ADVERTISEMENT

ನೆಮ್ಮದಿ ಮೂಡಿಸಿದ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್), ವಾಣಿಜ್ಯಸಂಸ್ಥೆಗಳ (ಟೆಲಿ ಮಾರುಕಟ್ಟೆ) ಅನಪೇಕ್ಷಿತ ಕರೆ ನಿಷೇಧದ ಜತೆಗೆ, ದಿನವೊಂದಕ್ಕೆ ಒಂದು ಸಿಮ್‌ಕಾರ್ಡ್‌ನಿಂದ 100ಕ್ಕಿಂತ ಹೆಚ್ಚಿಗೆ `ಎಸ್‌ಎಂಎಸ್~ ಕಳಿಸದ ನಿಬಂಧನೆ ಜಾರಿಗೆ ತಂದಿರುವುದರಿಂದ ಲಕ್ಷಾಂತರ ಮೊಬೈಲ್ ಬಳಕೆದಾರರ ತಲೆನೋವಿಗೆ ಪರಿಹಾರ ಸಿಕ್ಕಿದೆ.

ಮೊಬೈಲ್ ಗ್ರಾಹಕರ ದೂರುಗಳ ಹಿನ್ನೆಲೆಯಲ್ಲಿ, ಹಲವಾರು ಗಡುವು ವಿಸ್ತರಣೆಗಳ ನಂತರ ಕೊನೆಗೂ ಈ ನೆಮ್ಮದಿ ದೊರೆತಿದೆ. ಸೊಳ್ಳೆ, ಜಿರಲೆ ನಿಯಂತ್ರಣದಿಂದ ಹಿಡಿದು ರಿಯಲ್ ಎಸ್ಟೇಟ್ ವಹಿವಾಟಿನವರೆಗೆ ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಿದ್ದ ಬೇಡವಾದ ಕರೆಗಳು ಮತ್ತು `ಸಂಕ್ಷಿಪ್ತ ಸಂದೇಶ~ಗಳು ಬಳಕೆದಾರರ ಖಾಸಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದ್ದವು.
 
ಈಗ ಟೆಲಿ ಮಾರುಕಟ್ಟೆ ಕಂಪೆನಿಗಳಿಂದ ಬರುವ ಇಂತಹ ವಾಣಿಜ್ಯ ಕರೆಗಳ ಮೇಲಿನ ನಿಷೇಧ ಸ್ಥಿರದೂರವಾಣಿಗಳಿಗೂ ಅನ್ವಯಿಸಲಿದೆ. ಇಂತಹ ಸಂಸ್ಥೆಗಳಿಗೆ `140~ ಸಂಖ್ಯೆ ಹಂಚಿಕೆ ಮಾಡಲಾಗಿದ್ದು, ಈ ಸಂಖ್ಯೆಯಿಂದ ಆರಂಭವಾಗುವ ಕರೆಗಳನ್ನು ಸುಲಭವಾಗಿ ಗುರುತಿಸಿ ಕರೆಗಳನ್ನು ಅವನ್ನು ತಿರಸ್ಕರಿಸುವ ಆಯ್ಕೆಯೂ ಇದೆ. ಅನಪೇಕ್ಷಿತ ಕರೆ, `ಎಸ್‌ಎಂಎಸ್~ಗಳ ನಿಷೇಧಕ್ಕಾಗಿ ಗ್ರಾಹಕರಿಗೆ ಹಲವು ಆಯ್ಕೆಗಳನ್ನೂ ಕಲ್ಪಿಸಲಾಗಿದೆ.

`ಸಂಪೂರ್ಣ ನಿಷೇಧ~ ಆಯ್ಕೆಯನ್ನು ಗ್ರಾಹಕ ಆಯ್ದುಕೊಂಡರೆ, ಯಾವುದೇ ವಾಣಿಜ್ಯ ಕರೆಗಳು, ಸಂದೇಶಗಳು ಬರುವುದಿಲ್ಲ. ಬ್ಯಾಂಕ್, ಹಣಕಾಸು, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ, ಗ್ರಾಹಕರ ಬಳಕೆ ಸರಕು, ವಾಹನ, ಐ.ಟಿ ಮತ್ತು ಪ್ರವಾಸೋದ್ಯಮದಲ್ಲಿ ಗ್ರಾಹಕರು ತಮಗೆ ಇಷ್ಟವಾದ ಸೇವೆಗಳಿಗೆ ಸಂಬಂಧಿಸಿದ ಕರೆ, ಎಸ್‌ಎಂಎಸ್ ಸ್ವೀಕರಿಸುವ ಮತ್ತು ಉಳಿದವುಗಳ ಮೇಲೆ ನಿಷೇಧ ಹೇರುವ ಆಯ್ಕೆ ಅವಕಾಶವೂ ಇದೆ.
 
ನೋಂದಾವಣೆ ಮಾಡಿಕೊಳ್ಳದ ಗ್ರಾಹಕರಿಗೂ ರಾತ್ರಿ 9ಗಂಟೆಯಿಂದ ಬೆಳಗಿನ 9ರವರೆಗೆ ಟೆಲಿ ಮಾರುಕಟ್ಟೆ ಕರೆಗಳ  ತಲೆನೋವು ಇರದು. ದೂರವಾಣಿ ಸೇವಾ ಸಂಸ್ಥೆ,ಬ್ಯಾಂಕಿಂಗ್ ವಹಿವಾಟು, ಇ-ಟಿಕೆಟ್ ಕಾಯ್ದಿರಿಸುವ ಏಜೆನ್ಸಿ, ಡಿಟಿಎಚ್ ಸೇವಾ ಪೂರೈಕೆದಾರರು ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಸಂವಹನ ತಾಣಗಳಿಗೆ ಮತ್ತುಹಬ್ಬಮತ್ತಿತರ ವಿಶೇಷ ಸಂದರ್ಭಗಳಲ್ಲಿಈ ಮಿತಿ ಅನ್ವಯವಾಗದು. 

ವಾಣಿಜ್ಯ ಉದ್ದೇಶದ `ಎಸ್‌ಎಂಎಸ್~ಗಳು ದುಬಾರಿಯಾಗುವಂತೆಯೂ ಮಾಡಿ, ಕಡಿವಾಣ ವಿಧಿಸಲೂ `ಟ್ರಾಯ್~ ಉದ್ದೇಶಿಸಿರುವುದರಿಂದ ಗ್ರಾಹಕರಿಗೆ `ಕಿರಿಕಿರಿ ಕರೆ~ಗಳು ಕಡಿಮೆಯಾಗಲಿವೆ.ರೈಲ್ವೆ, ವಿಮಾನ ಯಾನ ಸಂಸ್ಥೆ, ನೋಂದಾಯಿತ ಶಿಕ್ಷಣ ಸಂಸ್ಥೆಗಳಿಗೂ ಈ ನಿರ್ಬಂಧದಿಂದ ವಿನಾಯ್ತಿ ನೀಡಲಾಗಿದೆ.

ಉಳಿತಾಯ ಖಾತೆ, ಆನ್‌ಲೈನ್ ಹಣ ವರ್ಗಾವಣೆ, ಕ್ರೆಡಿಟ್ ಕಾರ್ಡ್ ವಹಿವಾಟಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳ `ಎಸ್‌ಎಂಎಸ್~ಗಳಿಗೂ ಈ ನಿಬಂಧನೆ ಅನ್ವಯಿಸದು.ಹೊಸದಾಗಿ ನೋಂದಾವಣೆ ಮಾಡಿಕೊಳ್ಳುವವರಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಣೆಯತ್ತ ತುರ್ತಾಗಿ ಗಮನ ಹರಿಸಬೇಕಾಗಿದೆ.

ನಿಬಂಧನೆ ಉಲ್ಲಂಘಿಸಿದ ಸಂಸ್ಥೆಗಳಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು.  ಅವುಗಳನ್ನುಕಪ್ಪುಪಟ್ಟಿಗೆ ಸೇರಿಸಿದರೆ ಮಾತ್ರ ಬಳಕೆದಾರರಿಗೆ ಈ ಸೌಲಭ್ಯದ  ಪೂರ್ಣ ಪ್ರಯೋಜನ ದೊರೆತೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.