡಿಸಿದ ಅಸಮಾಧಾನ ಸರಿಯಾದದ್ದೇ. ಭಾಷಣ ಸಿದ್ಧಪಡಿಸಲು ಎರಡು ತಿಂಗಳು ತೆಗೆದುಕೊಂಡಿದ್ದುದಾಗಿಯೂ ಅವರು ಹೇಳಿದ್ದಾರೆ. ಏಕೆಂದರೆ ಅಷ್ಟು ಜವಾಬ್ದಾರಿ ಘಟಿಕೋತ್ಸವದ ಭಾಷಣಕ್ಕೆ ಇರುತ್ತದೆ. ಆದರೆ ಅದನ್ನು ಅರ್ಥಮಾಡಿಕೊಳ್ಳದೆ ಕಾರ್ಯಕ್ರಮದ ಗಾಂಭೀರ್ಯ, ಘನತೆಗೆ ಚ್ಯುತಿ ಬರುವಂತೆ ಭಾಷಣ ಮೊಟಕುಗೊಳಿಸಿದ್ದು  ಅಕ್ಷಮ್ಯ.

‘ಮುಂದೆಯೂ ಹೀಗೆ ಮಾಡುವುದಾದಲ್ಲಿ ವಿದ್ವಾಂಸರ ಬದಲಾಗಿ ಸ್ಥಳೀಯ ರಾಜಕಾರಣಿಗಳನ್ನು ಕರೆಸಿಕೊಳ್ಳುವುದು ಸೂಕ್ತ’ ಎಂಬಂತಹ ಮಾತುಗಳನ್ನೂ ಬಿಳಿಮಲೆ ಅವರು ಆಡಿದ್ದಾರೆ. ಈಗಾಗಲೇ ಶಿಕ್ಷಣ ವಲಯವನ್ನೂ ರಾಜಕೀಯ ಆವರಿಸಿಕೊಳ್ಳುತ್ತಿರುವ ಅಹಿತಕರ ಬೆಳವಣಿಗೆಗಳ ಕಾಲದಲ್ಲಿ ನಾವಿದ್ದೇವೆ. ಇದನ್ನು ಧ್ವನಿಸುವಂತೆ ‘ಇಂದು ಎರಡೆರಡು ಬಾರಿ ಯೋಚಿಸಿ ಬರೆಯಬೇಕಾದ, ಮಾತಾಡಬೇಕಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸಂಶೋಧನೆಗಳು ಪೇಲವವಾಗುವುದರಲ್ಲಿ ಅನುಮಾನವಿಲ್ಲ’ ಎಂಬುದನ್ನೂ ತಮ್ಮ ಭಾಷಣದಲ್ಲಿ ಅವರು ಪ್ರಸ್ತಾಪಿಸಿದ್ದಾರೆ. ಸಮಕಾಲೀನ ಸಮಾಜ ಏನನ್ನು ನಿರೀಕ್ಷಿಸುತ್ತದೋ ಅದನ್ನೇ ಹೇಳಬೇಕಾದಂತಹ ಒತ್ತಡದ ಸೃಷ್ಟಿ ಸ್ವತಂತ್ರ ಚಿಂತನೆಗಳನ್ನು ಹತ್ತಿಕ್ಕುವಂತಹದ್ದು.  ಈ ಕುರಿತಾದ ಕಾಳಜಿಯೂ ಶೈಕ್ಷಣಿಕ ವಲಯಕ್ಕೆ ಗಂಭೀರವಾದದ್ದು ಎಂಬುದನ್ನು ನಾವು ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.