ADVERTISEMENT

ಪಾರ್ಕಿಂಗ್‌ ಶುಲ್ಕ ಬಲುಭಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬೆಂಗಳೂರು ಮಹಾನಗರ ಪಾಲಿಕೆ, ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಲು ಹೊರಟಿದೆ. ನಗರದ ಎಂಬತ್ತೈದು ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸುವ ವಾಹನಗಳಿಗೆ ಅವುಗಳ ನಿಲುಗಡೆ ಅವಧಿಗನುಗುಣವಾಗಿ ಪಾರ್ಕಿಂಗ್‌ ಶುಲ್ಕ ವಸೂಲು ಮಾಡುವ ಪ್ರಸ್ತಾವಕ್ಕೆ ಪಾಲಿಕೆಯ ಕೌನ್ಸಿಲ್‌ ಸಭೆ ಚರ್ಚೆಯನ್ನೇ ನಡೆಸದೆ ಒಪ್ಪಿಗೆ ನೀಡಿರುವುದು ದುರದೃಷ್ಟಕರ.

ನಗರ ಭೂ ಸಾರಿಗೆ ನಿರ್ದೇಶನಾಲಯದ ಶಿಫಾರಸಿಗೆ ಅನುಗುಣವಾಗಿ ಹೊಸ ಪಾರ್ಕಿಂಗ್‌ ನೀತಿ ಜಾರಿಗೆ ತರುವುದಾಗಿ ಪಾಲಿಕೆ ತಿಳಿಸಿದ್ದರೂ ಶುಲ್ಕ ನಿಗದಿಗೆ ಅನುಸರಿಸಿದ ಮಾನದಂಡ ಯಾವುದು ಎಂಬುದನ್ನು ಹೇಳಿಲ್ಲ. ಪಾರ್ಕಿಂಗ್‌ನಿಂದ ಬರುವ ವಾರ್ಷಿಕ 80 ಕೋಟಿ ರೂ ಆದಾಯದ ಕಡೆಗೇ  ಪಾಲಿಕೆಗೆ ಹೆಚ್ಚಿನ ಗಮನ ಇದ್ದಂತೆ ಕಾಣುತ್ತದೆ. ಹೊಸ ನೀತಿ ಜಾರಿಯಿಂದ ವಾಹನಗಳ ಮಾಲೀಕರಿಗೆ ಬೀಳುವ ಆರ್ಥಿಕ ಹೊರೆ ಬಗ್ಗೆ ಕಾಳಜಿಯೇ ಇಲ್ಲ.

ನಿತ್ಯ ಹತ್ತಾರು ಕಡೆ ಓಡಾಡಿ ಕೆಲಸ ಮಾಡುವ ವೃತ್ತಿಗಳಲ್ಲಿರುವ ಜನರಿಗೆ ಪಾರ್ಕಿಂಗ್‌ ಶುಲ್ಕ ಹೊರೆ ಆಗಲಿದೆ.  ಹಿಂದಿದ್ದ ಸರ್ಕಾರದ ಅವಧಿಯಲ್ಲಿ ರೂಪಿಸಿದ ಪಾರ್ಕಿಂಗ್‌ ನೀತಿಯನ್ನು ಜಾರಿಗೆ ತರುವ ಮೊದಲು ಆ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಬೇಕಿತ್ತು. ಅಂತಹ ಸೌಜನ್ಯ ಪಾಲಿಕೆಗೆ ಇಲ್ಲ. ಹೊಸ ತೆರಿಗೆಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ಹೊತ್ತಿನಲ್ಲಿ ದುಬಾರಿಯಾದ ಪಾರ್ಕಿಂಗ್‌ ನೀತಿ ಜಾರಿಗೆ ತರುವುದನ್ನು ಒಪ್ಪಲಾಗದು. ಜನ ವಿರೋಧಿಯಾಗಿರುವ ಹೊಸ ನೀತಿ ಜಾರಿಗೆ ಸರ್ಕಾರ ಅವಕಾಶ ಕೊಡಬಾರದು.

ಪ್ರಸ್ತುತ ನಗರದಲ್ಲಿ ಎಲ್ಲೆಡೆ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿಲ್ಲ. ಆದರೂ ಅನೇಕ ಕಡೆ ಅನಧಿಕೃತವಾಗಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಪುಢಾರಿಗಳು ಮತ್ತು ರೌಡಿಗಳ ಬೆಂಬಲ ಇರುವ ವ್ಯಕ್ತಿಗಳು ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳನ್ನು ನೋಡಿಕೊಳ್ಳುತ್ತೇವೆಂದು ಹೇಳಿಕೊಂಡು ಶುಲ್ಕ ಸಂಗ್ರಹಿಸುತ್ತಿದ್ದಾರೆ. ಇದೊಂದು ಮಾಫಿಯಾ. ಈ ಅವ್ಯವಹಾರ ಸರ್ಕಾರಕ್ಕೆ ಗೊತ್ತಿದ್ದರೂ ಅದನ್ನು ನಿಯಂತ್ರಿಸುತ್ತಿಲ್ಲ. ಅದನ್ನು ತಕ್ಷಣ ನಿಲ್ಲಿಸಬೇಕು.

ನಿರ್ದಿಷ್ಟ ಸ್ಥಳಗಳಲ್ಲಿ ಜನರಿಗೆ ಹೊರೆ ಆಗದಂತೆ ಶುಲ್ಕ ನಿಗದಿ ಮಾಡಬೇಕು. ಶುಲ್ಕ ಸಂಗ್ರಹಕ್ಕೆ ನಿಗದಿ ಮಾಡಿದ ಸ್ಥಳಗಳು ಯಾವುವು ಎಂಬ ಕುರಿತು ಪಾಲಿಕೆ ಪ್ರಕಟಣೆ ನೀಡಬೇಕು. ಅದಕ್ಕೊಂದು ಸ್ಪಷ್ಟ ನೀತಿ ರೂಪಿಸಬೇಕು. ಬಸ್‌, ರೈಲು ನಿಲ್ದಾಣ ಮತ್ತಿತರ ಕಡೆ ನಿಲ್ಲಿಸುವ ವಾಹನಗಳಿಗೆ ಬಿಸಿಲು, ಮಳೆ ಹಾಗೂ ಕಳ್ಳಕಾಕರಿಂದ ರಕ್ಷಣೆ ಇಲ್ಲ. ಈ ವಾಹನಗಳ ರಕ್ಷಣೆಯ ಹೊಣೆ ಶುಲ್ಕ ಸಂಗ್ರಹಿಸುವ ಗುತ್ತಿಗೆದಾರನದು. ವಾಹನಗಳ ಸುರಕ್ಷತೆಯ ಬಗ್ಗೆ ಪಾಲಿಕೆ ಭರವಸೆ ಕೊಡಬೇಕು.

  ಹೊಸ ಪಾರ್ಕಿಂಗ್‌ ನೀತಿ ಜಾರಿಗೆ ತರಲೇಬೇಕು ಎಂದಾದರೆ ನಿಲುಗಡೆ ಅವಧಿಗೆ ಅನುಗುಣವಾಗಿ ದುಬಾರಿ ಶುಲ್ಕ ನಿಗದಿ ಮಾಡುವ ಪದ್ಧತಿಯನ್ನು ಕೈಬಿಟ್ಟು, ವಾಹನ ಮಾಲೀಕರಿಗೆ ಹೆಚ್ಚಿನ ಹೊರೆ ಆಗದಂತೆ ಶುಲ್ಕ ನಿಗದಿ ಮಾಡಲು ಸಾಧ್ಯವಿದೆ. ಪಾಲಿಕೆ ಈ ಕುರಿತು ಮರುಚಿಂತನೆ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.