ADVERTISEMENT

ಮಾಮೂಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 15:25 IST
Last Updated 21 ಫೆಬ್ರುವರಿ 2011, 15:25 IST

ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರ ರಕ್ಷಣೆ, ಭ್ರಷ್ಟಾಚಾರದ ಹಗರಣಗಳಿಂದ ಕಲುಷಿತಗೊಂಡಿರುವ ಸಾರ್ವಜನಿಕ ಜೀವನವನ್ನು ಪರಿಶುದ್ಧಗೊಳಿಸುವ ದೃಢ ಸಂಕಲ್ಪ, ಅಭಿವೃದ್ಧಿಯ ಪ್ರತಿಫಲ ಪ್ರತಿಯೊಬ್ಬ ಬಡವರಿಗೆ ತಲುಪುವ ದಿಕ್ಕಿನಲ್ಲಿ ಆರ್ಥಿಕ ವೃದ್ಧಿಗೆ ವಿಶೇಷ ಒತ್ತು ಮತ್ತು ಆರ್ಥಿಕ ಸುಧಾರಣೆಗಳನ್ನು ಮತ್ತಷ್ಟು ಜಾರಿಗೆ ತರುವುದೂ ಸೇರಿದಂತೆ ಬರಲಿರುವ ಹಣಕಾಸು ವರ್ಷದಲ್ಲಿ ಯುಪಿಎ ಸರ್ಕಾರದ ಆರ್ಥಿಕ ಮುನ್ನೋಟವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು,

ಸಂಸತ್ತಿನ ಬಜೆಟ್ ಅಧಿವೇಶನದ ಜಂಟಿ ಸದನದ ಮುಂದೆ ಇಟ್ಟಿದ್ದಾರೆ. ಇದೆಲ್ಲ ಇದುವರೆಗೂ ನಡೆದು ಬಂದಿರುವ ಸಾಂಪ್ರದಾಯಿಕ ಭಾಷಣವೇ. ಆದರೆ ಸರ್ಕಾರ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಅಭಿವೃದ್ಧಿಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ರಾಷ್ಟ್ರಪತಿ ಭಾಷಣ ಒಂದು ದಿಕ್ಸೂಚಿ. ಆದ್ದರಿಂದಲೇ ಅವರ ಭಾಷಣಕ್ಕೆ ವಿಶೇಷ ಮನ್ನಣೆ. ಹಣದುಬ್ಬರ ನಿಯಂತ್ರಣ, ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ನಿಗದಿ, ಆಂತರಿಕ ಮತ್ತು ಬಾಹ್ಯ ರಕ್ಷಣೆಗೆ ಯಾರ ಜೊತೆಯೂ ರಾಜಿ ಇಲ್ಲದೆ ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ, ಸಂಸತ್ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳ ಮೀಸಲಾತಿ ನೀಡಿಕೆಗೆ ಮತ್ತೆ ಬದ್ಧತೆ. ಇವುಗಳಲ್ಲಿ ಹೊಸದೇನೂ ಇಲ್ಲ. ಎಲ್ಲವೂ ಹಳೆಯ ಭರವಸೆಗಳೇ.

ಆದರೆ, ಸರ್ಕಾರದ ಪ್ರಾಮಾಣಿಕತೆಯನ್ನೇ ಹರಾಜು ಹಾಕಿರುವ ಕಾಮನ್‌ವೆಲ್ತ್ ಕ್ರೀಡಾ ಕೂಟ, 2ಜಿ ಸ್ಪೆಕ್ಟ್ರಂ ಹಗರಣಗಳ ಬಗೆಗೆ ಏನನ್ನೂ ಮಾತನಾಡದ ರಾಷ್ಟ್ರಪತಿ ಅವರು, ಹಲವು ಭ್ರಷ್ಟಾಚಾರಕ್ಕೆ ಎಡೆಕೊಡುವ ಸಚಿವರ ವಿವೇಚನಾ ಕೋಟಾ ಪದ್ದತಿ ರದ್ದು ಮತ್ತು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಎಷ್ಟೇ ಕ್ರಮ ಕೈಗೊಂಡರೂ, ಭ್ರಷ್ಟವಾಗುತ್ತಿರುವ ಚುನಾವಣಾ ಪದ್ಧತಿಯ ಸುಧಾರಣೆಗೆ ಮತ್ತೆ ಕಸರತ್ತು ನಡೆಸುವ ಯತ್ನ ಹಿಂದಿನಿಂದಲೂ ಕೇಳಿ ಬರುತ್ತಿರುವ ಆಶ್ವಾಸನೆ. ಹಾಗೆಯೇ ಜನರನ್ನು ಹಸಿವಿನಿಂದ ರಕ್ಷಿಸುವುದಕ್ಕಾಗಿ ಆಹಾರ ಭದ್ರತೆಗಾಗಿ ವಿಶೇಷ ಕಾಯ್ದೆ ರಚನೆ ಇನ್ನೂ ಚರ್ಚೆಯಲ್ಲೇ ಉಳಿದಿದೆ.

ಹೊಸ ಹೊಸ ಪದಪುಂಜಗಳ ಪ್ರಯೋಗದಿಂದ ಹೊಸ ಸೀಸೆಯಲ್ಲಿ ಹಳೆಯ ಮದ್ಯವನ್ನೇ ಹಾಕಿದಂತೆ ಹಲವು ಹಳೆಯ ಕಾರ್ಯಕ್ರಮಗಳನ್ನೇ ಪುನರುಚ್ಚರಿಸಲಾಗಿದೆ. ಇದೇನೇ ಇದ್ದರೂ, ಪ್ರಕಟಿತ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದಾಗ ಮಾತ್ರ ಸರ್ಕಾರದ ಆಶಯ ಮತ್ತು ದೂರದೃಷ್ಟಿಯ ಆಲೋಚನೆ ಗರಿಗೆದರಲು ಸಾಧ್ಯ. ಇದಕ್ಕಾಗಿ ಸರ್ಕಾರದ ಸೂತ್ರ ಹಿಡಿದವರಿಗೆ ಇರಬೇಕಾದ ಬದ್ಧತೆ ಮತ್ತು ದಕ್ಷತೆ ಮುಖ್ಯ. ಆದರೆ ಸರ್ಕಾರದ ವರ್ಚಸ್ಸನ್ನೆಲ್ಲ ಹಾಳು ಮಾಡಿರುವ ಭ್ರಷ್ಟಾಚಾರದ ಹಗರಣಗಳ ಬಗೆಗೆ ಮೌನವಾಗಿದ್ದು, ಈಗ ಎಲ್ಲ ವೈಫಲ್ಯಗಳಿಗೆ ಸಮ್ಮಿಶ್ರ ಸರ್ಕಾರದ ರಾಜಿ ಸಂಧಾನವೇ ಕಾರಣ ಎಂದು ಪ್ರಧಾನಿಯಾದವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರೆ ದೇಶದ ಜನತೆ ಕ್ಷಮಿಸುವುದು ಕಷ್ಟ. ಕೇವಲ ಪ್ರಧಾನಿಯೊಬ್ಬರ ಕೈ ಬಾಯಿ ಶುದ್ಧವಾಗಿದ್ದರೆ ಸಾಲದು. ಇಡೀ ಸರ್ಕಾರವೇ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.