ADVERTISEMENT

ಮದ್ಯದಂಗಡಿ ಬಂದ್ ಪರಿಣಾಮ ಸರ್ಕಾರದ ಕರ್ತವ್ಯ ಲೋಪ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಮದ್ಯದಂಗಡಿ ಬಂದ್ ಪರಿಣಾಮ ಸರ್ಕಾರದ ಕರ್ತವ್ಯ ಲೋಪ ಅಕ್ಷಮ್ಯ
ಮದ್ಯದಂಗಡಿ ಬಂದ್ ಪರಿಣಾಮ ಸರ್ಕಾರದ ಕರ್ತವ್ಯ ಲೋಪ ಅಕ್ಷಮ್ಯ   

ಸುಪ್ರೀಂ ಕೋರ್ಟ್ ಸೂಚನೆಗೆ ಅನುಗುಣವಾಗಿ ನಗರ ಪ್ರದೇಶಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಇಕ್ಕೆಲಗಳ 500 ಮೀಟರ್‌ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 220 ಮೀಟರ್‌ ವ್ಯಾಪ್ತಿಯಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚಿದ ಕಾರಣ ನಮ್ಮ ರಾಜ್ಯದಲ್ಲಿ ಸುಮಾರು 1 ಲಕ್ಷ ಮಂದಿಯ ಉದ್ಯೋಗಕ್ಕೆ ಕಲ್ಲು ಬಿದ್ದಿದೆ. ಇದು ನೇರ ಪರಿಣಾಮ.

ಈ ಉದ್ಯೋಗಿಗಳನ್ನು ಅವಲಂಬಿಸಿದ್ದ ಕುಟುಂಬಗಳನ್ನೂ ಪರಿಗಣಿಸಿದರೆ ಪರೋಕ್ಷ ಪರಿಣಾಮ ಇನ್ನೂ ಜಾಸ್ತಿ, ಇನ್ನೂ ಭೀಕರ. ಬೆಂಗಳೂರು ಮಹಾನಗರದಲ್ಲಂತೂ ವಿಚಿತ್ರವಾದ ಪರಿಸ್ಥಿತಿ. ಈ ನಗರದ ಹೃದಯ ಭಾಗ ಮತ್ತು ಚಟುವಟಿಕೆಯ ಕೇಂದ್ರ ಎನಿಸಿಕೊಂಡ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯಂತಹವು   ನಗರರಸ್ತೆಗಳ ರೀತಿ ಜನಸಂದಣಿಯಿಂದ ತುಂಬಿದ್ದರೂ  ರಾಷ್ಟ್ರೀಯ ಹೆದ್ದಾರಿಯ ವ್ಯಾಖ್ಯೆಗೆ ಒಳಪಟ್ಟಿವೆ.

ಈ ರಸ್ತೆಗಳಲ್ಲಿ ಟ್ರಕ್‌ಗಳ ಸಂಚಾರಕ್ಕೆ ಅವಕಾಶವಿಲ್ಲ. ದೂರದ ಊರುಗಳಿಗೆ ತೆರಳುವ ದೊಡ್ಡ ವಾಹನಗಳೂ ಈ ರಸ್ತೆಗಳಲ್ಲಿ ಸಂಚರಿಸುವುದಿಲ್ಲ. ಹೀಗಿದ್ದೂ  ತಾಂತ್ರಿಕವಾಗಿ ನಿಯಮಗಳ  ಪ್ರಕಾರ  ಇಲ್ಲೂ ಬಾರ್‌ಗಳು ಮತ್ತು ಪಬ್‌ಗಳಲ್ಲಿ ಮದ್ಯ ಮಾರಾಟ ಬಂದಾಗಿದೆ. ಇದರಿಂದ ಒಂದೂವರೆ ಸಾವಿರಕ್ಕೂ ಹೆಚ್ಚು ಬಾರ್‌ ಗರ್ಲ್‌ಗಳು ನಿರುದ್ಯೋಗಿಗಳಾಗಿದ್ದಾರೆ. ಅಷ್ಟೇ ಅಲ್ಲ ವಿಶ್ವದ ವಿವಿಧ ದೇಶಗಳ ಜನ ವಾಸಿಸುತ್ತಿದ್ದು  ‘ಸಿಲಿಕಾನ್‌ ಸಿಟಿ’, ‘ಪಬ್ ಸಿಟಿ’ ಎಂಬ ಖ್ಯಾತಿ ಪಡೆದುಕೊಂಡ ಬ್ರ್ಯಾಂಡ್ ಬೆಂಗಳೂರು  ವರ್ಚಸ್ಸಿಗೂ ಧಕ್ಕೆ ಬಂದಿದೆ.   ಇದು ಮದ್ಯ ಮಾರಾಟದ ಮೇಲಷ್ಟೇ ಅಲ್ಲದೆ ಇತರ ವ್ಯಾಪಾರ, ವಾಣಿಜ್ಯ ವಹಿವಾಟಿನ ಮೇಲೂ ಕರಿನೆರಳು ಚಾಚಲಿದೆ.

ADVERTISEMENT

ಇದನ್ನೆಲ್ಲ ನೋಡಿದರೆ ರಾಜ್ಯ ಸರ್ಕಾರದ ವೈಫಲ್ಯ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತದೆ. ಏಕೆಂದರೆ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದದ್ದು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ. ಈಗಾಗಲೇ  ಹಲವು ತಿಂಗಳುಗಳೇ ಕಳೆದಿವೆ. ಜೂನ್‌ 30ರ ಒಳಗೆ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂಬುದು ಆಡಳಿತಯಂತ್ರಕ್ಕೆ ಗೊತ್ತಿರಬೇಕಿತ್ತು.

ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಕಷ್ಟ, ಅದರ ಪರಿಣಾಮ ಏನಾಗಬಹುದು, ಅದನ್ನು ಎದುರಿಸುವ ಬಗೆ ಹೇಗೆ ಎಂಬುದರ ಕಡೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಕೊಡಬೇಕಾಗಿತ್ತು; ಆದರೆ ಕೊಡಲಿಲ್ಲ. ಎಂದಿನ ನಿಷ್ಕ್ರಿಯತೆ, ಆಲಸ್ಯ ತೋರುತ್ತಲೇ ಬಂದರು.   ಅದು ಈಗ ಲಕ್ಷಾಂತರ ಜನರ ಬದುಕು ಕಸಿದುಕೊಂಡಿದೆ. ಪರ್ಯಾಯ ಉದ್ಯೋಗವೂ  ಇಲ್ಲದೆ ಅವರ ಜೀವನ  ಅನಿಶ್ಚಿತವಾಗಿದೆ. 

ಅಂಕಿಅಂಶಗಳನ್ನು ಆಧರಿಸಿ ಹೇಳುವುದಾದರೆ  ರಾಜ್ಯದಲ್ಲಿ  10,165 ಮದ್ಯದಂಗಡಿಗಳು, ಬಾರ್‌ಗಳಿವೆ. ಈ  ಪೈಕಿ ಹೆದ್ದಾರಿ ವ್ಯಾಪ್ತಿಯಲ್ಲಿರುವ ಕಾರಣ ಮುಚ್ಚಿದ ಅಂಗಡಿಗಳು, ಬಾರ್‌ಗಳ ಸಂಖ್ಯೆ 3,515. ಅಂದರೆ ಸರಿಸುಮಾರು ಮೂರನೇ ಒಂದರಷ್ಟು. ಈ ವರ್ಷದ ಬಜೆಟ್‌ನಲ್ಲಿ ಅಬಕಾರಿಯಿಂದ ನಿರೀಕ್ಷಿಸಿದ್ದ ವರಮಾನ ₹ 18,050 ಕೋಟಿ. ಅದಕ್ಕೆ ದೊಡ್ಡ ಪ್ರಮಾಣದಲ್ಲಿಯೇ ಖೋತಾ ಬೀಳುತ್ತದೆ.

ಸ್ಥಿತಿ ಇಷ್ಟೆಲ್ಲ ಗಂಭೀರವಾಗಿದ್ದರೂ ರಾಜ್ಯ ಸರ್ಕಾರ ತೂಕಡಿಕೆಯಿಂದ ಎದ್ದೇ ಇಲ್ಲ. ಪರ್ಯಾಯ ಹಾದಿ ಹುಡುಕುವ, ಕೆಲಸ ಕಳೆದುಕೊಂಡವರಿಗೆ ಪರ್ಯಾಯ ಬದುಕು ಕಲ್ಪಿಸುವ ಹೊಣೆ ತನ್ನ ಮೇಲಿದೆ ಎನ್ನುವುದೇ ಅದಕ್ಕೆ ಮರೆತು ಹೋಗಿದೆ. ಈ ಹಿಂದೆ ಸೇಂದಿ ಇಳಿಸುವುದನ್ನು ನಿಷೇಧಿಸಿದಾಗ, ಸಾರಾಯಿ ಮಾರಾಟ ನಿರ್ಬಂಧಿಸಿದಾಗ ಕೂಡ ಲಕ್ಷಾಂತರ ಮಂದಿ ಉದ್ಯೋಗ ವಂಚಿತರಾಗಿದ್ದರು.   ಅವರ ಸಾಲಿಗೆ ಈಗ ಮತ್ತೆ ಲಕ್ಷದಷ್ಟು ಜನ ಸೇರ್ಪಡೆಯಾದಂತಾಗಿದೆ.

ಮದ್ಯದಂಗಡಿಗಳನ್ನು ಮುಚ್ಚಿಸುವ ಸುಪ್ರೀಂ ಕೋರ್ಟ್ ಆದೇಶ ಸದುದ್ದೇಶದಿಂದ ಕೂಡಿದೆ. ಕುಡಿದು ಹೆದ್ದಾರಿಗಳಲ್ಲಿ ವಾಹನ ಓಡಿಸುವುದನ್ನು ತಪ್ಪಿಸಬೇಕು ಎನ್ನುವುದು ಅದರ ಕಳಕಳಿ. ಕುಡುಕ ಚಾಲಕರಿಂದ ಆಗುತ್ತಿರುವ ಅನಾಹುತ ತಪ್ಪಿಸುವ ಯತ್ನ ಇಲ್ಲಿದೆ. ಅನೇಕ  ರಸ್ತೆ ಅಪಘಾತಗಳಿಗೆ ಕುಡಿದು ವಾಹನ ಓಡಿಸುವುದೂ ಮುಖ್ಯ ಕಾರಣ . ಇದರಿಂದ ಆಸ್ತಿ ಮಾತ್ರವಲ್ಲದೆ ಅಮೂಲ್ಯ ಜೀವ ಹಾನಿಯೂ ಆಗುತ್ತಿದೆ. 

ಇದನ್ನೆಲ್ಲ ನಿಯಂತ್ರಿಸಲು ಸುಪ್ರೀಂ ಕೋರ್ಟ್ ಈ ಕ್ರಮ ಪ್ರಕಟಿಸಿದೆ. ಆದರೆ ಸಂಚಾರ ಸುರಕ್ಷತೆಗಾಗಿ ಅಸ್ತಿತ್ವದಲ್ಲಿರುವ ಅನೇಕ ಕಾಯ್ದೆಗಳ ಅನುಷ್ಠಾನ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದನ್ನೂ ಗಮನಿಸಬೇಕು. ಈ ಲೋಪಗಳನ್ನೆಲ್ಲ ಸರಿಪಡಿಸುವುದೂ ಅಗತ್ಯ. ಈ ಎಲ್ಲಾ ವಿಚಾರಗಳ ಬಗ್ಗೆ ಕಾಳಜಿ ವಹಿಸಬೇಕಾಗಿದ್ದ ಸರ್ಕಾರದ ಕರ್ತವ್ಯ ಲೋಪ ಮಾತ್ರ ಅಕ್ಷಮ್ಯ. ಇಲ್ಲಿ ಅದು ಸಂಪೂರ್ಣವಾಗಿ ಎಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.