ADVERTISEMENT

ಭಾಷೆಗಳಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ಮೂಲ ದ್ರಾವಿಡದಿಂದ ಪ್ರತ್ಯೇಕಗೊಂಡು ಸ್ವತಂತ್ರ ಅಸ್ತಿತ್ವ ಗಳಿಸಿಕೊಂಡ ರಾಜ್ಯದ ಎರಡು ಪ್ರಮುಖ ಭಾಷೆಗಳಾದ ತುಳು ಮತ್ತು ಕೊಡವ ಬಳಕೆಯ ಉತ್ತೇಜನವಿಲ್ಲದೆ ನಶಿಸುತ್ತಿವೆ. ಯುನೆಸ್ಕೊ ಪಟ್ಟಿ ಮಾಡಿರುವ ಭಾರತದಲ್ಲಿ ವಿನಾಶದ ಅಂಚಿಗೆ ಬಂದ 59 ಭಾಷೆಗಳಲ್ಲಿ ಇವು ಸೇರಿವೆ.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಹೊಸದಾಗಿ ರೂಪಿಸಿದ ಭಾರತ ಭಾಷಾ ವಿಕಾಸ ಯೋಜನೆಯ ಅಡಿಯಲ್ಲಿ ಈ ಭಾಷೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಆಸಕ್ತಿ ವಹಿಸಿರುವುದು ಸ್ವಾಗತಾರ್ಹ ಸಂಗತಿ.

ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಮೂಲಕ ತುಳು ಮತ್ತು ಕೊಡವ ಭಾಷೆಗಳಿಗೆ ಸಂಬಂಧಿಸಿ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಜಾರಿಗೆ ತರುವ ಉದ್ದೇಶ, ಭಾಷಿಕ ಪ್ರದೇಶಗಳ ಸಾಮೀಪ್ಯದ ದೃಷ್ಟಿಯಿಂದಲೂ ಪ್ರಾಯೋಗಿಕವಾದದ್ದು. 

ಕರ್ನಾಟಕದ ಆರು ಕೋಟಿ ಜನಸಂಖ್ಯೆಯಲ್ಲಿ ಈ ಎರಡೂ ಭಾಷೆಗಳನ್ನು ಮಾತೃಭಾಷೆಯಾಗಿ ಆಡುವ ಜನರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದ್ದರೂ ವ್ಯಾವಹಾರಿಕ ನೆಲೆಯಲ್ಲಿ ತುಳು ಇಲ್ಲವೆ ಕೊಡವ ಭಾಷೆಗಳ ಬಳಕೆಗೆ ಪ್ರೋತ್ಸಾಹ ಇಲ್ಲದ ಪರಿಸ್ಥಿತಿ ಅವುಗಳ ಅಸ್ತಿತ್ವಕ್ಕೆ ಧಕ್ಕೆ ತಂದಿರುವುದು ವಾಸ್ತವ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆಯ ಬೇಡಿಕೆ ಇನ್ನೂ ಈಡೇರಿಲ್ಲ.   

ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ತುಳುವಿನ `ಊರುಡು ನಂಜಿ ಆಂಡ, ಪಾರ್‌ದ್ ಬದ್ಕೊಡು~ (ಊರಲ್ಲಿ ಕಷ್ಟವಾದರೆ ಓಡಿ ಬದುಕುವುದು) ಗಾದೆಯಂತೆ ಜಗತ್ತಿನೆಲ್ಲೆಡೆಗೆ ಬದುಕನ್ನು ಅರಸಿ ಹೋಗಿ ನೆಲೆಸಿರುವವರನ್ನೂ ಸೇರಿಸಿದರೆ ತುಳು ಭಾಷಿಕರ ಸಂಖ್ಯೆ ಐವತ್ತು ಲಕ್ಷ ಮುಟ್ಟುತ್ತದೆ. ಕೊಡವ ಭಾಷಿಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ.
 
ಬೋಡೊ, ನೇಪಾಳಿ, ಮಣಿಪುರಿಯಂಥ ಹದಿನೈದು ಇಪ್ಪತ್ತು ಲಕ್ಷ ಜನ ಮಾತಾಡುವ ಭಾಷೆಗಳಿಗೆ ಸಂವಿಧಾನದಲ್ಲಿ ಅಧಿಕೃತ ಭಾಷಾ ಮಾನ್ಯತೆ ನೀಡಿರುವ ಕೇಂದ್ರ ಸರ್ಕಾರ, ತುಳು ಮತ್ತು ಕೊಡವ ಭಾಷೆಗಳ ಕುರಿತ ಬೇಡಿಕೆಯನ್ನು ಕಡೆಗಣಿಸಿದೆ.

ಕರಾವಳಿ ಜಿಲ್ಲೆಗಳು ಮತ್ತು ಅವುಗಳಿಗೆ ಹೊಂದಿಕೊಂಡ ಕೊಡಗಿನಲ್ಲಿ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಕಲಿಕೆಗೆ ಒತ್ತಾಸೆಯೇ ಇಲ್ಲದಿರುವಾಗ ಲೌಕಿಕವಾಗಿ ಪ್ರಯೋಜನಕಾರಿಯಲ್ಲದ ಸ್ಥಳೀಯ ಭಾಷಾ ಕಲಿಕೆಗೆ ಬೇಡಿಕೆಯೇ ಇಲ್ಲ. ಇದರ ಪರಿಣಾಮ ಎರಡೂ ಭಾಷೆಗಳು ಕ್ರಮೇಣವಾಗಿ ವಿನಾಶದ ಅಂಚಿಗೆ ಜಾರುತ್ತಿವೆ.

ಕ್ರಿ.ಪೂ. ಎರಡನೇ ಶತಮಾನದಿಂದ ಬೆಳೆದು ಬಂದಿರುವ ತುಳುವಿನಲ್ಲಿ ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯೂ ನಡೆದಿದೆ. ದ್ವಿಭಾಷಾ ಪ್ರದೇಶವಾಗಿದ್ದರೂ ವ್ಯಾವಹಾರಿಕ ಪ್ರಯೋಜನಕ್ಕೆ ರಾಜ್ಯದ ಭಾಷೆಯಾದ ಕನ್ನಡದ ಜೊತೆಗೆ ಇಂಗ್ಲಿಷನ್ನು ಕಲಿಯಲೇಬೇಕಾದ ಒತ್ತಡ ಇರುವುದರಿಂದ ಮಾತೃಭಾಷೆಯನ್ನು ಕಲಿತು ವ್ಯವಹರಿಸಬೇಕೆನ್ನುವ ಅನಿವಾರ‌್ಯತೆ ಇಲ್ಲ.

ಇದೇ ಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಈ ಎರಡೂ ಭಾಷೆಗಳೂ ಇತಿಹಾಸವನ್ನು ಸೇರುವ ಆತಂಕವಿದೆ. ಈ ನಿಟ್ಟಿನಲ್ಲಿ ಭಾರತ ಭಾಷಾ ವಿಕಾಸ ಯೋಜನೆ ಉಪಯುಕ್ತ. ಇದರ ಕಾರ‌್ಯಕ್ರಮಗಳಲ್ಲಿ ತುಳು ಮತ್ತು ಕೊಡವ ಭಾಷೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ವಿದ್ವಾಂಸರನ್ನು ಬಳಸಿಕೊಳ್ಳುವುದು ಪ್ರಯೋಜನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.