ADVERTISEMENT

ಭಾನುವಾರ, 16-10-1961

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಕೇರಳದಲ್ಲಿ ಕಾಂಗ್ರೆಸ್ ನಿಲುವಿಗೆ ಮುಸ್ಲಿಂ ಲೀಗ್ ವಿರೋಧ
ಕಲ್ಲೆಕೋಟೆ, ಅಅ. 15 - ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗ್ ಬಗ್ಗೆ ಅನುಸರಿಸುತ್ತಿರುವಂಥ ಧೋರಣೆಯನ್ನೇ ಇನ್ನು ಮುಂದೆ ತಾನು ಕಾಂಗ್ರೆಸ್ಸಿನ ಬಗ್ಗೆ ಅನುಸರಿಸುವುದಾಗಿ ಕೇರಳ ರಾಜ್ಯದ ಮುಸ್ಲಿಂ ಲೀಗ್ ಸಮಿತಿ ಇಂದು ನಿರ್ಣಯವೊಂದರಲ್ಲಿ ತಿಳಿಸಿತು.

ಲೀಗನ್ನು ವಿರೋಧಿಸಿ ಅದನ್ನೆದುರಿಸಲು ಕಾಂಗ್ರೆಸ್ಸಿನ ಜವಾಬ್ದಾರಿಯುತ ನಾಯಕರು ಪದೇ ಪದೇ ಮಾಡುತ್ತಿರುವ ಘೋಷಣೆಗಳಿಂದಾಗಿ ತಾನು ಗತ್ಯಂತರವಿಲ್ಲದೆ ಈ ನಿರ್ಧಾರ ಕೈಗೊಳ್ಳಬೇಕಾಗಿದೆಯೆಂದು ಲೀಗ್ ಹೇಳಿದೆ. ಪ್ರಜಾಸತ್ತಾತ್ಮಕ ಕೂಟದ ಒಂದು ಪಕ್ಷವಾದ ಕಾಂಗ್ರೆಸ್ಸು ಅದೇ ಕೂಟದ ಇನ್ನೊಂದು ಪಕ್ಷದ ಬಗ್ಗೆ ಹೀಗೆ ವರ್ತಿಸುತ್ತಿದೆಯೆಂದು ನಿರ್ಣಯ ಗಮನಿಸಿದೆ.

ಅಕಾಲಿ ದಳದ ಅಸಮಾಧಾನ
ಅಮೃತಸರ, ಅ. 15 - ಅಕಾಲಿದಳದ ಕಾರ್ಯಕಾರಿ ಸಮಿತಿಯು ಇಂದು ಇಲ್ಲಿ ಮೂರು ಗಂಟೆಗಳ ಕಾಲ ರಹಸ್ಯ ಸಭೆ ನಡೆಸಿತು. ಅಕಾಲಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಆದ ಒಪ್ಪಂದದ ವಿಧಿಗಳನ್ನು ಅದರಲ್ಲಿಯೂ ಮಾಸ್ಟರ್ ತಾರಾಸಿಂಗ್ ಅವರು ಉಪವಾಸ ಮಾಡುತ್ತಿದ್ದಾಗ ಅಕಾಲಿದಳದ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ವಿಧಿಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಸಭೆಯು ಅಸಮಾಧಾನ ವ್ಯಕ್ತಪಡಿಸಿ ನಿರ್ಣಯ ಮಾಡಿದೆ.

ಅಸ್ವಸ್ಥತೆಯ ಕಾರಣ ಮಾಸ್ಟರ್ ತಾರಾಸಿಂಗ್ ಹಾಗೂ ಸಂತ್ ಫತೇಸಿಂಗರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅಕಾಲಿದಳದ ಉಪಾಧ್ಯಕ್ಷ ಹರಚರಣ್ ಸಿಂಗ್ ಹುಧಿಯಾರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ 18 ಮಂದಿ ಸದಸ್ಯರಲ್ಲಿ 12 ಮಂದಿ ಸಭೆಯಲ್ಲಿ ಹಾಜರಿದ್ದರು. ತಾರಾಸಿಂಗರು ಉಪವಾಸ ನಿಲ್ಲಿಸಿದ ಬಳಿಕ ಸಮಿತಿಯ ಸಭೆ ನಡೆದುದು ಇದೇ ಮೊದಲು.

15 ವರ್ಷಗಳಲ್ಲಿ ಕ್ಷಯರೋಗ ಪೂರ್ಣ ಹತೋಟಿಗೆ
ಬೆಂಗಳೂರು, ಅ. 15 - ಸಾಕಷ್ಟು ಸಾಧನೆಗಳನ್ನೊ ದಗಿಸಿಕೊಂಡು, ತೀವ್ರ ರೀತಿಯ ನಿವಾರಣಾ ಕ್ರಮ ಕೈಗೊಳ್ಳುವ ಮೂಲಕ ಇನ್ನು ಹದಿನೈದು ವರ್ಷಗಳಲ್ಲಿ ಕ್ಷಯರೋಗದ ಹಾವಳಿಯನ್ನು ಹತೋಟಿಗೆ ತರುವ ಸಾಧ್ಯತೆ ಬಗ್ಗೆ ವಿಶ್ವಾಸವನ್ನು ಕೇಂದ್ರದ ಆರೋಗ್ಯ ಸಚಿವ ಶ್ರೀ ಡಿ. ಸಿ. ಕರಮರಕರ್‌ರವರು ಇಂದು ಇಲ್ಲಿ ವ್ಯಕ್ತಪಡಿಸಿದರು.

ಆಸ್ಪತ್ರೆಯಿಂದ ಮೆನನ್ ವಾಪಸ್
ನ್ಯೂಯಾರ್ಕ್, ಅ. 15 - ಶಸ್ತ್ರಚಿಕಿತ್ಸೆ ನಡೆದ ಒಂದು ವಾರದ ನಂತರ ಭಾರತದ ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್‌ರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ, ತಮ್ಮ ಹೋಟೆಲಿಗೆ ವಾಪಸಾದರು. ಸಾಧ್ಯವಾದಷ್ಟು ಹೆಚ್ಚು ವಿಶ್ರಾಂತಿ ತೆಗೆದು ಕೊಳ್ಳುವಂತೆ ಶ್ರೀ ಮೆನನ್‌ರಿಗೆ ಅವರ ಡಾಕ್ಟರು ಸಲಹೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.