ADVERTISEMENT

ನ್ಯಾಯದಾನ ವಿಳಂಬ: ನ್ಯಾಯಾಂಗ ವ್ಯವಸ್ಥೆಯ ದೋಷ ಸರಿ‍ಪಡಿಸಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST
ನ್ಯಾಯದಾನ ವಿಳಂಬ: ನ್ಯಾಯಾಂಗ ವ್ಯವಸ್ಥೆಯ ದೋಷ ಸರಿ‍ಪಡಿಸಿ
ನ್ಯಾಯದಾನ ವಿಳಂಬ: ನ್ಯಾಯಾಂಗ ವ್ಯವಸ್ಥೆಯ ದೋಷ ಸರಿ‍ಪಡಿಸಿ   

ಅಪರೂಪದ ಎರಡು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಸುಮಾರು 20 ವರ್ಷಗಳಿಂದ ತಾರ್ಕಿಕ ಅಂತ್ಯ ಕಾಣದ ಪ್ರಕರಣಕ್ಕೆ ದೊರೆತಿರುವ ಮತ್ತೊಂದು ತಿರುವು ಇದು. ಜೋಧ್‍ಪುರದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಎರಡು ರಾತ್ರಿಗಳನ್ನು ಈ ನಟ ಜೈಲಿನಲ್ಲಿ ಕಳೆದಿದ್ದಾರೆ.

ಆ ನಂತರ ಜೋಧ್‍ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಷಿ ಅವರು ಸಲ್ಮಾನ್‍ಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಜಾಮೀನು ನೀಡಿದ ನ್ಯಾಯಾಧೀಶರೂ ಸೇರಿದಂತೆ 134 ನ್ಯಾಯಾಧೀಶರ ವರ್ಗಾವಣೆ ಆದೇಶ, ತೀರ್ಪು ನೀಡುವ ದಿನದ ಹಿಂದಿನ ರಾತ್ರಿ ಪ್ರಕಟವಾಗಿತ್ತು ಎಂಬುದು ಕಾಕತಾಳೀಯ. ಅಷ್ಟೇ ಅಲ್ಲ, ಜೈಲು ಶಿಕ್ಷೆ ನೀಡಿದ ನ್ಯಾಯಾಧೀಶ ದೇವ್ ಕುಮಾರ ಖತ್ರಿ ಅವರೂ ವರ್ಗಾವಣೆಗೊಂಡವರ ಪಟ್ಟಿಯಲ್ಲಿದ್ದಾರೆ. ಈ ವರ್ಗಾವಣೆಯು ನಿಯಮಿತವಾಗಿ ಕೈಗೊಳ್ಳುವ ಆಡಳಿತಾತ್ಮಕ ಕ್ರಮ ಎಂದು ಹೇಳಲಾಗಿದೆ.

ಕಳ್ಳಬೇಟೆ ಪ್ರಕರಣ ನಡೆದು 20 ವರ್ಷಗಳ ಸುದೀರ್ಘ ಕಾಲದ ನಂತರ ಈ ಶಿಕ್ಷೆ ಪ್ರಕಟವಾಗಿರುವುದು ನಮ್ಮ ನ್ಯಾಯದಾನ ಪ್ರಕ್ರಿಯೆಯ ವಿಳಂಬ ಗತಿಗೆ ಸಾಕ್ಷಿ. ಅದರಲ್ಲೂ ಪ್ರತಿಷ್ಠಿತರು, ಅಧಿಕಾರ ಬಲ ಇರುವ ಶಕ್ತಿವಂತರಿಗೆ ಇರುವ ಅನುಕೂಲಗಳೇ ಬೇರೆ ಎಂಬ ಭಾವನೆಗೆ ಇದು ಪುಷ್ಟಿ ನೀಡುವಂತಹದ್ದು. ವಿಐಪಿ ಸಂಸ್ಕೃತಿ ಎಂಬುದು ನಮ್ಮ ನ್ಯಾಯದಾನ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುವುದು ಸರಿಯಲ್ಲ. ಐವರು ವ್ಯಕ್ತಿಗಳ ಮೇಲೆ ವಾಹನ ಹರಿಸಿ ಒಬ್ಬರ ಸಾವಿಗೆ ಕಾರಣವಾದಂತಹ ಅತ್ಯಂತ ಗಂಭೀರ ಆರೋಪದಲ್ಲಿ ಸಲ್ಮಾನ್ ಖಾನ್‍ರನ್ನು ಬಾಂಬೆ ಹೈಕೋರ್ಟ್ ಬಿಡುಗಡೆ ಮಾಡಿರುವುದನ್ನು ನೋಡಿದ್ದೇವೆ.

ADVERTISEMENT

ಈ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಮೇಲ್ಮನವಿಯನ್ನೇನೋ ಸಲ್ಲಿಸಿದೆ. ಇಂತಹ ಸನ್ನಿವೇಶದಲ್ಲಿ ನ್ಯಾಯಾಧೀಶ ದೇವ್ ಕುಮಾರ್ ಖತ್ರಿ ಅವರು ಸಲ್ಮಾನ್ ಖಾನ್‍ಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಸಲ್ಮಾನ್ ವ್ಯಕ್ತಿತ್ವದಲ್ಲಿನ ವ್ಯಕ್ತಿ ಹಾಗೂ ತಾರೆಯ ನಡುವಿನ ವ್ಯತ್ಯಾಸವನ್ನು ಗ್ರಹಿಸಿರುವುದು ಸರಿಯಾದುದು. ಅದೂ ಅಲ್ಲದೆ ‘ಅಪರಾಧಿ ಜನಪ್ರಿಯ ನಟ ಆಗಿರುವುದರಿಂದ ಎಲ್ಲಾ ವಿಚಾರಗಳಲ್ಲೂ ಅವರನ್ನು ಅನುಕರಿಸುವ ಜನಸಮೂಹ ಇರುತ್ತದೆ’ ಎಂದು ತಮ್ಮ 201 ಪುಟಗಳ ತೀರ್ಪಿನಲ್ಲಿ ಅವರು ಹೇಳಿರುವ ಮಾತುಗಳು ನಟನಿಗಿರಬೇಕಾದ ಹೊಣೆಗಾರಿಕೆಯನ್ನೂ ಸೂಚಿಸಿವೆ.

ಎಲ್ಲರಿಗಿಂತ ಕಾನೂನು ದೊಡ್ಡದು. ಯಾವ ಸಂಶಯಕ್ಕೂ ಎಡೆ ಇಲ್ಲದಂತೆ ಶಿಕ್ಷೆಯಾಗಬೇಕು. ಚಿತ್ರರಂಗದ ಪ್ರಮುಖ ತಾರೆಯಾಗಿದ್ದರಿಂದ ಶಿಕ್ಷೆಯಿಂದ ತಪ್ಪಿಸಿಕೊಂಡರು ಎಂಬ ಭಾವನೆ ಜನರಿಗೆ ಬರಬಾರದು ಎಂಬುದು ಇಲ್ಲಿ ಮುಖ್ಯ. ಚಿತ್ರರಂಗದ ಪ್ರಮುಖ ನಟ ಎಂಬುದು ನ್ಯಾಯ ವಿತರಣೆಯಲ್ಲಿ ಯಾವುದೇ ಪೂರ್ವಗ್ರಹಕ್ಕೆ ಆಸ್ಪದ ನೀಡಬಾರದು. ಚಿಂಕಾರಗಳ (ಒಂದು ಜಾತಿಯ ಜಿಂಕೆ) ಕಳ್ಳಬೇಟೆಗೆ ಸಂಬಂಧಿಸಿದ ಮತ್ತೊಂದು ಆರೋಪ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್‌ನಿಂದ 2016ರಲ್ಲಿ ಸಲ್ಮಾನ್ ಖಾನ್ ಈಗಾಗಲೇ ಖುಲಾಸೆಗೊಂಡಿದ್ದಾರೆ.

ಜೊತೆಗೆ ಸಶಸ್ತ್ರ ಕಾಯ್ದೆ ಅಡಿ ದಾಖಲಿಸಲಾದ ಪ್ರಕರಣದಲ್ಲೂ ಜೋಧ್‌ಪುರ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ಒಟ್ಟು ನಾಲ್ಕು ಬಾರಿ 20 ದಿನಗಳನ್ನು ಈ ನಟ ಜೈಲಿನಲ್ಲಿ ಕಳೆದಿದ್ದಾರೆ. ಈಗ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜಾಮೀನಿನ ಮೇಲೆ ಬಿಡುಗಡೆ ಆಗಿರುವುದು ಬಿಷ್ಣೋಯ್ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಕೃಷ್ಣಮೃಗಗಳನ್ನು ಪೂಜ್ಯ ಸ್ಥಾನದಲ್ಲಿ ಕಾಣುವ ಈ ಸಮುದಾಯವು ಸಲ್ಮಾನ್ ವಿರುದ್ಧ ಸಾಕ್ಷ್ಯ ನೀಡಿದುದಲ್ಲದೆ ತಮ್ಮ ವಾದಕ್ಕೆ ಈಗಲೂ ಗಟ್ಟಿಯಾಗಿ ಅಂಟಿಕೊಂಡಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕಾದಲ್ಲಿ ಸಾಕ್ಷಿಗಳ ಪಾತ್ರವೂ ಮುಖ್ಯ. ಈ ವಿಚಾರದಲ್ಲಿ ಪ್ರತಿಷ್ಠಿತ ತಾರೆಯ ವಿರುದ್ಧ ಅಚಲವಾಗಿ ನಿಂತ  ಬಿಷ್ಣೋಯ್ ಸಮುದಾಯದ ಪಾತ್ರವೂ ಇಲ್ಲಿ ಶ್ಲಾಘನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.