ADVERTISEMENT

ಬಾಲಿಯಲ್ಲಿ ಭಾರತಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಇಂಡೊನೇಷ್ಯಾದ ಬಾಲಿಯಲ್ಲಿ ಕಳೆದ ವಾರ ನಡೆದ ವಿಶ್ವ ವ್ಯಾಪಾರ ಸಂಘ­ಟನೆಯ (ಡಬ್ಲ್ಯುಟಿಒ) ಸದಸ್ಯ ರಾಷ್ಟ್ರಗಳ ಸಚಿವರ ಸಮಾ­ವೇಶದಲ್ಲಿ ಕೃಷಿ ಸಬ್ಸಿಡಿ ಮತ್ತು ಆಹಾರ ಧಾನ್ಯಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಸದಸ್ಯ ದೇಶಗಳು ಸಹಮತಕ್ಕೆ ಬಂದಿರು­ವುದು ಐತಿಹಾಸಿಕ ಬೆಳವಣಿಗೆಯಾಗಿದೆ. ಜಾಗತಿಕ ವ್ಯಾಪಾರಕ್ಕೆ ಸಂಬಂಧಿಸಿದಂತೆ ಎರಡು ದಶಕಗಳಲ್ಲಿನ ಮೊದಲ ಮಹತ್ವದ ಒಪ್ಪಂದ ಇದಾಗಿದೆ. ಡಬ್ಲ್ಯುಟಿಒ ಸಂಘಟನೆಯು ಅಪ್ರಸ್ತುತ­ಗೊಳ್ಳುವ ಅಪಾಯದಿಂದ ಈ ಮೂಲಕ ಕೊನೆಗೂ ಪಾರಾ­ದಂತಾಗಿದೆ.

ವಾಣಿಜ್ಯ ವಹಿವಾಟಿನ ವೆಚ್ಚ ತಗ್ಗಿಸಲು, ಗಡಿಯಲ್ಲಿನ ವಿಳಂಬ ತಪ್ಪಿಸಿ,  ಸರಕುಗಳ ಗಡಿಯಾಚೆಗಿನ ಸಾಗಾ­ಣಿಕೆಯ ಅಡೆತಡೆ  ನಿವಾರಿಸಲು ಈಗ ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟು ಹೆಚ್ಚಲು, ವರಮಾನ ಸಂಗ್ರಹ  ಮತ್ತು ಬಂಡವಾಳ ಹೂಡಿಕೆಗೂ ಇದು ಉತ್ತೇಜನ ನೀಡಲಿದೆ. ಈ ಬೆಳವಣಿಗೆಯು ಭಾರತದ ಪಾಲಿಗೂ ತುಂಬ ಮಹತ್ವದ್ದಾಗಿದೆ.

ಮಾತುಕತೆಯಲ್ಲಿ ಭಾರತವು ಕೃಷಿ ಸಬ್ಸಿಡಿ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಯಶ ಸಾಧಿಸಿದೆ. ಒಂದು ವೇಳೆ ಈ ಒಪ್ಪಂದ ಸಾಧ್ಯವಾಗಿರದಿದ್ದರೆ ಕೇಂದ್ರದಲ್ಲಿನ ಯುಪಿಎ–2 ಸರ್ಕಾರದ ಮಹತ್ವಾ­ಕಾಂಕ್ಷೆಯ  ಆಹಾರ ಭದ್ರತೆ ಯೋಜನೆ ಮೇಲೆ ಪ್ರತಿಕೂಲ ಪರಿಣಾಮ  ಉಂಟಾಗುತ್ತಿತ್ತು. ಭಾರತವು ತನ್ನ ನಿಲುವನ್ನು ಇತರ ಸದಸ್ಯ ದೇಶಗಳಿಗೆ ಮನವರಿಕೆ ಮಾಡಿಕೊಟ್ಟು ಅವುಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿ­ರುವುದು ದೇಶದ ರಾಜತಾಂತ್ರಿಕ ಗೆಲುವೂ ಹೌದು. ಇದು ಭಾರತದ ಗೆಲುವಷ್ಟೇ ಅಲ್ಲದೇ ಎಲ್ಲ ಅಭಿವೃದ್ಧಿಶೀಲ ದೇಶಗಳ ಗೆಲುವೂ ಹೌದು.

ಹಸಿವಿನಿಂದ ಬಳಲುವ ಲಕ್ಷಾಂತರ ಜನರಿಗೆ ಆಹಾರ ಒದಗಿಸುವ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ದೇಶದ ಸಾರ್ವಭೌಮ ಹಕ್ಕಿನಲ್ಲಿ  ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗಿದೆ ಎನ್ನುವ ಟೀಕೆಗಳಿದ್ದರೂ, ಆಹಾರ ಸಂಗ್ರಹದಲ್ಲಿ ಶೇ 10ರಷ್ಟು ಸಬ್ಸಿಡಿ ಮಿತಿ,  ಆಹಾರ ಧಾನ್ಯ ಸಂಗ್ರಹ ಮತ್ತು ವಿತರಣೆಯಲ್ಲಿ ಅಭಿವೃದ್ಧಿಶೀಲ ದೇಶ­ಗಳಿಗೆ  ವಿನಾಯ್ತಿ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದು ಶಾಶ್ವತ ವಿನಾಯ್ತಿ ಏನೂ ಅಲ್ಲ. ಅಂತಿಮವಾಗಿ ಒಪ್ಪಂದಕ್ಕೆ ಬರುವವರೆಗೆ ಮಾತ್ರ ಈ ಮಧ್ಯಂತರ ಪರಿಹಾರ ಚಾಲ್ತಿಯಲ್ಲಿ ಇರುತ್ತದೆ ಎನ್ನುವುದನ್ನೂ ನಾವಿಲ್ಲಿ ಮರೆಯಬಾರದು.

ಮುಂದಿನ ಸಮ್ಮೇಳನದ ಹೊತ್ತಿಗೆ ಭಾರತ ಮತ್ತು ಇತರ ಅಭಿವೃದ್ಧಿಶೀಲ ದೇಶಗಳು ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಬೇಕಾಗಿದೆ.  ಕೃಷಿ ಸಬ್ಸಿಡಿ ಲೆಕ್ಕ ಹಾಕಲು 1988ರ ವರ್ಷವನ್ನು ಕೃಷಿ ಉತ್ಪನ್ನಗಳ ಬೆಲೆ ಆಧಾರ ವರ್ಷ ಎಂದು ಪರಿಗಣಿಸ­ಲಾಗಿದ್ದು, ಇದಕ್ಕೆ ಸಂಬಂಧಿ­ಸಿದಂತೆ ಹಣದುಬ್ಬರ ಲೆಕ್ಕಹಾಕಲು ಸಾಕಷ್ಟು ನಿಯಮಗಳಿಗೆ ಅವಕಾಶ ಇಲ್ಲದಿರು­ವುದು ಪ್ರಮುಖ ಲೋಪ­ವಾಗಿದೆ.

ಯಾವುದೇ  ದೇಶ  ಸಂಗ್ರಹಿಸಿಟ್ಟುಕೊಳ್ಳುವ ಆಹಾರ ಧಾನ್ಯ, ಜಾಗತಿಕ ಆಹಾರ ವಾಣಿಜ್ಯ ವಹಿವಾಟಿಗೆ ಧಕ್ಕೆಯಾಗದಂತೆ   ಬಳಸಬೇಕಾಗಿದೆ.   ಈ ಉದ್ದೇಶ ಸಾಧಿಸಲು ರಫ್ತು ಮೇಲೆ ಕೆಲ ನಿರ್ಬಂಧ ವಿಧಿ­ಸುವುದು ಭಾರತಕ್ಕೆ ಅನಿವಾರ್ಯ­ವಾಗ­ಬ­ಹುದು.  ಜಾಗತಿಕ ವ್ಯಾಪಾರ ನಿರ್ಬಂಧಗಳನ್ನು ನಿವಾರಿಸುವ ಮೂಲ ಉದ್ದೇಶ ಸಾಧಿಸಲು ಸದಸ್ಯ ದೇಶಗಳು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ ಎನ್ನುವುದನ್ನೂ ನಾವಿಲ್ಲಿ ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT