ADVERTISEMENT

ಮತದಾರರು ಕಲಿಸಿದ ಪಾಠ ಜನಪರ ಆಡಳಿತ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಮತದಾರರು ಕಲಿಸಿದ ಪಾಠ ಜನಪರ ಆಡಳಿತ ಆದ್ಯತೆಯಾಗಲಿ
ಮತದಾರರು ಕಲಿಸಿದ ಪಾಠ ಜನಪರ ಆಡಳಿತ ಆದ್ಯತೆಯಾಗಲಿ   

ರಾಜ್ಯದಲ್ಲಿ ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಸರ್ಕಾರ ರಚನೆಗೆ ಮತ್ತೆ ರಾಜಕೀಯ ಆಟ ಶುರುವಾಗಿದೆ. ಫಲಿತಾಂಶವನ್ನು ನೋಡಿದರೆ ಎಲ್ಲ ರಾಜಕೀಯ ಪಕ್ಷಗಳಿಗೂ ಮತದಾರರು ತಕ್ಕ ಪಾಠವನ್ನೇ ಕಲಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ‘ನಾವೇ ಸರ್ಕಾರ ರಚಿಸುತ್ತೇವೆ, ಮುಖ್ಯಮಂತ್ರಿಯಾಗಿ ನಾನೇ ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದು ಫಲಿತಾಂಶಕ್ಕೆ ಮುನ್ನವೇ ಹೇಳಿಕೊಂಡವರಿಗೆ ಮುಖಭಂಗವಾಗಿದೆ. ಯಾವುದೇ ಅಲೆಗಳಿಲ್ಲದೆ, ನಿರ್ದಿಷ್ಟ ವಿಷಯಗಳೂ ಇಲ್ಲದೇ ನಡೆದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ವಿಷಯಗಳಿಗಿಂತ ಸ್ಥಳೀಯ ವಿಷಯಗಳೇ ಪ್ರಾಮುಖ್ಯ ಪಡೆದಿದ್ದವು ಎನ್ನುವುದು ಸ್ಪಷ್ಟ. ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಕಪಾಳ ಮೋಕ್ಷವನ್ನೇ ಮಾಡಿದ್ದಾರೆ. ನುಡಿದಂತೆ ನಡೆದಿದ್ದೇವೆ, ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದೇವೆ, ಸಾಮಾಜಿಕ ನ್ಯಾಯದ ಆಧಾರದಲ್ಲಿ ಮುಂದಡಿ ಇಟ್ಟಿದ್ದೇವೆ, ಭಾಗ್ಯಗಳ ಸರಮಾಲೆಯನ್ನೇ ಜೋಡಿಸಿದ್ದೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ ಸೋತಿದೆ. ಯಾವುದೇ ಒಂದು ಸಮುದಾಯವನ್ನು ಅಥವಾ ಕೆಲವೇ ಜಾತಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿದರೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯದ ಮತದಾರ ನೀಡಿದ್ದಾನೆ.

ಈ ಬಾರಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ. ಆದರೆ ಇದು ಒಳಪ್ರವಾಹವಾಗಿತ್ತು ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ‘ಅಹಿಂದ’ ವರ್ಗದ ಓಲೈಕೆಯ ಭರದಲ್ಲಿ ಇತರ ವರ್ಗದವರನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷ ಬೆಲೆ ತೆತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣರನ್ನು ಕಡೆಗಣಿಸಿದೆ ಎಂಬ ಭಾವನೆ ಬಲವಾಗಿ ಇತ್ತು. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವಾಗಿಯೇ ಏಟು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಅಂತರದಿಂದಲೇ ಸೋಲು ಕಂಡಿದ್ದಾರೆ. ಅವರ ಸಂಪುಟದ ಹಲವರು ಸಚಿವರೂ ಸೋತಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರೂ ಒಟ್ಟಾರೆ ಫಲಿತಾಂಶ ಅವರಿಗೆ ನೈತಿಕ ಸೋಲಿನ ಉಡುಗೊರೆಯನ್ನೇ ನೀಡಿದೆ. ಲಿಂಗಾಯತ ಸ್ವತಂತ್ರ ಧರ್ಮ, ಕನ್ನಡ ಬಾವುಟ ವಿಷಯಗಳೂ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಡಲಿಲ್ಲ. ಲಿಂಗಾಯತರು ಈಗಲೂ ಬಿಜೆಪಿ ಪರವಾಗಿಯೇ ನಿಂತಿದ್ದಾರೆ. ಒಕ್ಕಲಿಗರು ಜಾತ್ಯತೀತ ಜನತಾ ದಳದ ಪರವಾಗಿ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ರಾಜ್ಯದ ಈ ಎರಡು ಪ್ರಮುಖ ಸಮುದಾಯಗಳು ಎರಡು ಪಕ್ಷಗಳ ಜತೆ ಗುರುತಿಸಿಕೊಂಡದ್ದು ಒಂದೆಡೆಯಾದರೆ ಎಲ್ಲ ಹಿಂದುಳಿದ ಜಾತಿಗಳು, ದಲಿತರು ಯಾವುದೇ ಒಂದು ಪಕ್ಷದ ಪರವಾಗಿ ಒಗ್ಗೂಡದೇ ಇರುವುದು ಈ ಫಲಿತಾಂಶ ಬರಲು ಕಾರಣವಾಗಿದೆ.

ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಆದರೆ ಅದಕ್ಕೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಬೇಕಾದಷ್ಟು ಸದಸ್ಯರ ಬಲ ಇಲ್ಲ. ಆದರೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಜೊತೆಗೆ 10 ದಿನದ ಕಾಲಾವಕಾಶವನ್ನೂ ಕೇಳಿದೆ. ಆದರೆ ಗೋವಾ ಮತ್ತು ಮೇಘಾಲಯದಲ್ಲಿ ಸರ್ಕಾರ ರಚನೆಗೆ ನಿಧಾನಗತಿ ಅನುಸರಿಸಿ ಅವಕಾಶ ಕಳೆದುಕೊಂಡಿದ್ದ ಕಾಂಗ್ರೆಸ್ ಇಲ್ಲಿ ಎಚ್ಚೆತ್ತುಕೊಂಡಿದೆ. ಫಲಿತಾಂಶ ಪ್ರಕಟವಾದ ತಕ್ಷಣವೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಈ ಎರಡೂ ಪಕ್ಷಗಳ ಮುಖಂಡರು ರಾಜ್ಯಪಾಲರನ್ನು ಕೋರಿದ್ದಾರೆ. ಸರ್ಕಾರ ರಚನೆಗೆ ಅಗತ್ಯವಾದ ಸದಸ್ಯರ ಬೆಂಬಲ ಬಿಜೆಪಿಗೆ ದೊರಕುವುದು ಕಠಿಣವಾಗಿದ್ದರಿಂದ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟಕ್ಕೆ ರಾಜ್ಯಪಾಲರು ಅವಕಾಶ ನೀಡುವುದು ಅನಿವಾರ್ಯವಾಗಲಿದೆ. ರಾಜ್ಯದ ಮತದಾರ ನೀಡಿದ ಫಲಿತಾಂಶದ ಒಳನೋಟಗಳನ್ನು ಅರ್ಥ ಮಾಡಿಕೊಂಡು ಜನಪರವಾದ ಆಡಳಿತ ನೀಡುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.