ADVERTISEMENT

ಮತ್ತಷ್ಟು ನಿಗೂಢ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಮಲೇಷ್ಯಾದ ಪ್ರಯಾಣಿಕ ವಿಮಾನದ ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗುತ್ತಲೇ ನಡೆದಿದೆ. ಈಗ ಮೊದಲ ಬಾರಿ ಈ ಬಗ್ಗೆ ಮಾತನಾಡಿರುವ ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಅವರ ಪ್ರಕಾರ, ಈ ವಿಮಾನದಲ್ಲಿನ ಟ್ರಾನ್ಸ್‌ಪಾಂಡರ್ ಮತ್ತಿತರ ಸಂಪರ್ಕ ಸಾಧನ­ಗಳನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಲಾಗಿದೆ.

ಅಲ್ಲದೆ ರೇಡಾರ್ ಸಂಪರ್ಕದಿಂದ ತಪ್ಪಿಸಿಕೊಂಡ ನಂತರ ಸುಮಾರು ಏಳೂವರೆ ತಾಸು ಹಾರಾಟ ನಡೆಸಿದ್ದು ಸಾಗಬೇಕಾದ ಪಥ ಬಿಟ್ಟು ಇನ್ನೊಂದು ಮಾರ್ಗದಲ್ಲಿ ವಿಮಾನ ಸಂಚರಿಸಿದೆ. ಸಂವಹನದ ಉಪಕರಣಗಳನ್ನು ಬಂದ್ ಮಾಡಿ ದಿಕ್ಕನ್ನೇ ಬದಲಿಸುವುದರ ಹಿಂದೆ ಯಾವುದೋ ನಿರ್ದಿಷ್ಟ ಉದ್ದೇಶ ಇರ­ಬ­ಹುದು ಎಂಬ ಅನುಮಾನ ಈಗ ದಟ್ಟವಾಗುತ್ತಿದೆ.

ವಿಮಾನದಲ್ಲಿ ಇರುವ ಯಾರೋ ನುರಿತವರ ಕೈವಾಡ ಇದು ಎಂಬ ಶಂಕೆಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾ­ಗಿದೆ. ನಾಪತ್ತೆಯಾದ ಐದು ತಾಸಿನ ನಂತರ ಬ್ರಿಟನ್‌ನ ದೂರ­ಸಂಪರ್ಕ ಸೇವಾ ಸಂಸ್ಥೆಯೊಂದರ ಉಪಗ್ರಹಕ್ಕೆ ಈ ವಿಮಾನದಿಂದ ಸಂಕೇತ­ಗಳು ಬಂದಿದ್ದವು ಎಂಬುದು ಈಗ ಬೆಳಕಿಗೆ ಬಂದಿದೆ.

ವಿಮಾನವನ್ನು ಅಪ­ಹರಿಸಿರ­ಬಹುದು ಎಂಬುದನ್ನು ಪ್ರಧಾನಿ ನೇರವಾಗಿ ಹೇಳಿಲ್ಲ. ಆದರೆ ಅವರ ಮಾತು­ಗಳಲ್ಲಿ ಅಂಥ ಅಭಿಪ್ರಾಯ ವ್ಯಕ್ತವಾಗುತ್ತದೆ. ತನಿಖಾಧಿಕಾರಿಗಳು ಮಾತ್ರ ವಿಮಾನ ಅಪಹರಣವಾಗಿದೆ ಎಂದೇ ಹೇಳತೊಡಗಿದ್ದಾರೆ. ಹಾಗಿದ್ದರೆ ಅಪಹರಣಕಾರರ ಉದ್ದೇಶ ಏನು, ಅವರೆಲ್ಲಿದ್ದಾರೆ, ಎಲ್ಲಿ ವಿಮಾನ ಇಳಿಸಿದ್ದಾರೆ, ಈವರೆಗೂ ಯಾರನ್ನೂ ಸಂಪರ್ಕಿಸಿಲ್ಲ ಏಕೆ ಎಂಬ ಪ್ರಶ್ನೆಗಳು ಹಾಗೇ ಉಳಿಯುತ್ತವೆ. ಶನಿವಾರ ಮಲೇಷ್ಯಾ ಪ್ರಧಾನಿಯ ಪತ್ರಿಕಾ­ಗೋಷ್ಠಿಯ ಬೆನ್ನಲ್ಲೇ ಪೊಲೀಸರು ವಿಮಾನದ ಮುಖ್ಯ ಚಾಲಕನ ಮನೆಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಇಷ್ಟಾದರೂ ಈ ಹುಡುಕಾಟದಲ್ಲಿ ಎಳ್ಳಷ್ಟೂ ಪ್ರಗತಿಯಾಗಿಲ್ಲ.

ಈ ವಿಮಾನ ಎಲ್ಲಿ ಹೋಯಿತು, ಏನಾಯಿತು ಎಂಬುದನ್ನು ತಿಳಿಯಲು  ವಿಶ್ವವೇ ಕಾತರದಿಂದಿದೆ. ಅಮೆರಿಕ ಸೇರಿದಂತೆ 14 ದೇಶಗಳು ಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ರೇಡಾರ್‌ಗಳು, ಭೂಮಿಯ ಇಂಚಿಂಚು ಜಾಗವನ್ನೂ ಬಿಡದ ಕಣ್ಗಾವಲು ಉಪಗ್ರಹಗಳು, ಅತ್ಯಾಧುನಿಕ ಸಂಪರ್ಕ ಸಾಧನಗಳನ್ನೆಲ್ಲ ಬಳಸಿಕೊಳ್ಳಲಾಗಿದೆ. 43 ಹಡಗು, 58 ವಿಮಾನ, ಸಾವಿರಾರು ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ಸುತ್ತಲಿನ ಪ್ರದೇಶಗಳು, ವಿಶಾಲ ಸಾಗರ­ವನ್ನು ಜಾಲಾಡುತ್ತಲೇ ಇದ್ದಾರೆ. ಆದರೆ ಆಶಾದಾಯಕ ಫಲಿತಾಂಶ­ವಂತೂ ಇನ್ನೂ ಸಿಕ್ಕಿಲ್ಲ.

ಹೀಗಾಗಿ ಪತ್ತೆ ಕಾರ್ಯದಿಂದ ಹಿಂದೆ ಸರಿಯಲು ವಿಯೆಟ್ನಾಂ ನಿರ್ಧರಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಮುಂದು­ವರಿದಿದ್ದರೂ ಕೆಲವೊಂದು ವಿಷಯಗಳಲ್ಲಿ ಮನುಷ್ಯ ಎಷ್ಟೊಂದು ಅಸ­ಹಾ­ಯಕ ಎಂಬುದನ್ನು ಈ ವಿಮಾನ ನಾಪತ್ತೆ ಪ್ರಕರಣ ಮತ್ತೊಮ್ಮೆ ತೋರಿಸಿದೆ. 9 ದಿನ ಕಳೆದರೂ  ವಿಮಾನದ ಇರುವಿಕೆ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎನ್ನು­ವುದು ನಮ್ಮ ತಾಂತ್ರಿಕತೆಗೂ ಒಂದು ಮಿತಿಯಿದೆ ಎನ್ನುವುದನ್ನು ನೆನಪಿಸು­ವುದರ ಜತೆಗೆ ನಮ್ಮ ಅಹಮಿಕೆಗೆ ಬಿದ್ದ ಭಾರಿ ಪೆಟ್ಟು.

ಇಂಥ ಸನ್ನಿವೇಶ­ದಲ್ಲಿ ವಿಮಾನದಲ್ಲಿದ್ದ ತಮ್ಮ ಬಂಧು ಬಾಂಧವರ ಗತಿ ಏನಾಗಿದೆ ಎಂದು ತಿಳಿಯದೆ ವೇದನೆ ಅನುಭವಿಸುತ್ತಿರುವ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸುವುದನ್ನು ಬಿಟ್ಟು ಬೇರೇನೂ ಮಾಡದಷ್ಟು ನಿಸ್ಸಹಾಯಕತೆಯಲ್ಲಿ ಇಡೀ ವಿಶ್ವ ಇದೆ. ವಿಮಾನ ಬೇಗ ಪತ್ತೆಯಾಗಲಿ, ಅದರಲ್ಲಿ ಇದ್ದವರೆಲ್ಲ ಸುರಕ್ಷಿತವಾಗಿ ಬರಲಿ ಎಂದು ಹಾರೈಸುವುದೊಂದೇ ನಮಗೆ ಉಳಿದಿರುವ ದಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT