ADVERTISEMENT

ಮಲೆನಾಡು ಸಂರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 15:45 IST
Last Updated 23 ಫೆಬ್ರುವರಿ 2011, 15:45 IST

ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪರಿಸರ ಅಸಮತೋಲನದ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶದಲ್ಲಿನ ನಿಜವಾದ ನೈಸರ್ಗಿಕ ಸೊಬಗನ್ನು ಉಳಿಸಲು ಅಲ್ಲಿ ಕೈಗೊಳ್ಳಬೇಕಾದ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಮತೋಲನ ಕಾಪಾಡಲು ರಾಜ್ಯ ಸರ್ಕಾರ ಆಸಕ್ತಿವಹಿಸಿರುವುದು ಸ್ವಾಗತಾರ್ಹ. ಪಶ್ಚಿಮ ಘಟ್ಟ ಕಾರ್ಯಪಡೆಯ ಶಿಫಾರಸಿನಂತೆ, ಸೂಕ್ಷ್ಮ ಪರಿಸರ ಹೊಂದಿರುವ ಮಲೆನಾಡಿನಲ್ಲಿ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತರಬೇಕಾದರೆ ಮುಖ್ಯವಾಗಿ ಅಲ್ಲಿಗೇ ಪ್ರತ್ಯೇಕವಾಗಿ ಭೂ ಬಳಕೆ ನೀತಿ ರೂಪಿಸಬೇಕು ಎನ್ನುವ ಅಂಶವನ್ನು ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಅಲ್ಲಿನ ಪರಿಸರಕ್ಕೆ ತಕ್ಕಂತೆ ಕೃಷಿ, ಹೈನುಗಾರಿಕೆ ಮತ್ತು ತೋಟಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅಭಿವೃದ್ಧಿ ಹಾಗೂ ಜೈವಿಕ ಪರಿಸರ ಸಂರಕ್ಷಣೆ ಸಮಾನವಾಗಿ ಜೊತೆ ಜೊತೆಯಲ್ಲಿಯೇ ಸಾಗಬೇಕು.

ಯಾವುದೇ ಯೋಜನೆ ರೂಪಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಹಿನ್ನೆಲೆ ಮತ್ತು ಅದರ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಲ್ಲಿನ ಅರಣ್ಯ, ನದಿ, ಪ್ರಾಣಿ ಸಂಕುಲ ನಾಶವಾಗದಂತೆ ಎಚ್ಚರ ವಹಿಸಬೇಕು. ಈ ದಿಶೆಯಲ್ಲಿ ಸರ್ಕಾರಿ ಭೂಮಿಯಲ್ಲಿ ನೀಲಗಿರಿ ಮರ ಬೆಳೆಯುವುದನ್ನು ನಿಷೇಧಿಸಿರುವ ಅರಣ್ಯ ಇಲಾಖೆಯ ಕ್ರಮ ನಿಜಕ್ಕೂ ವಿವೇಚನೆಯಿಂದ ಕೂಡಿದೆ. ಇದನ್ನು ಖಾಸಗಿ ಒಡೆತನದ ಭೂಮಿಯಲ್ಲಿ ಬೆಳೆಯುವುದನ್ನೂ ನಿಷೇಧಿಸಬೇಕು.

ಕೇಂದ್ರದ ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಮೂಲತಃ ಚಿಕ್ಕಮಗಳೂರಿನವರಾದ್ದರಿಂದ ಪಶ್ಚಿಮಘಟ್ಟ ಪ್ರದೇಶ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿರುವುದು ಮೆಚ್ಚುಗೆಯ ಸಂಗತಿ. ಪಶ್ಚಿಮ ಘಟ್ಟ ಪ್ರದೇಶದ ಕೆಲವು ಕಡೆಗಳಲ್ಲಿ ವಿವಿಧ ರೀತಿಯ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಧಕ್ಕೆ ಆಗುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಮತ್ತು ಪೂರ್ವ ಘಟ್ಟ ಪ್ರದೇಶಗಳನ್ನು ಸಂರಕ್ಷಿಸುವ ಜೊತೆಗೆ ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಸಂಬಂಧ ಕಾರ್ಯ ಯೋಜನೆಯೊಂದನ್ನು ನೀಡುವಂತೆ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನೂ ರಚಿಸಲಾಗಿದೆ. ಕರ್ನಾಟಕದ ಮಲೆನಾಡು ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೆರವೂ ಸಿಗುವ ನಿರೀಕ್ಷೆ ಇದೆ. ಇದರ ಜೊತೆಗೆ ಪಶ್ಚಿಮ ಘಟ್ಟ ಪ್ರದೇಶವನ್ನು ಯುನೆಸ್ಕೋದ ಪಾರಂಪರಿಕ ಘಟ್ಟ ಪ್ರದೇಶವನ್ನಾಗಿ ಘೋಷಿಸುವ ಪ್ರಯತ್ನವೂ ನಡೆದಿರುವುದು ಒಂದು ಉತ್ತಮ ಹೆಜ್ಜೆ. ಆದರೆ ಕೊಡಗು ಜಿಲ್ಲೆಯಲ್ಲಿ ಕೆಲವು ಹಿತಾಸಕ್ತ ಗುಂಪುಗಳಿಂದ ಈ ಬಗೆಗೆ ಅಪಪ್ರಚಾರ ನಡೆದಿದ್ದು, ಯುನೆಸ್ಕೋ ತಂಡ ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದಾಗ ಪ್ರತಿಭಟನೆ ಮತ್ತು ಅಸಹಕಾರ ವ್ಯಕ್ತಪಡಿಸಿದ್ದು ದುರದೃಷ್ಟಕರ. ಅಪರೂಪದ ಜೀವ ಸಂಕುಲದ ಉಳಿವಿಗಾಗಿ ಮಲೆನಾಡು ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಹಾಯವಾಗುವ ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ್ಯಪಡೆಯ ಕಾರ್ಯಸಾಧು ಶಿಫಾರಸು ಜಾರಿಗೆ ತರಲು ಸರ್ಕಾರ ಹೆಚ್ಚಿನ ಗಮನ ನೀಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.