ADVERTISEMENT

ಬ್ರಿಕ್ಸ್: ಉತ್ತಮ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ವಿಶ್ವ ಆರ್ಥಿಕ ವ್ಯವಸ್ಥೆಯ ಮೇಲಿನ ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯವನ್ನು ಅಡಗಿಸುವ ದಿಸೆಯಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ `ಬ್ರಿಕ್ಸ್~ ದೇಶಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗ ಸಭೆ ಮಹತ್ವದ ಹೆಜ್ಜೆ ಇಟ್ಟಿದೆ.

ಇದು ಪರಸ್ಪರ ಸಹಕಾರದ ಆರಂಭದ ಹೆಜ್ಜೆಯೇ ಆದರೂ, ಮುಂದಿನ ಮೂರು ದಶಕಗಳೊಳಗೆ ಅಭಿವೃದ್ಧಿಯಲ್ಲಿ ಪಾಶ್ಚಿಮಾತ್ಯ ದೇಶಗಳನ್ನು ಮತ್ತು ಯೂರೋಪ್ ಒಕ್ಕೂಟವನ್ನು ಮೀರಿಸುವ ಸಾಧ್ಯತೆಗಳಿವೆ ಎಂಬ ಆರ್ಥಿಕ ತಜ್ಞರ ಲೆಕ್ಕಾಚಾರದಿಂದಾಗಿ ಈ ಶೃಂಗಸಭೆಯ ನಿರ್ಣಯಗಳು ಮುಖ್ಯವಾಗಿವೆ.
 
ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಡಾಲರ್‌ಗೆ ಬದಲು ತಮ್ಮ ದೇಶಗಳ ಚಲಾವಣೆ ಹಣದಿಂದಲೇ ವಾಣಿಜ್ಯ ವಹಿವಾಟು, ಅಭಿವೃದ್ಧಿ ಉದ್ದೇಶದ ಯೋಜನೆಗಳಿಗೆ ಸಾಲ ಸೌಲಭ್ಯ ಮತ್ತು ಈ ಎಲ್ಲದಕ್ಕೂ ಅನುಕೂಲವಾಗುವಂತೆ `ಬ್ರಿಕ್ಸ್ ಬ್ಯಾಂಕ್~ ಸ್ಥಾಪನೆಗೆ ಒಂದು ಸ್ವರೂಪ ನೀಡಲು ಈ ದೇಶಗಳ ಪ್ರತಿನಿಧಿಗಳು ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಪರ್ಯಾಯ ಆರ್ಥಿಕ ಶಕ್ತಿಯಾಗಿ ಬೆಳೆಯಲು ದಾರಿ ಮಾಡಿಕೊಂಡಿದ್ದಾರೆ.
 
ಈ ಒಕ್ಕೂಟದ ಎಲ್ಲ ದೇಶಗಳೂ ಸಮಾನವಾದ ಆರ್ಥಿಕ ಪರಿಸ್ಥಿತಿ ಹೊಂದಿಲ್ಲ; ಆದರೂ ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯಿಂದ ಉದ್ದೇಶಿತ ಪ್ರಗತಿ ಸಾಧಿಸಲು ಸಾಧ್ಯ.

ಈ  ಪ್ರಯತ್ನ ಸಫಲವಾದರೆ ಪಾಶ್ಚಾತ್ಯ ದೇಶಗಳು ಮತ್ತು ಅವುಗಳ ನಿಯಂತ್ರಣದಲ್ಲಿರುವ ವಿಶ್ವಬ್ಯಾಂಕ್, ಐಎಂಎಫ್, ಎಡಿಬಿಯ ಮುಂದೆ ಅಭಿವೃದ್ಧಿಶೀಲ ಮತ್ತು ಬಡದೇಶಗಳು ಸಾಲಕ್ಕಾಗಿ ಕೈಯೊಡ್ಡುತ್ತ ನಿಲ್ಲುವುದು ಮತ್ತು ಹಣ ಪಡೆದು ಅವು ಹಾಕಿದ ಷರತ್ತುಗಳಿಗೆ ತಲೆ ಬಾಗಿ ಜನ ಹಿತ ಕಡೆಗಣಿಸಬೇಕಾದಂಥ ಸ್ಥಿತಿ ಇರುವುದಿಲ್ಲ. 

  ಈ ಒಕ್ಕೂಟದ ದೇಶಗಳ ನಡುವೆ ಹೊಂದಾಣಿಕೆ ಈಗ ತಾನೆ ಆರಂಭವಾಗಿದೆ. ಭಿನ್ನಾಭಿಪ್ರಾಯಗಳು ಸಾಕಷ್ಟು ಇವೆ. ಜಗತ್ತಿನಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿರುವ ಚೀನಾ ಈ ಒಕ್ಕೂಟದಲ್ಲಿ ಪ್ರಾಬಲ್ಯ ಗಳಿಸುವ ಭೀತಿ ಇದ್ದೇ ಇದೆ. ರಷ್ಯಾ ಮತ್ತು ಭಾರತ ಅದನ್ನು ಸರಿದೂಗಿಸುವಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಜಾಗತಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಂಡರೆ ಬಹುಶಃ ಸಮಸ್ಯೆ ಆಗಲಾರದು. ಸದ್ಯಕ್ಕೆ ಆರ್ಥಿಕ ವಿಚಾರಗಳತ್ತಲೇ ಗಮನ ಕೊಟ್ಟಿರುವ ಈ ಒಕ್ಕೂಟ, ಕ್ರಮೇಣ ರಾಜಕೀಯ ಸ್ವರೂಪ ಪಡೆಯುವ ಸಾಧ್ಯತೆಯನ್ನು ಈಗಾಗಲೇ ಊಹಿಸಬಹುದು. ಇರಾನ್ ಮತ್ತು ಸಿರಿಯಾ ವಿಚಾರದಲ್ಲಿ ಅಮೆರಿಕ ನೇತೃತ್ವದ ಮುಂದುವರಿದ ದೇಶಗಳು ವಿಧಿಸುತ್ತಿರುವ ನಿರ್ಬಂಧಗಳನ್ನು ಸ್ಪಷ್ಟವಾಗಿ ಬ್ರಿಕ್ಸ್ ದೇಶಗಳು ವಿರೋಧಿಸಿವೆ.

ಯಾವುದೇ ದೇಶವಾಗಿರಲಿ, ಅದರ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಆಗ್ರಹ ರಾಜಕೀಯವಾಗಿ ಬಹಳ ಪ್ರಮುಖವಾದುದು. ಮಾತಿನ ಮಟ್ಟದಲ್ಲಿರುವ ಈ ನಿಲುವುಗಳು ಕಾರ್ಯರೂಪಕ್ಕೆ ಬಂದರೆ ನಿರಾಶಾದಾಯಕವಾಗಿರುವ ಜಾಗತಿಕ ಆರ್ಥಿಕ, ರಾಜಕೀಯ ವಾತಾವರಣ ಬದಲಾಗುವುದು ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.