ADVERTISEMENT

ಪಾಕಿಸ್ತಾನದ ಹತಾಶೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಪಾಕಿಸ್ತಾನದಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಾಗಲೆಲ್ಲ ಅಲ್ಲಿನ ಆಡಳಿತಾರೂಢರು ಕಾಶ್ಮೀರ ವಿವಾದವನ್ನು ಚರ್ಚೆಗೆ ಎಳೆದುಕೊಳ್ಳುವುದು ರೂಢಿ. ಭಯೋತ್ಪಾದನೆಯಿಂದ ಜರ್ಜರಿತಗೊಂಡಿರುವ ಪಾಕಿಸ್ತಾನ, ಅಮೆರಿಕದ ಇತ್ತೀಚಿನ ಬಿಗಿಧೋರಣೆಯಿಂದಾಗಿ ಹತಾಶೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ಕಾಶ್ಮೀರ ಜನಮತಗಣನೆಯ ಹಳೆಯ ವಿವಾದವನ್ನು ವಿಶ್ವಸಂಸ್ಥೆಯಲ್ಲಿ ಕೆದಕಿ ಅದರ ಮರೆಯಲ್ಲಿ ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಜನಮತಗಣನೆ ಎನ್ನುವುದು ಎಂದೋ ಇತ್ಯರ್ಥವಾಗಿ ಹೋಗಿರುವ ವಿವಾದ. 2001ರಲ್ಲಿ `ಮೋರಿ~ ಎನ್ನುವ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ಸಂಸ್ಥೆ ಕಾಶ್ಮೀರದಲ್ಲಿ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಶೇಕಡಾ 60ರಷ್ಟು ಕಾಶ್ಮೀರಿಗಳು ಭಾರತದಲ್ಲಿಯೇ ಕಾಶ್ಮೀರ ಉಳಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಾಕಿಸ್ತಾನಕ್ಕೆ ಸೇರಬೇಕೆಂದು ಬಯಸಿದ್ದವರ ಸಂಖ್ಯೆ ಕೇವಲ ಶೇಕಡಾ ಆರು ಮಾತ್ರ. ಈ ಹಿನ್ನೆಲೆಯಲ್ಲಿ ಆಗಿನ ಎನ್‌ಡಿಎ ಸರ್ಕಾರ 2002ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಯನ್ನು ಘೋಷಿಸಿತ್ತು. ಆ ಚುನಾವಣೆಯಲ್ಲಿ ಶೇಕಡಾ 43ರಷ್ಟು ಕಾಶ್ಮೀರಿಗಳು ಉಗ್ರಗಾಮಿಗಳ ಬೆದರಿಕೆಗೆ ಅಂಜದೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಶೇಕಡಾ 62ರಷ್ಟು ಮತದಾನ ನಡೆದಿತ್ತು. ಕಾಶ್ಮೀರದಲ್ಲಿ ಚುನಾವಣೆಗಳು ಹಿಂದೆಯೂ ನಡೆದಿದ್ದವು. ಆದರೆ ಅಕ್ರಮಗಳಿಂದಾಗಿ ಅಲ್ಲಿನ ಜನ ಆ ಚುನಾವಣೆಗಳ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಳು ಅಂತರರಾಷ್ಟ್ರೀಯ ವೀಕ್ಷಕರ ಕಣ್ಗಾವಲಿನಲ್ಲಿ ನಡೆದಿರುವ ಕಾರಣ ಅದರ ವಿಶ್ವಾಸಾರ್ಹತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.

ಜನಮತಗಣನೆಯ ವಿಚಾರವನ್ನು ಒಂದು ಕಾಲದಲ್ಲಿ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಎತ್ತಿದ್ದರೂ ಈಗ ಪ್ರಾಯೋಗಿಕವಾಗಿ ಅದು ಅಸಾಧ್ಯ. `ಆಜಾದಿ ಕಾಶ್ಮೀರ~ದ ಬೇಡಿಕೆಯ ಕೂಗು ಕೇಳಿಬರುತ್ತಿರುವಾಗ ಭಾರತ ಇಲ್ಲವೇ ಪಾಕಿಸ್ತಾನ ಎಂಬ ಎರಡು ಆಯ್ಕೆಗಳನ್ನಷ್ಟೇ ಮುಂದಿಟ್ಟು ಜನಮತಗಣನೆ ನಡೆಸಲಾಗದು. ಭಾರತ ಮತ್ತು ಪಾಕಿಸ್ತಾನದ ಜತೆಯಲ್ಲಿ `ಆಜಾದಿ ಕಾಶ್ಮೀರ~ದ ಆಯ್ಕೆಯನ್ನೂ  ನೀಡಬೇಕಾಗುತ್ತದೆ. `ಆಜಾದಿ ಕಾಶ್ಮೀರ~ದ ಆಯ್ಕೆ ನೀಡಿದ ಮೇಲೆ ಅದರ ಸ್ವರೂಪವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನವನ್ನು ನಿರ್ಧರಿಸಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ಜನಮತಗಣನೆಯನ್ನು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕಷ್ಟೇ ಸೀಮಿತಗೊಳಿಸಲು ಸಾಧ್ಯ ಇಲ್ಲ. ಅದನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯೂ (ಪಿಒಕೆ) ನಡೆಸಬೇಕಾಗುತ್ತದೆ. ಪಿಒಕೆಯಲ್ಲಿ ಜನಮತಗಣನೆಗೆ ಪಾಕಿಸ್ತಾನ ಸಿದ್ದ ಇದೆಯೇ? ಜನಮತಗಣನೆ ನಡೆದರೂ ಕಾಶ್ಮೀರದ ಜನತೆ ಅರಾಜಕತೆಯಿಂದ ನರಳುತ್ತಿರುವ ರೋಗಿಷ್ಠ ದೇಶವಾದ ಪಾಕಿಸ್ತಾನದ ಜತೆಗೆ ಸೇರಿಕೊಳ್ಳಲು ಖಂಡಿತ ಇಷ್ಟಪಡಲಾರರು ಎಂದು ಅವರಿಗೆ ತಿಳಿದಿದೆ. ಆ ದೇಶದ ಆಡಳಿತಾರೂಢರಿಗೆ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಅತೃಪ್ತ ಪ್ರಜೆಗಳ ಗಮನವನ್ನು ಬೇರೆ ಕಡೆ ಸೆಳೆಯಲು ಭಾವನಾತ್ಮಕವಾದ ವಿವಾದವೊಂದು ಬೇಕು ಅಷ್ಟೆ. ಪಾಕಿಸ್ತಾನದ ಇಂತಹ ಅರ್ಥಹೀನ ಬೇಡಿಕೆಗೆ ಸಂಬಂಧಿಸಿದಂತೆ ಭಾರತ ಉದ್ರೇಕಗೊಳ್ಳುವ ಅಗತ್ಯ ಇಲ್ಲ. ಆ ದೇಶದ ನಾಯಕರ ದುಷ್ಟ ಆಲೋಚನೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಯಲುಗೊಳಿಸುತ್ತಲೇ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT