ಅನುಷ್ಠಾನದ ಜವಾಬ್ದಾರಿ ಇಲ್ಲದ 2013-14ನೇ ಸಾಲಿನ ಬಜೆಟ್, ಮಂಡನೆಯಾಗುವ ಮೊದಲೇ ಮಹತ್ವ ಕಳೆದುಕೊಂಡಿತ್ತು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಬಜೆಟ್ ಭಾಷಣವನ್ನು ಮುಂಬರುವ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯನ್ನಾಗಿ ಬಳಸಬಹುದೇ ಹೊರತು ಉಳಿದಂತೆ ಇದಕ್ಕೆ ಯಾವ ಪಾವಿತ್ರ್ಯವೂ ಇಲ್ಲ. ಜಾರಿಗೆ ತರುವ ಹೊಣೆ ಇಲ್ಲದ ಕಾರಣಕ್ಕಾಗಿಯಾದರೂ ಮಾದರಿ ಬಜೆಟ್ ನೀಡುವ ದಿಟ್ಟತನವನ್ನು ಶೆಟ್ಟರ್ ತೋರಬಹುದಿತ್ತು. ಆದರೆ, ರಾಜ್ಯದ ಬಿಜೆಪಿ ಸರ್ಕಾರ ಮಂಡಿಸಿರುವ ಎಲ್ಲ ಐದು ಬಜೆಟ್‌ಗಳು ಒಂದೇ ಎರಕದಲ್ಲಿ ಹೊಯ್ದು ಮಾಡಿದಂತೆ ಕಾಣುತ್ತಿವೆ. ಜನಪ್ರಿಯತೆಯೊಂದನ್ನೇ ಮಾನದಂಡವನ್ನಾಗಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಡುಹಿಡಿದ ಬಜೆಟ್ ತಯಾರಿಕೆಯ ಕಲೆಯನ್ನೇ ಅವರ ಉತ್ತರಾಧಿಕಾರಿಗಳು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ. ರೈತರನ್ನು ಒಲಿಸಿಕೊಳ್ಳಲು ಕೃಷಿ ಬಜೆಟ್ ಎಂಬ ಆಕರ್ಷಕ ಹೊದಿಕೆ, ವಿವಿಧ ಜಾತಿ-ಧರ್ಮಗಳ ಮಠ-ದೇವಾಲಯಗಳಿಗೆ ಉದಾರ ಕೊಡುಗೆ, ಪೈಪೋಟಿಯಲ್ಲಿ ಬಜೆಟ್‌ಗಾತ್ರದ ಹೆಚ್ಚಳ, ಒಂದಷ್ಟು ಜನಪ್ರಿಯ ಕಾರ್ಯಕ್ರಮಗಳ ಘೋಷಣೆ, ಹೆಚ್ಚು ತೆರಿಗೆಯನ್ನು ಹೇರದ ಸುರಕ್ಷಿತ ಕಸರತ್ತು-ಇವೆಲ್ಲವನ್ನು ಐದೂ ಬಜೆಟ್‌ಗಳಲ್ಲಿ ನೋಡಬಹುದು. ಹಿಂದಿನ ಮುಖ್ಯಮಂತ್ರಿಗಳಿಗಿಂತ ಭಿನ್ನವಾದುದೇನನ್ನಾದರೂ ನೀಡಬೇಕೆಂಬ ಹಟಕ್ಕೆ ಬಿದ್ದು ಮುಖ್ಯಮಂತ್ರಿ ಶೆಟ್ಟರ್ ನಾಲ್ಕು ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದ್ದೊಂದೇ ಈ ಬಾರಿಯ ವಿಶೇಷ. ಈ ಜನಪ್ರಿಯತೆಯ ಸವಾರಿಯ ಪರಿಣಾಮ ಗುರುವಾರವಷ್ಟೇ ರಾಜ್ಯ ಸರ್ಕಾರ ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಬಿಜೆಪಿಯ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಕೃಷಿ, ನೋಂದಾಯಿತ ಮತ್ತು ನೋಂದಾಯಿಸದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದರ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಐದು ವರ್ಷಗಳ ಹಿಂದೆ ಶೇಕಡಾ 16.20ರಷ್ಟಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಪ್ರಸಕ್ತ ಹಣಕಾಸು ವರ್ಷ ಅಂತ್ಯಕ್ಕೆ ಶೇಕಡಾ 13.33ಕ್ಕೆ ಇಳಿದಿದೆ. ರಾಜ್ಯದ ಪ್ರತಿ ನಾಲ್ವರಲ್ಲಿ ಒಬ್ಬರು ಬಡತನದ ರೇಖೆಗಿಂತ ಕೆಳಗಿರುವವರು ಎನ್ನುವುದು ಆಡಳಿತ ನಡೆಸಿದ ಯಾವುದೇ ಪಕ್ಷ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ.
ಎರಡು ರೂಪಾಯಿಗೆ ಕಿಲೋ ಅಕ್ಕಿ, ಜಾತಿಗೊಂದು ಮಠ- ಸಮುದಾಯ ಭವನಗಳ ನಿರ್ಮಾಣ ಮೊದಲಾದ ಜನಪ್ರಿಯ ಕಾರ್ಯಕ್ರಮಗಳಿಂದ ಬಡತನ ನಿರ್ಮೂಲನೆಯಾಗಲಾರದು. ಅವಶ್ಯಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೆ ಇರುವುದು ಬಿಜೆಪಿ ಆಡಳಿತದ ಬಹುದೊಡ್ಡ ವೈಫಲ್ಯ. ಭಾರಿ ಪ್ರಚಾರದೊಂದಿಗೆ `ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ಗಳನ್ನು ನಡೆಸಿದ ಸರ್ಕಾರ ಇದರಿಂದ ಹರಿದುಬಂದ ಬಂಡವಾಳ ಎಷ್ಟು? ಸ್ಥಾಪನೆಗೊಂಡ ಕೈಗಾರಿಕೆಗಳೆಷ್ಟು? ಎಂಬ ಲೆಕ್ಕವನ್ನು ಬಜೆಟ್‌ನಲ್ಲಿ ನೀಡಿಲ್ಲ. ಆದರೆ ಆರ್ಥಿಕ ಸಮೀಕ್ಷೆಯಲ್ಲಿ ಈ ವೈಫಲ್ಯದ ವಿವರ ಇದೆ. ಈ ಬಾರಿಯ ಬಜೆಟ್‌ನಲ್ಲಿಯೂ ತನ್ನ ತವರು ಜಿಲ್ಲೆಯಾದ ಹುಬ್ಬಳ್ಳಿ ಮತ್ತು ಬೆಂಗಳೂರು ಮಹಾನಗರಕ್ಕೆ ತೋರಿದ ಔದಾರ್ಯವನ್ನು ಇತರ ಜಿಲ್ಲಾ ಕೇಂದ್ರಗಳ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ತೋರಿಲ್ಲ. ಬಜೆಟ್‌ನ ಕೆಲವು ಒಳ್ಳೆಯ ಅಂಶಗಳಲ್ಲಿ ತೆರಿಗೆ ಸಂಗ್ರಹದಲ್ಲಿನ ಸ್ಥಿರತೆಯೂ ಒಂದು. ಇದಕ್ಕೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಮತ್ತು ವ್ಯಾಟ್ ಜಾರಿ ಪ್ರಮುಖ ಕಾರಣ. ಸಾಲದ ಹೊರೆ ಅಧಿಕ ಎನಿಸಿದರೂ ಅದು 13ನೇ ಹಣಕಾಸು ಆಯೋಗ ವಿಧಿಸಿದ ಮಿತಿಯನ್ನು ಮೀರದಿರುವುದು ಮತ್ತು ಆರ್ಥಿಕ ಕೊರತೆ ಜಿಎಸ್‌ಡಿಪಿಯ ಶೇಕಡಾ 2.78ರಷ್ಟಿರುವುದು ಸಮಾಧಾನಕರ ಬೆಳವಣಿಗೆ. 43 ಹೊಸ ತಾಲ್ಲೂಕುಗಳ ರಚನೆ ದಿಟ್ಟತನದ ನಿರ್ಧಾರ. ಇದನ್ನು ಅವಸರದಲ್ಲಿ ಮಾಡುವ ಬದಲಿಗೆ 2011ರ ಜನಗಣತಿಯ ಆಧಾರದಲ್ಲಿ ಮಾಡಬಹುದಿತ್ತು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳು ರೈತರಿಗೆ ನೆರವಾಗುವಂತಿದ್ದರೂ ಅನುಷ್ಠಾನದ ಭಾಗ್ಯ ಇಲ್ಲದೆ ಇದ್ದ ಮೇಲೆ ಏನು ಫಲ? ಈ ಮಾತು ಬಜೆಟ್‌ನಲ್ಲಿ ಘೋಷಿಸಲಾದ ಇತರ ಒಳ್ಳೆಯ ಯೋಜನೆಗಳಿಗೂ ಅನ್ವಯಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.